ಮೇಕೆದಾಟು ಯೋಜನೆಗೆ ಅನುಮತಿ ಕೋರಿ ಕರ್ನಾಟಕ ಸಲ್ಲಿಸಿದ ಮನವಿಗೆ ತಮಿಳುನಾಡು ವಿರೋಧ

Update: 2019-10-10 16:17 GMT

ಚೆನ್ನೈ/ಬೆಂಗಳೂರು, ಅ. 10: ಮೇಕೆದಾಟುವಿನಲ್ಲಿ ಕಾವೇರಿ ನದಿಗೆ ಜಲಾಶಯ ನಿರ್ಮಿಸುವ ಕರ್ನಾಟಕದ ಪ್ರಸ್ತಾವ ಅಸಮರ್ಥನೀಯ ಹಾಗೂ ಅದನ್ನು ಸಂಪೂರ್ಣವಾಗಿ ತಿರಸ್ಕರಿಸಬೇಕು ಎಂದು ಹೇಳಿರುವ ತಮಿಳುನಾಡು ಸರಕಾರ, ಕರ್ನಾಟಕದ ಹೊಸ ಮನವಿಯ ಹಿನ್ನೆಲೆಯಲ್ಲಿ ಯೋಜನೆಗೆ ಅನುಮತಿ ನೀಡದಿರುವಂತೆ ಕೇಂದ್ರ ಸರಕಾರವನ್ನು ಆಗ್ರಹಿಸಿದೆ.

ಕರ್ನಾಟಕದ ಮೇಕೆದಾಟುವಿನಲ್ಲಿ ಜಲಾಶಯ ನಿರ್ಮಾಣ ಪ್ರಸ್ತಾಪಕ್ಕೆ ವಿರೋಧ ವ್ಯಕ್ತಪಡಿಸಿರುವ ತಮಿಳುನಾಡು ಸರಕಾರ, ಯೋಜನೆ ಕಾರ್ಯರೂಪಕ್ಕೆ ಬಂದರೆ ತೊಂದರೆ ಉಂಟಾಗಲಿದೆ ಎಂದಿದೆ.

ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಹಾಗೂ ಅವರ ಪರಿಸರ ಸಚಿವಾಲಯದ ಸೋದ್ಯೋಗಿ ಪ್ರಕಾಶ್ ಜಾವಡೇಕರ್ ಅವರಿಗೆ ಪತ್ರ ಬರೆದು ಈ ವಿಷಯದ ಕುರಿತ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇರುವುದನ್ನು ನೆನಪಿಸಿದ್ದಾರೆ. ಅಕ್ಟೋಬರ್ 9ರ ದಿನಾಂಕದ ಪತ್ರವನ್ನು ತಮಿಳುನಾಡು ಸರಕಾರ ಗುರುವಾರ ಬಿಡುಗಡೆಗೊಳಿಸಿದೆ.

 ತಾನು ನಿಗದಿಪಡಿಸಿದ ತಿಂಗಳ ವೇಳಾಪಟ್ಟಿಯ ಪ್ರಕಾರ ಕಾವೇರಿ ಜಲಾನಯನ ಪ್ರದೇಶದಲ್ಲಿ ಇರುವ ಸಂಗ್ರಹ ಸೌಲಭ್ಯ ಕರ್ನಾಟಕಕ್ಕೆ ಜಲ ಸಂಗ್ರಹ ಮಾಡಲು ಹಾಗೂ ವಿತರಿಸಲು ಸಾಕಾಗುತ್ತದೆ ಎಂಬುದನ್ನು ಕಾವೇರಿ ಜಲ ವಿವಾದ ನ್ಯಾಯಾಧಿಕರಣ ಹಾಗೂ ಸುಪ್ರೀಂ ಕೋರ್ಟ್ ಕಂಡು ಕೊಂಡಿದೆ. ಅಲ್ಲದೆ ಈ ಯೋಜನೆಗೆ ತಮಿಳುನಾಡು ಹಾಗೂ ಇತರ ಜಲಾನಯನ ಪ್ರದೇಶಗಳ ರಾಜ್ಯಗಳ ಸಮ್ಮತಿ ಪಡೆದಿಲ್ಲ ಎಂದು ಅದು ಹೇಳಿದೆ.

ಪರಿಸರ ಸಚಿವಾಲಯದ ನದಿ ಕಣಿವೆ ಹಾಗೂ ಹೈಡ್ರೊ ಇಲೆಕ್ಟ್ರಿಕ್ ಯೋಜನೆಯ ತಜ್ಞರ ವೌಲ್ಯ ಮಾಪನ ಸಮಿತಿ ಜುಲೈಯ ತನ್ನ ಸಭೆಯಲ್ಲಿ ಕರ್ನಾಟಕದ ಮೇಕೆದಾಟು ಪ್ರಸ್ತಾವವನ್ನು ಮುಂದೂಡಿತ್ತು ಎಂದು ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ನೆನಪಿಸಿದ್ದಾರೆ.

  ನದಿ ಪಾತ್ರದ ಕೆಳಬಾಗದಲ್ಲಿರುವ ರಾಜ್ಯಗಳ ಒಪ್ಪಿಗೆ ಪಡೆಯದೆ ಅಂತರ್ ರಾಜ್ಯ ಜಲಾಶಯ ನಿರ್ಮಾಣ ಮಾಡುವುದಕ್ಕೆ ಯಾವುದೇ ಹಕ್ಕು ಇಲ್ಲದೇ ಇರುವುದರಿಂದ ಕರ್ನಾಟಕದ ಯೋಜನಾ ಪ್ರಸ್ತಾಪಕ್ಕೆ ತಮಿಳುನಾಡು ಸರಕಾರ ವಿರೋಧ ವ್ಯಕ್ತಪಡಿಸಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಟ್ರಿಬ್ಯೂನಲ್‌ನ ಅಂತಿಮ ಆದೇಶ ಹಾಗೂ ಸುಪ್ರೀಂ ಕೋರ್ಟ್ 2018 ಫೆಬ್ರವರಿಯ ತೀರ್ಪಿನ ವಿರುದ್ಧವಿರುವುದರಿಂದ ಕರ್ನಾಟಕದ ಪಸ್ತಾವ ತಿರಸ್ಕರಿಸುವಂತೆ ಮನವಿ ಮಾಡಿ ಜಾವಡೇಕರ್ ಅವರಿಗೆ ಪತ್ರ ಬರೆದಿರುವುದನ್ನು ಪಳನಿಸ್ವಾಮಿ ನೆನಪಿಸಿಕೊಂಡರು.

 ಮೇಕೆದಾಟು ಯೋಜನೆಗೆ ಯಾವುದೇ ಅನುಮತಿ ನೀಡದಂತೆ ಜಲಶಕ್ತಿ ಸಚಿವಾಲಯಕ್ಕೆ ಕಳೆದ ವರ್ಷ ಜುಲೈಯಲ್ಲಿ ಪತ್ರ ಬರೆಯಲಾಗಿದೆ ಎಂದು ಅವರು ಶೇಖಾವತ್‌ಗೆ ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News