ಜರ್ಮನಿ: ಯಹೂದಿಯರನ್ನು ಗುರಿಯಾಗಿಸಿ ನಡೆದ ದಾಳಿಯಲ್ಲಿ 2 ಸಾವು

Update: 2019-10-10 17:52 GMT

ಬರ್ಲಿನ್, ಅ. 10: ಜರ್ಮನಿಯ ಹ್ಯಾಲ್ ನಗರದಲ್ಲಿ ಬುಧವಾರ ಯಹೂದಿಯರ ದೇವಾಲಯ ಸಿನಗಾಗ್ ಮೇಲೆ ನಡೆದ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ.

ಅದೇ ವೇಳೆ, ಈ ದಾಳಿಯು 35 ನಿಮಿಷಗಳ ಕಾಲ ನೇರಪ್ರಸಾರಗೊಂಡಿದೆ ಹಾಗೂ ಸುಮಾರು 2,200 ಮಂದಿ ವೀಕ್ಷಿಸಿದ್ದಾರೆ ಎಂದು ಆನ್‌ಲೈನ್ ತಾಣ ಟ್ವಿಚ್ ತಿಳಿಸಿದೆ.

‘‘ಬಳಕೆದಾರನು ಈ ಭಯಾನಕ ಕೃತ್ಯವನ್ನು 35 ನಿಮಿಷಗಳ ಕಾಲ ನೇರಪ್ರಸಾರ ಮಾಡಿದನು ಹಾಗೂ ಈ ಅವಧಿಯಲ್ಲಿ ಅದನ್ನು ಸುಮಾರು ಐವರು ನೋಡಿದ್ದಾರೆ ಎಂದು ಲೈವ್‌ಸ್ಟ್ರೀಮ್ ಗೇಮಿಂಗ್ ತಾಣ ‘ಟ್ವಿಚ್’ ಟ್ವಿಟರ್‌ನಲ್ಲಿ ಹೇಳಿದೆ.

‘‘ಬಳಕೆದಾರನ ಖಾತೆಯ ಸೆಟ್ಟಿಂಗನ್ನು ಹೊಂದಿಕೊಂಡು ನೇರಪ್ರಸಾರವು ತನ್ನಿಂತಾನೆ ದಾಖಲಾಗುತ್ತದೆ. ಅದನ್ನು 30 ನಿಮಿಷಗಳಲ್ಲಿ 2,200 ಮಂದಿ ನೋಡಿದ್ದಾರೆ. ಬಳಿಕ ಅದು ಸಂಬಂಧಪಟ್ಟವರ ಗಮನಕ್ಕೆ ಬಂತು ಹಾಗೂ ಅದನ್ನು ಟ್ವಿಚ್‌ನಿಂದ ಅಳಿಸಿಹಾಕಲಾಯಿತು’’ ಎಂದು ಅಮೆಝಾನ್ ಒಡೆತನದ ಟ್ವಿಚ್ ತಿಳಿಸಿದೆ.

‘‘ಜಗತ್ತಿನ ಎಲ್ಲ ಸಮಸ್ಯೆಗಳ ಮೂಲ ಯಹೂದಿಯರು’’ ಎಂದು ಹಂತಕನು ಹೇಳುವುದು ವೀಡಿಯೊದಲ್ಲಿ ದಾಖಲಾಗಿದೆ. ಸ್ತ್ರೀವಾದಿ ಮಹಿಳೆಯರ ವಿರುದ್ಧವೂ ಅವನು ಆಕ್ರೋಶ ವ್ಯಕ್ತಪಡಿಸುತ್ತಾನೆ. ಇಂದಿನ ಕಡಿಮೆ ಜನನ ದರ ಮತ್ತು ವಲಸೆಗೆ ಅವರು ಕಾರಣ ಎಂದು ಅವನು ಹೇಳುತ್ತಾನೆ.

ಬಳಿಕ ಬಂದೂಕುಧಾರಿಯು ಮಹಿಳೆಯರು ಮತ್ತು ಯಹೂದಿಯರ ಮೇಲೆ ದಾಳಿ ನಡೆಸುವುದನ್ನು ಹಾಗೂ ಅದನ್ನು ಸ್ವತಃ ಚಿತ್ರೀಕರಿಸುವುದನ್ನು ವೀಡಿಯೊ ತೋರಿಸುತ್ತದೆ. ಬಳಿಕ ಆಕ್ರಮಣಕಾರನು ಹ್ಯಾಲ್ ನಗರದಲ್ಲಿರುವ ಯಹೂದಿಯರ ದೇವಾಲಯ ಸಿನಗಾಗ್ ಮೇಲೆ ದಾಳಿ ನಡೆಸಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News