ವಿರಾಜಪೇಟೆ ತಹಶೀಲ್ದಾರ್ ಪುರಂದರ ಸೇರಿ ಇಬ್ಬರು ಎಸಿಬಿ ಬಲೆಗೆ

Update: 2019-10-11 11:13 GMT
ಪುರಂದರ, ಜಾಗೃತ

ಮಡಿಕೇರಿ : ಎರಡು ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ಆರೋಪದಲ್ಲಿ ವಿರಾಜಪೇಟೆ ತಾಲೂಕು ತಹಶೀಲ್ದಾರ್ ಪುರಂದರ ಹಾಗೂ ದ್ವಿತೀಯ ದರ್ಜೆ ಕಚೇರಿ ಸಹಾಯಕ ಜಾಗೃತ ಅವರನ್ನು ಭ್ರಷ್ಟಾಚಾರ ನಿಗ್ರಹ ದಳ ವಶಕ್ಕೆ ಪಡೆದಿದೆ.

ವಿರಾಜಪೇಟೆ ತಾಲೂಕಿನ ತೂಚಮಕೇರಿ ನಿವಾಸಿ ಎಂ.ಎನ್.ನರೇಂದ್ರ ಎಂಬವರು ತಮ್ಮ ಜಮೀನಿಗೆ ಸಂಬಂಧಿಸಿದ ಭೂ ದಾಖಲೆಯನ್ನು ಪರಿವರ್ತಿಸಿ ಕೊಡುವಂತೆ ಈ ಹಿಂದೆ ವಿರಾಜಪೇಟೆ ತಹಶೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಿದ್ದರು.

ಆದರೆ ಹಲವು ತಿಂಗಳುಗಳೇ ಕಳೆದರೂ ನರೇಂದ್ರ ಅವರ ಜಾಗದ ದಾಖಲೆಗಳನ್ನು ಪರಿವರ್ತಿಸಲು ವಿರಾಜಪೇಟೆ ತಹಶೀಲ್ದಾರ್ ಮತ್ತು ಕಚೇರಿ ಸಿಬ್ಬಂದಿ ಮುಂದಾಗಿರಲಿಲ್ಲ. ಬದಲಿಗೆ ಈ ಕೆಲಸಕ್ಕಾಗಿ ಒಟ್ಟು 15 ಸಾವಿರ ರೂ. ನೀಡುವಂತೆ ಬೇಡಿಕೆ ಮುಂದಿಟ್ಟಿದ್ದರು ಎಂದು ಆರೋಪಿಸಲಾಗಿದೆ.

ಈ ಪೈಕಿ ಒಟ್ಟು 7 ಸಾವಿರ ರೂ. ಮುಂಗಡವಾಗಿ ನರೇಂದ್ರ ಅವರಿಂದ  ತಹಶೀಲ್ದಾರ್ ಕೆ.ಪುರಂದರ ಹಾಗೂ ದ್ವಿತೀಯ ದರ್ಜೆ ಕಚೇರಿ ಸಿಬ್ಬಂದಿ ಜಾಗೃತ ಅವರು ಪಡೆದಿದ್ದಾರೆ ಎನ್ನಲಾಗಿದ್ದು ಮತ್ತೆ ಎರಡು ಸಾವಿರ ರೂ.ಗಳಿಗಾಗಿ ಬೇಡಿಕೆ ಇಟ್ಟಿದ್ದರು. ಇದರಿಂದ ಬೇಸರಗೊಂಡಿದ್ದ ನರೇಂದ್ರ ಭ್ರಷಾಚಾರ ನಿಗ್ರಹ ದಳಕ್ಕೆ ದಾಖಲೆ ಸಹಿತ ದೂರು ನೀಡಿದ್ದರು.

ಪ್ರಕರಣ ದಾಖಲು ಮಾಡಿಕೊಂಡ ಭ್ರಷಾಚಾರ ನಿಗ್ರಹ ದಳ ಅಧಿಕಾರಿಗಳು ಇಂದು ವಿರಾಜಪೇಟೆ ತಾಲೂಕು ಕಚೇರಿಗೆ ದಾಳಿ ನಡೆಸಿದರು. ದೂರುದಾರ ನರೇಂದ್ರ ಅವರಿಂದ 2 ಸಾವಿರ ರೂ. ಪಡೆಯಲು ಮುಂದಾದ ತಹಶೀಲ್ದಾರ್ ಪುರಂದರ ಹಾಗೂ ಸಿಬ್ಬಂದಿ ಜಾಗೃತ ಅವರನ್ನು ಭ್ರಷಾಚಾರ ನಿಗ್ರಹ ದಳದ ಅಧಿಕಾರಿಗಳು ವಶಕ್ಕೆ ಪಡೆದು ತನಿಖೆ ತನಿಖೆ ನಡೆಸುತಿದ್ದಾರೆ.

ಎಸಿಬಿ ಉಪ ಅಧೀಕ್ಷಕ ಪೂರ್ಣಚಂದ್ರ ತೇಜಸ್ವಿ ನೇತೃತ್ವದಲ್ಲಿ ಪೊಲೀಸ್ ವೃತ್ತ ನಿರೀಕ್ಷಕರಾದ ಮಹೇಶ್, ಶ್ರೀಧರ್, ಸಿಬ್ಬಂದಿ ದಿನೇಶ್, ರಾಜೇಶ್, ಸುರೇಶ್, ಸಜನ್, ಪ್ರವೀಣ್, ಲೋಹಿತ್, ದೀಪಿಕಾ ಕಾರ್ಯಾಚರಣೆ ನಡೆಸಿದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News