ತಲಕಾವೇರಿಯಲ್ಲಿ ನಿಯಮ ಬಾಹಿರ ರೆಸಾರ್ಟ್ ಕಾಮಗಾರಿ ಆರೋಪ: ಎಫ್‍ಡಿಎ ಅಧಿಕಾರಿ ಅಮಾನತು

Update: 2019-10-11 12:28 GMT

ಮಡಿಕೇರಿ, ಅ.11: ಭಾಗಮಂಡಲ ಗ್ರಾಮ ಪಂಚಾಯತ್ ವ್ಯಾಪ್ತಿಯ ತಲಕಾವೇರಿ ಸಮೀಪ ಬೆಟ್ಟವನ್ನು ಸಮತಟ್ಟು ಮಾಡಿ ನಿಯಮ ಬಾಹಿರವಾಗಿ ರೆಸಾರ್ಟ್ ನಿರ್ಮಾಣ ಮಾಡುತ್ತಿದ್ದರೆಂಬ ಆರೋಪದ ಮೇಲೆ ಮಡಿಕೇರಿ ತಹಶೀಲ್ದಾರ್ ಕಚೇರಿಯ ಅಧಿಕಾರಿ ಸತೀಶ್ ಅವರನ್ನು ಅಮಾನತು ಮಾಡಿ ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಆದೇಶ ಹೊರಡಿಸಿದ್ದಾರೆ.

ರೆಸಾರ್ಟ್ ನಿರ್ಮಿಸುವ ಉದ್ದೇಶದಿಂದ ಅಧಿಕಾರಿ ಸತೀಶ್ ಮಡಿಕೇರಿ ತಾಲೂಕಿನ ತಲಕಾವೇರಿ ಸಮೀಪದ ಕೋಳಿಕಾಡು ಹಾಗೂ ಚೇರಂಗಾಲ ಗ್ರಾಮಗಳ ವ್ಯಾಪ್ತಿಯ ಸುಮಾರು 1.5 ಎಕರೆ ಬೆಟ್ಟವನ್ನು ಒತ್ತುವರಿ ಮಾಡಿ ಅರಣ್ಯ ಪ್ರದೇಶವನ್ನು ನಾಶಪಡಿಸಿದ್ದರು ಎನ್ನುವ ಆರೋಪವಿದೆ. ಅಲ್ಲದೆ ಭಾರೀ ಪ್ರಮಾಣದಲ್ಲಿ ಮಣ್ಣು ತೆರವು ಮಾಡಿದ ಪರಿಣಾಮ ಸ್ಥಳದಲ್ಲಿ ಭಾರೀ ಬಿರುಕು ಮೂಡಿ ಬೆಟ್ಟದ ತಪ್ಪಲಿನ ಕೋಳಿಕಾಡು ಗ್ರಾಮದಲ್ಲಿ ಆತಂಕ ಮನೆ ಮಾಡಿತ್ತು. 
ಈ ಪ್ರಕರಣದ ಕುರಿತು ತಲಕಾವೇರಿ ಮೂಲ ಸ್ವರೂಪ ರಕ್ಷಣಾ ವೇದಿಕೆಯ ಪ್ರಮುಖರು ಜಿಲ್ಲಾಡಳಿತಕ್ಕೆ ದೂರು ನೀಡಿದ್ದರು. ಅಲ್ಲದೆ ಭಾಗಮಂಡಲ ವಲಯ ಅರಣ್ಯ ಇಲಾಖೆ ಕಚೇರಿಯಲ್ಲೂ ಪ್ರತ್ಯೇಕ ದೂರು ನೀಡಿ ಕ್ರಮಕ್ಕೆ ಒತ್ತಾಯಿಸಿದ್ದರು. ಬಳಿಕ ಈ ದೂರುಗಳನ್ನು ಪರಿಗಣಿಸಿದ ಜಿಲ್ಲಾಧಿಕಾರಿಗಳು ಕಂದಾಯ, ಅರಣ್ಯ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಗಳಿಂದ ಜಂಟಿ ತನಿಖೆಗೆ ಆದೇಶ ನೀಡಿದ್ದರು.

ಜಂಟಿ ತನಿಖೆ ನಡೆಸಿದ ವಿವಿಧ ಇಲಾಖೆಗಳು ಸ್ಥಳವನ್ನು ಸರ್ವೆ ನಡೆಸಿದಾಗ ಅಧಿಕಾರಿ ಸತೀಶ್ ಅವರಿಗೆ ಈ ಹಿಂದೆ ಮಂಜೂರಾದ ಜಾಗ ಮತ್ತು ಪ್ರಸ್ತುತ ರೆಸಾರ್ಟ್ ಕಾಮಗಾರಿ ನಡೆಸುತ್ತಿರುವ ಪ್ರದೇಶ ಬೇರೆ ಬೇರೆಯಾಗಿರುವುದು ಪತ್ತೆಯಾಗಿದೆ. ರೆಸಾರ್ಟ್ ನಿರ್ಮಾಣಕ್ಕೆ ಸ್ವಾಧೀನ ಪಡೆದಿರುವುದು ಸರ್ಕಾರಿ ಜಾಗ ಎಂಬುವುದು ಸ್ಪಷ್ಟವಾಗಿದೆ. ಸ್ಥಳದಲ್ಲಿದ್ದ ಹಲವಾರು ಮರಗಳನ್ನು ಕಡಿದು ನಾಶ ಮಾಡಿದ್ದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಈ ಅಧಿಕಾರಿಯ ವಿರುದ್ದ ಪ್ರಕರಣವನ್ನೂ ದಾಖಲಿಸಿತ್ತು. 

ಸರ್ಕಾರಿ ಜಾಗದ ಬೆಟ್ಟವನ್ನು ಒತ್ತುವರಿ ಮಾಡಿ ಅಕ್ರಮ ಕಾಮಗಾರಿ ನಡೆದಿದೆ ಎಂದು ವಿವಿಧ ಇಲಾಖೆಗಳು ನೀಡಿದ ಜಂಟಿ ವರದಿಯಲ್ಲಿ ಸಾಬೀತಾದ ಹಿನ್ನೆಲೆಯಲ್ಲಿ ಅಧಿಕಾರಿ ಸತೀಶ್ ಅವರನ್ನು ಇದೀಗ ಅಮಾನತು ಮಾಡಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News