×
Ad

ಖೋಟಾ ನೋಟು ಚಲಾವಣೆ ಯತ್ನ ಆರೋಪ: ಮೂವರ ಬಂಧನ

Update: 2019-10-11 18:02 IST

ಮಡಿಕೇರಿ, ಅ.11: ನಗರದಲ್ಲಿ ಖೋಟಾ ನೋಟುಗಳನ್ನು ಚಲಾವಣೆ ಮಾಡಲು ಯತ್ನಿಸಿದ ಮೂವರು ಆರೋಪಿಗಳನ್ನು ಬಂಧಿಸಿರುವ ಮಡಿಕೇರಿ ನಗರ ಪೊಲೀಸರು 2 ಸಾವಿರ ಮುಖಬೆಲೆಯ 5 ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ. 

ಬಂಧಿತ ಆರೋಪಿಗಳನ್ನು ಮಡಿಕೇರಿ ತಾಲೂಕಿನ ಕುಂಜಿಲ ನಿವಾಸಿ ಅಮೀರ್ ಸುಹೈಲ್(20) ಹಾಗೂ ವಿರಾಜಪೇಟೆ ತಾಲೂಕಿನ ನಾಲ್ಕೇರಿ ಗ್ರಾಮದ ನಿವಾಸಿ ಯು.ವೈ.ಯೂನುಸ್(20) ಎಂದು ಗುರುತಿಸಲಾಗಿದೆ. ಮತ್ತೊಬ್ಬ ಅಪ್ರಾಪ್ತ ಬಾಲಕ ಸೇರಿದಂತೆ ಮೂವರು ಖೋಟಾ ನೋಟು ಚಲಾವಣೆ ಮಾಡುವ ಜಾಲದಲ್ಲಿ ಸಕ್ರಿಯರಾಗಿದ್ದರು ಎನ್ನಲಾಗಿದೆ. 

ಅಕ್ಟೋಬರ್ 10ರ ಸಂಜೆ 4 ಗಂಟೆ ಸುಮಾರಿಗೆ ಮಡಿಕೇರಿ ನಗರದ ಕಾಲೇಜು ರಸ್ತೆಯಲ್ಲಿರುವ ಅರುಣ್ ಮಾರ್ಕೆಟಿಂಗ್ ಕರೆನ್ಸಿ ಸೆಂಟರ್ ಗೆ ಭೇಟಿ ನೀಡಿದ ಆರೋಪಿ ಅಮೀರ್ ಸುಹೈಲ್ ಕರೆನ್ಸಿ ಹಾಕುವಂತೆ ಅಂಗಡಿಯಲ್ಲಿದ್ದ ಮುಕುಂದ ಅವರಿಗೆ ನೋಟೊಂದನ್ನು ನೀಡುತ್ತಾನೆ. ಈ ನೋಟನ್ನು ಗಮನಿಸಿ ಸಂಶಯಗೊಂಡ ಮುಕುಂದ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು. 

ಈ ಮಾಹಿತಿ ಆಧರಿಸಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಸುಮನ್ ಡಿ.ಪೆನ್ನೇಕರ್ ನೇತೃತ್ವದಲ್ಲಿ ಮಡಿಕೇರಿ ಉಪ ವಿಭಾಗದ ಡಿವೈಎಸ್‍ಪಿ ಬಿ.ಪಿ. ದಿನೇಶ್ ಕುಮಾರ್, ಮಡಿಕೇರಿ ನಗರ ಠಾಣೆಯ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಹಾಗೂ ಉಪ ನಿರೀಕ್ಷಕ ಸದಾಶಿವ ನೇತೃತ್ವದ ಸಿಬ್ಬಂದಿಗಳ ತಂಡ ಕಾರ್ಯಾಚರಣೆ ನಡೆಸಿ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪೊಲೀಸ್ ಸಿಬ್ಬಂದಿಗಳಾದ ಕೆ.ಕೆ.ದಿನೇಶ್, ರಾಘವೇಂದ್ರ, ಪ್ರವೀಣ್, ನಾಗರಾಜ್, ಶರತ್ ರೈ, ಭಾನು ಪ್ರಕಾಶ್, ಶಶಿ ಕುಮಾರ್, ಸೌಮ್ಯ, ರಾಜೇಶ್, ಗಿರೀಶ್, ಡಿ.ಎಸ್.ಲೋಕೇಶ್, ಎಎಸ್‍ಐ ಅಕ್ಮಲ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿಕೇರಿ ನಗರ ಪೋಲಿಸ್ ಠಾಣೆ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News