ಅರಣ್ಯ ಇಲಾಖೆ ಕಿರುಕುಳ ತಪ್ಪಿಸಲು ಕ್ರಮ: ಮುಖ್ಯಮಂತ್ರಿ ಯಡಿಯೂರಪ್ಪ

Update: 2019-10-11 14:31 GMT

ಬೆಂಗಳೂರು, ಅ. 11: ಪ್ರವಾಹ ಸಂತ್ರಸ್ತರಿಗೆ ಮನೆ ನಿರ್ಮಿಸಿಕೊಳ್ಳಲು ಕಿರುಕುಳ ನೀಡುತ್ತಿರುವ ಅರಣ್ಯ ಇಲಾಖೆ ಅಧಿಕಾರಿಗಳ ಜತೆ ಸಭೆ ನಡೆಸಿ ಸಮಸ್ಯೆ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಭರವಸೆ ನೀಡಿದ್ದಾರೆ.

ಶುಕ್ರವಾರ ವಿಧಾನಸಭೆಯಲ್ಲಿ ನಿಯಮ 69ರಡಿ ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಆಡಳಿತ ಮತ್ತು ವಿಪಕ್ಷ ಸದಸ್ಯರು ಪ್ರಸ್ತಾಪಿಸಿದ ವಿಷಯಕ್ಕೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದ ವಿವಿಧೆಡೆಗಳಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಜನರಿಗೆ ಕಿರುಕುಳ ನೀಡುತ್ತಿರುವುದ ಸರಕಾರದ ಗಮನಕ್ಕೆ ಬಂದಿದೆ. ಈಗಾಗಲೇ ಸರಕಾರ ವಿದ್ಯುತ್, ರಸ್ತೆ, ಕುಡಿಯುವ ನೀರು ಸೇರಿದಂತೆ ಮೂಲ ಸೌಲಭ್ಯ ಕಲ್ಪಿಸಿರುವ ಜಾಗದಲ್ಲಿಯೂ ಅರಣ್ಯ ಇಲಾಖೆ ಕಿರುಕುಳ ನೀಡುತ್ತಿದೆ ಎಂದು ಗೊತ್ತಿದೆ. ಈ ಸಂಬಂಧ ಶೀಘ್ರವೇ ಅಧಿಕಾರಿಗಳ ಸಭೆ ನಡೆಸಲಾಗುವುದು. ಅಲ್ಲದೆ, ಸಂತ್ರಸ್ತರಿಗೆ ಮನೆ ನಿರ್ಮಿಸಿಕೊಳ್ಳಲು ಅವಕಾಶ ಕಲ್ಪಿಸಲಾಗುವುದು ಎಂದರು.

ಅರಣ್ಯ ಇಲಾಖೆ ಜನರಿಗೆ ಕಿರುಕುಳ ನೀಡುವಂತಹ ಘಟನೆಗಳು ಮರುಕಳಿಸದಂತೆ ರಾಜ್ಯ ಸರಕಾರ ಸೂಕ್ತ ಮುನ್ನಚ್ಚರಿಕೆ ಕೈಗೊಳ್ಳಲಿದೆ ಎಂದ ಅವರು, ನೆರೆ ಸಂತ್ರಸ್ತರಿಗೆ ಅರಣ್ಯ ಇಲಾಖೆ ಮತ್ತು ಕಂದಾಯ ಭೂಮಿ ಇದ್ದರೂ ಮನೆ ನಿರ್ಮಿಸಿಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದರು.

ದೇವಲೋಕದಿಂದ ಬಂದವರೇ: ‘ರಾಜ್ಯದಲ್ಲಿನ ಐಎಫ್‌ಎಸ್ ಅಧಿಕಾರಿಗಳೇನು ದೇವಲೋಕದಿಂದ ಬಂದಿದ್ದಾರೇಯೇ? ಅವರ ಉದ್ಧಟತನ ಮಿತಿಮೀರಿದೆ. ಕುಡಿಯುವ ನೀರಿನ ಪೈಪ್‌ಲೈನ್ ಅಳವಡಿಸಲು ಅವಕಾಶ ಕೊಡುವುದಿಲ್ಲ ಎಂದರೆ ಅವರೇನೂ ಭೂಲೋಕಕ್ಕೆ ಒಡೆಯರೇ?’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದರು.

ಸಂತ್ರಸ್ತರಿಗೆ ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಅವಕಾಶ ನೀಡುತ್ತಿಲ್ಲ. ಹೊಳೆ ದಂಡೆಯಲ್ಲಿ ಶೆಡ್ ನಿರ್ಮಿಸಿದರೆ ಅಧಿಕಾರಿಗಳು ತಮ್ಮದೆ ಸಾಮ್ರಾಜ್ಯ ಸ್ಥಾಪಿಸಿಕೊಂಡಿದ್ದಾರೆ. ನಾನು ಸಿಎಂ ಆಗಿದ್ದ ವೇಳೆ 10 ಎಕ್ರೆ ವರೆಗೆ ಒತ್ತುವರಿ ಮಾಡಿರುವವರಿಗೆ ಗುತ್ತಿಗೆ ಆಧಾರದ ಮೇಲೆ ನೀಡಲು ತೀರ್ಮಾನಿಸಿದ್ದೆ. ಈ ಸಂಬಂಧ ಅಗತ್ಯ ಕಾನೂನು ರೂಪಿಸಿ ಜನರಿಗೆ ಅನುಕೂಲ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಇದಕ್ಕೆ ಧ್ವನಿಗೂಡಿಸಿದ ಆಡಳಿತ ಪಕ್ಷದ ಸದಸ್ಯರಾದ ಅರಗ ಜ್ಞಾನೇಂದ್ರ, ಕೆ.ಜಿ. ಬೋಪಯ್ಯ, ಮಲೆನಾಡು ಪ್ರದೇಶದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ತಂಬಿಗೆ ಹಿಡಿದು ಶೌಚಕ್ಕೂ ಹೋಗಲು ಬಿಡುತ್ತಿಲ್ಲ. ಅವರದ್ದೆ ರಾಜ್ಯಭಾರ. ಅಧಿಕಾರಿಗಳು ಮನಸೋ ಇಚ್ಛೆ ವರ್ತಿಸುತ್ತಿದ್ದಾರೆ. ಅವರನ್ನು ನಿಯಂತ್ರಣ ಮಾಡಬೇಕೆಂದು ಕೋರಿದರು.

‘ಬಹಳ ಹಿಂದಿನಿಂದಲೂ ರಾಜ್ಯದಲ್ಲಿ ಅರಣ್ಯ ಇಲಾಖೆ ಭೂಮಿ ಸಮಸ್ಯೆ ಇದ್ದು, ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಹಲವು ಕಾನೂನು ರೂಪಿಸಿದರೂ ಸಮಸ್ಯೆ ಇತ್ಯರ್ಥ್ಯ ಆಗುತ್ತಿಲ್ಲ. ಹೀಗಾಗಿ ರಾಜ್ಯ ಸರಕಾರ ಸಚಿವ ಸಂಪುಟ ಉಪ ಸಮಿತಿ ರಚನೆ ಮಾಡುವುದು ಸೂಕ್ತ’

-ಪಿ.ರಾಜೀವ್, ಬಿಜೆಪಿ ಸದಸ್ಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News