'ನಮ್ಮದೇ ಸರ್ಕಾರವಿದೆ, ಸಸ್ಪೆಂಡ್ ಆಗ್ತಿಯಾ' ಎಂದು ಅಧಿಕಾರಿಗೆ ಬೆದರಿಕೆಯೊಡ್ಡಿದ ಬಿಜೆಪಿ ಯುವ ಮುಖಂಡ: ಆರೋಪ

Update: 2019-10-11 15:46 GMT
ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ಗಿರಿರಾಜ್

ಶಿವಮೊಗ್ಗ, ಅ. 11: ನಿಯಮಕ್ಕೆ ವಿರುದ್ಧವಾಗಿ ಮರ ಕಡಿದ ಆರೋಪಕ್ಕೆ ಸಂಬಂಧಿಸಿದಂತೆ, ನೀರಾವರಿ ಇಲಾಖೆ ಇಂಜಿನಿಯರ್ ಓರ್ವರ ವಿರುದ್ಧ ಕೇಸ್ ದಾಖಲಿಸಿದ ಅರಣ್ಯ ಇಲಾಖೆ ಅಧಿಕಾರಿಗೆ ಬಿಜೆಪಿ ಮುಖಂಡರೋರ್ವರು ಕರೆ ಮಾಡಿ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ, ಬೆದರಿಕೆ ಹಾಕಿದ್ದಾರೆನ್ನಲಾಗಿದ್ದು, ಬೆದರಿಕೆಯ ಆಡಿಯೋ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ಗಿರಿರಾಜ್ ಎಂಬವರೇ ಬೆದರಿಕೆ ಹಾಕಿದವರು ಎನ್ನಲಾಗಿದ್ದು, ಶಂಕರ ಅರಣ್ಯ ವಿಭಾಗದ ಆರ್‍ಎಫ್‍ಓ ಕೆ.ಸಿ.ಜಯೇಶ್‍ ರವರ ಮೊಬೈಲ್‍ಗೆ ಕರೆ ಮಾಡಿ ಬೆದರಿಕೆ ಹಾಕಿದ ಆರೋಪ ಇವರ ಮೇಲಿದೆ. 

ಶಿವಮೊಗ್ಗ ತಾಲೂಕಿನ ಗಾಜನೂರು ಗ್ರಾಮದಲ್ಲಿ ಅನುಮತಿಯಿಲ್ಲದೆ ಮರ ಕಡಿದ ಆರೋಪದ ಮೇರೆಗೆ, ಇಂಜಿನಿಯರ್ ವಿರುದ್ಧ ಕೇಸ್ ದಾಖಲಿಸಿದ್ದಕ್ಕೆ ಬಿಜೆಪಿ ಯುವ ಮುಖಂಡ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆರೋಪಿತ ಅಧಿಕಾರಿಯ ಪರ ವಕಾಲತ್ತು ವಹಿಸಿಕೊಂಡು, ಆರ್‍ಎಫ್‍ಓರನ್ನು ತರಾಟೆಗೆ ತೆಗೆದುಕೊಂಡು, ಅವ್ಯಾಚ್ಯ ಶಬ್ದ, ಏಕವಚನ ಬಳಸಿ ಕೂಗಾಡಿದ್ದಾರೆ ಎನ್ನಲಾಗಿದೆ.

'ನಮ್ಮದೆ ಸರ್ಕಾರವಿದೆ. ನಿಮ್ಮ ಪರಿಸ್ಥಿತಿ ಏನಾಗುತ್ತೆ ನೋಡು, ಸಸ್ಪೆಂಡ್ ಆಗುವುದು ಗ್ಯಾರಂಟಿ, ಮನೆಗೆ ನುಗ್ಗುತ್ತೇವೆ. ಯೂನಿಫಾರಂನಲ್ಲೇ ಬನ್ನಿ ಏನ್ ಕಿತ್ಕೊಳ್ತೀರಿ ನೋಡೋಣ.' ಎಂದು ಕೋಪೋದ್ರಿಕ್ತರಾಗಿ ಮಾತನಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಇದಕ್ಕೆ ಅರಣ್ಯ ಅಧಿಕಾರಿಯು, 'ಸಾರ್ ಕಾನೂನು ರೀತಿ ಕ್ರಮ ಕೈಗೊಂಡಿದ್ದೇವೆ' ಎಂದು ಪ್ರತಿಕ್ರಿಯಿಸಿದ್ದಾರೆ. ಇದಕ್ಕೆ ಮತ್ತಷ್ಟು ಆಕ್ರೋಶಿತರಾದ ಯುವ ಮುಖಂಡ, 'ಕಾನೂನು ಇರುವುದು ಜನರಿಗೆ, ಚೆಕ್‍ಪೋಸ್ಟ್ ಬಳಿ ಅಡ್ಡ ಹಾಕುತ್ತೇವೆ. ತಾಕತ್ತಿದ್ದರೆ ಎಷ್ಟು ಕೇಸ್ ಹಾಕ್ತಾರೋ ಹಾಕಲಿ, ನೋಡೋಣ. ಸಣ್ಣ ಪ್ರಕರಣ ದೊಡ್ಡದು ಮಾಡ್ತಿದ್ದೀರಿ...ನಿಮಗೆ ಏನೋ ಕಾದಿದೆ. ಒಳ್ಳೆ ಕೆಲಸ ಮಾಡಿ. ಬಹಳ ದೊಡ್ಡ ಘನಂದಾರಿ ಕೆಲಸ ಮಾಡಿದ್ದೀರಿ.' ಎಂದು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ಘಟನೆ ಹಿನ್ನೆಲೆ: ಗಾಜನೂರು ಗ್ರಾಮದ ಗಣಪತಿ ದೇವಾಲಯ ಮುಂಭಾಗವಿದ್ದ ಮೂರು ಮರಗಳನ್ನು ತುಂಗಾ ಮೇಲ್ದಂಡೆ ಯೋಜನೆ ಅಧಿಕಾರಿಗಳು ಕಡಿದಿದ್ದರು. ಈ ಸಂಬಂಧ ಅರಣ್ಯ ಇಲಾಖೆಗೆ ದೂರು ಬಂದಿತ್ತು. ಇದರ ಆಧಾರದ ಮೇಲೆ ತುಂಗಾ ಮೇಲ್ದಂಡೆ ಯೋಜನೆ ಎ.ಇ.ಇ. ಕುಮಾರಸ್ವಾಮಿಯವರ ವಿರುದ್ಧ ಆರ್‍ಎಫ್‍ಓ ಕೆ.ಸಿ.ಜಯೇಶ್‍ರವರು ಪ್ರಕರಣ ದಾಖಲಿಸಿದ್ದರು. ನೋಟೀಸ್ ಕೂಡ ಜಾರಿಗೊಳಿಸಿದ್ದರು. 

ಈ ವಿಚಾರವಾಗಿ ಆರ್‍ಎಫ್‍ಓ ಜಯೇಶ್‍ರವರ ಮೊಬೈಲ್ ಸಂಖ್ಯೆಗೆ ಕರೆ ಮಾಡಿದ ಬಿಜೆಪಿ ಯುವ ಮುಖಂಡ, ಬೆದರಿಕೆ ಹಾಕಿ, ಅಶ್ಲೀಲ ಪದ ಬಳಸಿ ಕೂಗಾಡಿದ್ದಾರೆ ಎನ್ನಲಾಗಿದ್ದು, ಈ ಆಡಿಯೋ ಸಂದೇಶವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆಡೆ ಮಾಡಿಕೊಟ್ಟಿದೆ. 

ದೂರು ?

ಬಿಜೆಪಿ ಯುವ ಮುಖಂಡ ಗಿರಿರಾಜ್ ವಿರುದ್ಧ ದೂರು ದಾಖಲಿಸಲು ಆರ್‍ಎಫ್‍ಓ ಕೆ.ಸಿ.ಜಯೇಶ್‍ರವರಿಗೆ ಇಲಾಖೆಯ ಹಿರಿಯ ಅಧಿಕಾರಿಗಳು ಸೂಚಿಸಿದ್ದಾರೆ ಎಂದು ಅರಣ್ಯ ಇಲಾಖೆ ಉನ್ನತ ಮೂಲಗಳು ತಿಳಿಸಿವೆ. ಜೀವ ಬೆದರಿಕೆ, ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ ಮಾನಹಾನಿ ಮಾಡಿರುವುದು, ಕರ್ತವ್ಯಕ್ಕೆ ಅಡ್ಡಿಪಡಿಸಿರುವುದು ಸೇರಿದಂತೆ ವಿವಿಧ ಆರೋಪಗಳಡಿ ಗಿರಿರಾಜ್ ವಿರುದ್ಧ ಆರ್‍ಎಫ್‍ಓರವರು ತುಂಗಾನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ನಿರ್ಧರಿಸಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ. 

ಅರಣ್ಯಾಧಿಕಾರಿಗೆ ಬೆದರಿಕೆ ಸರಿಯಲ್ಲ: ಪರಿಸರ ಸಿ. ರಮೇಶ್
ಸಾರ್ವಜನಿಕ ಸ್ಥಳದಲ್ಲಿರುವ ಮರಗಳ ಕಡಿತಲೆ ಮಾಡುವ ಮುನ್ನ, ಅರಣ್ಯ ಇಲಾಖೆಯ ಗಮನಕ್ಕೆ ತರಬೇಕು. ಅನುಮತಿ ಪಡೆದ ನಂತರವಷ್ಟೆ ಮರ ಕಡಿಯಬೇಕು. ಆದರೆ ಅನುಮತಿಯಿಲ್ಲದೆ ಮರ ಕಡಿದವರ ವಿರುದ್ಧ ಆರ್‍ಎಫ್‍ಓ ಜಯೇಶ್‍ರವರು ಕೇಸ್ ದಾಖಲಿಸಿದ್ದಾರೆ. ಅದು ಸರ್ಕಾರಿ ಅಧಿಕಾರಿಯ ವಿರುದ್ಧವಾಗಿದೆ. ಇದಕ್ಕೆ ಸಾರ್ವಜನಿಕರು, ಪರಿಸರ ಪ್ರೇಮಿಗಳು ಬೆಂಬಲಿಸಬೇಕಾಗಿದೆ. ಆದರೆ ಕೇಸ್ ದಾಖಲಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ರಾಜಕೀಯ ಮುಖಂಡರೊಬ್ಬರು ಬೆದರಿಕೆ ಹಾಕಿರುವುದು ಹಾಗೂ ಹಿರಿಯ ರಾಜಕಾರಣಿಗಳ ಹೆಸರು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಸರಿಯಲ್ಲ. ಇದನ್ನು ಖಂಡಿಸುತ್ತೇನೆ. ಇಂತಹ ಬೆದರಿಕೆಗಳು ಪರಿಸರ ಸಂರಕ್ಷಣೆಯಲ್ಲಿ ತೊಡಗಿರುವ ಅಧಿಕಾರಿಗಳ ನೈತಿಕ ಸ್ಥೈರ್ಯ ಕುಸಿಯುವಂತೆ ಮಾಡುತ್ತದೆ' ಎಂದು ಪರಿಸರ ಹೋರಾಟಗಾರ ಪರಿಸರ ಸಿ. ರಮೇಶ್‍ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News