ಪರಮೇಶ್ವರ್, ಜಾಲಪ್ಪ ಮನೆ ಮೇಲೆ ಐಟಿ ದಾಳಿ ಪ್ರಕರಣ: ನಗದು, ಬ್ಯಾಂಕ್ ಖಾತೆ ಮುಟ್ಟುಗೋಲು

Update: 2019-10-11 15:57 GMT

ಬೆಂಗಳೂರು, ಅ.11: ವೈದ್ಯಕೀಯ ಸೀಟು ಅವ್ಯವಹಾರ ಸೇರಿದಂತೆ ಇನ್ನಿತರೆ ಆರೋಪದ ಹಿನ್ನೆಲೆ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹಾಗೂ ಮಾಜಿ ಸಚಿವ ಆರ್.ಎಲ್.ಜಾಲಪ್ಪ ಅವರ ಒಡೆತನದ ನಿವಾಸ, ಕಚೇರಿಗಳಲ್ಲಿ ಸತತ ಎರಡು ದಿನಗಳಿಂದ ಶೋಧ ಕಾರ್ಯ ಮುಂದುವರೆಸಿರುವ ಆದಾಯ ತೆರಿಗೆ(ಐಟಿ) ಅಧಿಕಾರಿಗಳು, ನಗದು ಪತ್ತೆ ಹಚ್ಚಿ, ಖಾಸಗಿ ಬ್ಯಾಂಕ್‌ಗಳಲ್ಲಿರುವ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ.

ಶುಕ್ರವಾರ ಸಂಜೆ ಸಿದ್ದಾರ್ಥ ಶಿಕ್ಷಣ ಸಂಸ್ಥೆಯಲ್ಲಿ ದಾಳಿ ಮುಕ್ತಾಯಗೊಳಿಸಿರುವ ಆದಾಯ ತೆರಿಗೆ ಅಧಿಕಾರಿಗಳು, ಈ ವೇಳೆ ಸಿಕ್ಕ ಕಾಲೇಜು ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆಗಳನ್ನು ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಆದಾಯ ತೆರಿಗೆ ಕಚೇರಿಗೆ ತಂದು ಪರಿಶೀಲನೆ ನಡೆಸುತ್ತಿದ್ದಾರೆ. ಅಲ್ಲದೆ, ಪರಮೇಶ್ವರ್ ಅವರು ತಮ್ಮ ಶಿಕ್ಷಣ ಸಂಸ್ಥೆಗೆ ಸೇರಿದ ಕೋಟ್ಯಂತರ ರೂಪಾಯಿಗೆ ತೆರಿಗೆ ಪಾವತಿಸದಿರುವುದು ಬೆಳಕಿಗೆ ಬಂದಿದೆ ಎನ್ನಲಾಗಿದೆ.

ಎರಡನೇ ದಿನದಂದು ಸಹ ಸದಾಶಿವನಗರದಲ್ಲಿನ ನಿವಾಸದಲ್ಲೇ ಶೋಧ ನಡೆಸಿದ ಅಧಿಕಾರಿಗಳು, 70 ಲಕ್ಷ ರೂ.ಗೂ ಅಧಿಕ ಹಣ ಪತ್ತೆಹಚ್ಚಿದ್ದಾರೆ ಎನ್ನಲಾಗಿದೆ. ಜತೆಗೆ, ಪರಮೇಶ್ವರ್ ಅವರ ಸಹೋದರ ದಿವಂಗತ ಶಿವಪ್ರಸಾದ್ ಅವರ ಪುತ್ರ ಆನಂದ್ ಅವರಿಂದ ಮಾಹಿತಿ ಪಡೆದ ಅಧಿಕಾರಿಗಳು, ಸಿದ್ದಾರ್ಥ ಕಾಲೇಜು ಹಾಗೂ ಹಣಕಾಸಿನ ವ್ಯವಹಾರ ನಡೆಸುತ್ತಿದ್ದ ಟ್ರಸ್ಟ್ ಮೇಲೂ ಪರಿಶೀಲನೆ ಮುಂದುವರೆಸಿದರು.

ಬ್ಯಾಂಕ್ ಖಾತೆ: ಪರಮೇಶ್ವರ್ ಒಡೆತನದ ಶಿಕ್ಷಣ ಸಂಸ್ಥೆಗಳ ಹತ್ತಾರು ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಲಾಗಿದ್ದು, ಶಿಕ್ಷಣ ಸಂಸ್ಥೆಯ ಆಡಿಟರ್ ವಿಚಾರಣೆ ನಡೆಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ದಾಳಿ ವೇಳೆ ಸಿದ್ಧಾರ್ಥ ಶಿಕ್ಷಣ ಸಂಸ್ಥೆಗಳಿಗೆ ಸಂಬಂಧಿಸಿದ ಕೆಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದ್ದು, ತುಮಕೂರು ಪಾಲಿಕೆಗೆ ತೆರಿಗೆ ಕಟ್ಟದೆ 2 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ ಎಂಬ ವಿಷಯ ಬೆಳಕಿಗೆ ಬಂದಿದೆ. 2002 ರಿಂದಲೂ ಆಡಳಿತ ಮಂಡಳಿ ತೆರಿಗೆ ಪಾವತಿ ಮಾಡಿಲ್ಲ ಎನ್ನಲಾಗಿದೆ.

ಒಟ್ಟು 1,83,20,439 ರೂ. ಹಣವನ್ನು ಸಿದ್ಧಾರ್ಥ ಸಂಸ್ಥೆ ಬಾಕಿ ಉಳಿಸಿಕೊಂಡಿದೆ. ಕಾಲೇಜು ಶಿಕ್ಷಣ ಸಂಸ್ಥೆಗೆ ಈ ಸಂಬಂಧ ತುಮಕೂರು ಪಾಲಿಕೆ ಜಾರಿ ಮಾಡಿರುವ ನೋಟಿಸ್ ಸಹ ಐಟಿ ಅಧಿಕಾರಿಗಳ ಬಳಿ ಇದೆ. ಈ ಶಿಕ್ಷಣ ಸಂಸ್ಥೆಯ ವಿರುದ್ಧ ಸರಕಾರಿ ಜಮೀನು ಒತ್ತುವರಿ ಮಾಡಿಕೊಂಡ ಆರೋಪ ಇದೆ ಎಂದು ಹೇಳಲಾಗುತ್ತಿದೆ.

ಜಾಲಪ್ಪ: ಮಾಜಿ ಸಚಿವ ಆರ್.ಎಲ್.ಜಾಲಪ್ಪಅವರ ಒಡೆತನದ ವೈದ್ಯಕೀಯ ಶಿಕ್ಷಣ ಕಾಲೇಜು ಮತ್ತು ನಿವಾಸಗಳಲ್ಲೂ ಐಟಿ ಶೋಧ ಕಾರ್ಯ ಮುಂದುವರೆದಿದೆ.

ದೊಡ್ಡಬಳ್ಳಾಪುರ ನಗರದ ಸೋಮೇಶ್ವರ ಬಡಾವಣೆಯಲ್ಲಿನ ಜಾಲಪ್ಪ ಅವರ ಮೂರನೇ ಪುತ್ರ ಜೆ.ರಾಜೇಂದ್ರ ಅವರ ಮನೆಯಲ್ಲಿಯೇ ಗುರುವಾರ ರಾತ್ರಿ ತಂಗಿದ್ದ ಅಧಿಕಾರಿಗಳು ಶುಕ್ರವಾರವೂ ದಾಖಲೆ ಪರಿಶೀಲಿಸಿದರು. ಅದೇ ರೀತಿ, ಚಿಕ್ಕಬಳ್ಳಾಪುರದ ಪ್ರಶಾಂತನಗರದಲ್ಲಿರುವ ಜಾಲಪ್ಪ ಸೋದರಳಿಯ ಜಿ.ಎಚ್. ನಾಗರಾಜ್ ಅವರನ್ನು ಕಾರಿನಲ್ಲಿ ಬೇರೆಡೆ ಕರೆದೊಯ್ದು ವಿಚಾರಣೆ ನಡೆಸಿದ್ದು, ಆರ್.ಎಲ್.ಜಾಲಪ್ಪ ಗ್ರೂಪ್ ಸಂಸ್ಥೆಯ ಇಂಜಿನಿಯರ್ ಹನುಮಂತಪ್ಪ ಅವರಿಂದ ವ್ಯವಹಾರದ ಬಗ್ಗೆ ಹೇಳಿಕೆ ಪಡೆದಿದ್ದಾರೆ ಎನ್ನಲಾಗಿದೆ.

ಪ್ರತಿಭಟನೆ: ಇಲ್ಲಿನ ಎಸ್‌ಎಸ್‌ಐಟಿ ಕಾಲೇಜು ಮುಂಭಾಗ ಪರಮೇಶ್ವರ್ ಅಭಿಮಾನಿಗಳು ಪ್ರತಿಭಟನೆ ನಡೆಸಿದರು. ಬಿಜಿಎಸ್ ವೃತ್ತದಲ್ಲೂ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು. ಬಳಿಕ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು. ಇತ್ತ, ಐಟಿ ಅಧಿಕಾರಿಗಳ ಶೋಧ ಕಾರ್ಯ ಹಿನ್ನೆಲೆ, ಬೆಂಗಳೂರಿನ ಪರಮೇಶ್ವರ್ ನಿವಾಸ, ಸಿದ್ದಾರ್ಥ ಕಾಲೇಜು, ಸುತ್ತಮುತ್ತ ಭಾರೀ ಪೊಲೀಸ್ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು.

ಇಬ್ಬರಿಗೆ ಸಮನ್ಸ್
ಐಟಿ ದಾಳಿ ಪ್ರಕರಣ ಸಂಬಂಧ ಪರಮೇಶ್ವರ್ ಅವರ ಸಹೋದರನ ಪುತ್ರ ಆನಂದ್ ಮತ್ತು ಕುಮಾರ್ ಭಾಸ್ಕರ್ ಎಂಬುವರಿಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸಮನ್ಸ್ ನೀಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News