'ಟ್ರೋಲ್ ಮಗ' ಪೇಜ್ ಅಡ್ಮಿನ್ ತನಿಖೆ ನಡೆಸಿದ್ದ ಪೊಲೀಸರಿಗೆ 1 ಲಕ್ಷ ದಂಡ ವಿಧಿಸಿದ ಹೈಕೋರ್ಟ್

Update: 2020-10-12 06:59 GMT

ಬೆಂಗಳೂರು, ಅ.11: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಕುಟುಂಬದ ವಿರುದ್ಧ ಪೋಸ್ಟ್ ಮಾಡಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಆರೋಪಿ ವಿರುದ್ಧ ಅಕ್ರಮವಾಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಿದ್ದ ಅಧಿಕಾರಿಗಳಿಗೆ ಹೈಕೋರ್ಟ್ 1 ಲಕ್ಷ ರೂ.ದಂಡ ವಿಧಿಸಿ, ಪೊಲೀಸರನ್ನು ತನಿಖೆಗೊಳಪಡಿಸಲು ಆದೇಶಿಸಿದೆ.

ಈ ಕುರಿತು ಟ್ರೋಲ್ ಮಗ ಪೇಜ್ ಅಡ್ಮಿನ್ ಎಸ್.ಜೈಕಾಂತ್ ಪ್ರಕರಣ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನ್ಯಾಯಮೂರ್ತಿ ಫಣೀಂದ್ರ ಅವರಿದ್ದ ರಜಾಕಾಲದ ಏಕಸದಸ್ಯ ನ್ಯಾಯಪೀಠದಲ್ಲಿ ನಡೆಯಿತು. ಅಕ್ರಮವಾಗಿ ದೂರು ದಾಖಲಿಸಿಕೊಂಡು ಟ್ರೋಲ್ ಮಗ ಪೇಜ್ ಅಡ್ಮಿನ್ ಎಸ್.ಜೈಕಾಂತ್‌ನನ್ನು ಅಕ್ರಮವಾಗಿ ಬಂಧನದಲ್ಲಿಟ್ಟಿದ್ದೀರಾ ಎಂದು ಪ್ರಶ್ನಿಸಿದ ನ್ಯಾಯಪೀಠವು, ಪ್ರಕರಣದ ತನಿಖೆ ಮಾಡಿದ್ದ ಅಧಿಕಾರಿಗಳನ್ನು ತನಿಖೆಗೆ ಒಳಪಡಿಸಿ, ಹಾಗೆಯೇ ಮ್ಯಾಜಿಸ್ಟ್ರೇಟ್ ಮೇಲೆಯೂ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್‌ಗೆ ಸೂಚಿಸಿ, ಜೈಕಾಂತ್ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸಿ ಆದೇಶಿಸಿತು.

ಪ್ರಕರಣವೇನು: ಟ್ರೋಲ್ ಮಗಾ ಪೇಜ್ ಅಡ್ಮಿನ್ ಜೈಕಾಂತ್ ದೇವೇಗೌಡರ ಕುಟುಂಬದ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ್ದ ಎನ್ನಲಾಗಿತ್ತು. ಹೀಗಾಗಿ, ಜೈಕಾಂತ್ ವಿರುದ್ಧ ಜೆಡಿಎಸ್ ಪಕ್ಷದ ಕಾರ್ಯಕರ್ತರು ಶ್ರೀರಾಂಪುರ ಠಾಣೆಯಲ್ಲಿ ದೂರು ನೀಡಿದ್ದರು. ನಂತರ ಈ ದೂರು ಸಂಬಂಧ ಸೆಷನ್ಸ್ ಕೋರ್ಟ್‌ನಲ್ಲಿ ಆರೋಪಿ ಜಾಮೀನು ತಂದು ದಾಖಲೆಗಳನ್ನು ಸಲ್ಲಿಸಲು ಠಾಣೆಗೆ ಹೋಗಿದ್ದ. ಈ ವೇಳೆ ಜೈಕಾಂತ್‌ನನ್ನು ಇನ್ನೊಂದು ಎಫ್‌ಐಆರ್ ದಾಖಲಿಸಿ ಬಂಧಿಸಿ, ವಶಕ್ಕೆ ತೆಗೆದುಕೊಂಡಿದ್ದರು. ಪೊಲೀಸರ ಈ ಕ್ರಮ ಪ್ರಶ್ನಿಸಿ ಜೈಕಾಂತ್ ಪರ ವಕೀಲ ಅರುಣ್ ಶ್ಯಾವ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News