ತನಿಖಾ ಸಂಸ್ಥೆಗಳನ್ನು ಮೋದಿ ತಮ್ಮ ಹಿತಕ್ಕೆ ಬಳಸಿಕೊಳ್ಳುತ್ತಿದ್ದಾರೆ: ಎಚ್.ಡಿ.ದೇವೇಗೌಡ

Update: 2019-10-11 16:16 GMT

ಮೈಸೂರು,ಅ.11: ಐಟಿ, ಈಡಿ, ಸಿಬಿಐ ಸೇರಿದಂತೆ ಎಲ್ಲಾ ತನಿಖಾ ಸಂಸ್ಥೆಗಳನ್ನು ಪ್ರಧಾನಿ ನರೇಂದ್ರ ಮೋದಿ ತಮ್ಮ ಹಿತಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಬಿಜೆಪಿಯಲ್ಲಿ ಇರುವವರೆಲ್ಲಾ ಸತ್ಯವಂತರೇ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಖಾರವಾಗಿ ಪ್ರಶ್ನಿಸಿದರು.

ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಾಜಿ ಡಿಸಿಎಂ ಡಾ.ಜಿ. ಪರಮೇಶ್ವರ್ ಮನೆ ಮೇಲೆ ಐಟಿ ದಾಳಿ ವಿಚಾರಕ್ಕೆ ಪ್ರತಿಕ್ರಿಯಿಸಿ ತಮ್ಮ ಎದುರಾಳಿಗಳನ್ನು ಮಣಿಸಲು ತನಿಖಾ ಸಂಸ್ಥೆಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಜಿ.ಪರಮೇಶ್ವರ್ ತಂದೆ ಮೆಡಿಕಲ್ ಕಾಲೇಜ್ ಸ್ಥಾಪಿಸಿ ಅದನ್ನು ಬೆಳೆಸಿದ್ದಾರೆ. ಅವರೇನೂ ನಿನ್ನೆ ಮೊನ್ನೆ ಶ್ರೀಮಂತರಾದವಲ್ಲ. ಪರಮೇಶ್ವರ್ ತಂದೆ ಮಾಡಿದ ಆಸ್ತಿ ಅದು. 50 ವರ್ಷದ ಹಿಂದೆಯೇ ಅವರು ಈ ಆಸ್ತಿ ಮಾಡಿದ್ದರು. ಪರಮೇಶ್ವರ್ ಏನು ಮಾಡಿದ್ದಾರೆ. ಹೊಸ ಪ್ರವೇಶಾತಿಯಲ್ಲಿ ಒಂದಿಷ್ಟು ವ್ಯತ್ಯಾಸ ಆಗಿರಬಹುದು. ಪರಮೇಶ್ವರ್ ದಿಢೀರನೆ ಐದು ಸಾವಿರ ಕೋಟಿ ಆಸ್ತಿ ಮಾಡಿಲ್ಲ. ಹಾಗಾದರೆ ಬಿಜೆಪಿಯಲ್ಲಿ ಇರುವವರೆಲ್ಲಾ ಪ್ರಾಮಾಣಿಕರಾ? ಅವರಲ್ಲಿ ತಪ್ಪು ಮಾಡಿದವರೇ ಇಲ್ವಾ ಎಂದು ಪ್ರಶ್ನಿಸಿದರು.

ಮಾಧ್ಯಮ ನಿಷೇಧ ಕೆಟ್ಟ ನಿರ್ಧಾರ: ವಿಧಾನಸಭೆ ಅಧಿವೇಶನ ಕಲಾಪಕ್ಕೆ ಮಾಧ್ಯಮವನ್ನು ನಿಷೇಧಿಸಿರುವುದು ಸರಕಾರದ ಕೆಟ್ಟ ನಿರ್ಧಾರ ಎಂದು ಪ್ರಶ್ನೆಯೊಂದಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು.

ಮಾಧ್ಯಮಗಳಗೆ ನಿರ್ಬಂಧ ಮಾಡಬಾರದಿತ್ತು. ಈ ಸಂಬಂಧ ನಾನು ಸ್ಪೀಕರ್ ಗೆ ಕಠಿಣ ಪದಗಳಲ್ಲಿ ಪತ್ರ ಬರೆದಿದ್ದೇನೆ ಎಂದು ಹೇಳಿದರು.

ಚಾಮುಂಡೇಶ್ವರಿ ಅಶೀರ್ವಾದ ಪಡೆದ ಮಾಜಿ ಪ್ರಧಾನಿ: ಇದಕ್ಕೂ ಮೊದಲು ಚಾಮುಂಡಿ ಬೆಟ್ಟಕ್ಕೆ ತೆರಳಿದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಾಯಿ ಶ್ರೀಚಾಮುಂಡೇಶ್ವರಿ ದೇವಿಯ ಆಶೀರ್ವಾದ ಪಡೆದರು.

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನವರಾತ್ರಿ ಸಂದರ್ಭದಲ್ಲಿ ದೇವಿ ದರ್ಶನ ಮಾಡಬೇಕಿತ್ತು. ದಸರಾ ಸಂದರ್ಭದಲ್ಲಿ ಜನಜಂಗುಳಿ ಇದ್ದಿದ್ದರಿಂದ ಬರಲು ಸಾಧ್ಯವಾಗಿರಲಿಲ್ಲ. ಇಂದು ಶುಕ್ರವಾರ ದೇವಿಯ ದರ್ಶನ ಪಡೆದಿದ್ದೇನೆ. ರಾಜ್ಯಕ್ಕೆ ಒಳಿತಾಗಲಿ ಎಂದು ದೇವರಲ್ಲಿ ಬೇಡಿಕೊಂಡಿದ್ದೇನೆ ಎಂದು ಹೇಳಿದರು.

ನಾನೇನೂ ಅಧಿಕಾರ ಕೊಡಿ ಅಂತಾ ಕಾಂಗ್ರೆಸ್ ಮನೆಗೆ ಹೋಗಿರಲಿಲ್ಲ. ಗುಲಾಂ ನಬಿ ಅಜಾದ್ ಅವರೆ ಮನೆಗೆ ಬಂದು ನನ್ನ ಕೈ ಹಿಡಿದು ಕೊಂಡು ಒದ್ದಾಡಿ ನಮಗೆ ಅಧಿಕಾರ ಕೊಟ್ಟರು. ನಮಗೆ ಅಧಿಕಾರ ಬೇಡ, ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಿಎಂ ಮಾಡಿ ಎಂದಿದ್ದೆ, ಆದರೂ ಕೈ ಹಿಡಿದು ಕೊಂಡು ನನ್ನನ್ನು ಒಪ್ಪಿಸಿದರು. ಮೈತ್ರಿ ಸರಕಾರ ಇದ್ದಾಗ ತನ್ನ ಒಂದು ಕಾರ್ಯಕ್ರಮವೂ ನಿಲ್ಲಬಾರದು ಅಂತ ಸಿದ್ದರಾಮಯ್ಯ ಕಂಡೀಷನ್ ಹಾಕಿದ್ದರು. ಆ ಯೋಜನೆಗಳನ್ನು ಮುಂದುವರಿಸಿ, ಅದಕ್ಕೆ ಹಣ ಹೊಂದಿಸಿ ಕೊಡಗಿಗೂ ಎಚ್.ಡಿ.ಕುಮಾರಸ್ವಾಮಿ ಪರಿಹಾರ ಹಣ ಕೊಟ್ಟರು. ಆಗ ಕೇಂದ್ರ ಸರಕಾರ ತತ್ ಕ್ಷಣ ಒಂದು ರೂಪಾಯಿ ಕೊಟ್ಟಿರಲಿಲ್ಲ. ಕುಮಾರಸ್ವಾಮಿ ಎಲ್ಲವನ್ನು ಸರಿದೂಗಿಸಿದರು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News