'ಸ್ಪೀಕರ್ ಒಬ್ಬ ಅವಿವೇಕಿ': ಕಲಾಪಕ್ಕೆ ಕ್ಯಾಮರಾ ನಿರ್ಬಂಧ ಆದೇಶಕ್ಕೆ ವಾಟಾಳ್ ನಾಗರಾಜ್ ಕಿಡಿ

Update: 2019-10-11 16:56 GMT

ಚಾಮರಾಜನಗರ, ಅ.11: ಕರ್ನಾಟಕದ ಸ್ಪೀಕರ್ ಒಬ್ಬ ಅವಿವೇಕಿ, ಸ್ಪೀಕರ್ ಸ್ಥಾನದಲ್ಲಿ ಕೊರಬೇಕಾದರೆ ಯಾರ ಮಾತನ್ನು ಕೇಳಬಾರದು ಪ್ರಾಮಾಣಿಕವಾಗಿ ನಡೆದುಕೊಳ್ಳಬೇಕು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಸ್ಪೀಕರ್ ನಾಟಕ ಆಡುತ್ತಿದ್ದಾರೆ ಎಂದು ಮಾಜಿ ಶಾಸಕ ಹಾಗೂ ಕನ್ನಡ ಹಿರಿಯ ಚಳವಳಿಗಾರ ವಾಟಾಳ್ ನಾಗರಾಜ್ ಎಂದು ಆರೋಪಿಸಿದರು.

ಅವರು ಶುಕ್ರವಾರ ನಗರಕ್ಕೆ ಆಗಮಿಸಿ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿಯವರನ್ನು ಭೇಟಿ ಮಾಡಿ, ಜಿಲ್ಲೆಯ ಸಮಗ್ರ ಅಭಿವೃದ್ದಿ ಬಗ್ಗೆ ಚರ್ಚೆ ನಡೆಸಿದ ಬಳಿಕ ಮಾದ್ಯಮದವರೊಂದಿಗೆ ಮಾತನಾಡಿ, ರಾಜ್ಯದ ವಿಧಾನ ಸಭೆ ಅಧಿವೇಶನದ ವೇಳೆಯಲ್ಲಿ ಮಾಧ್ಯಮಗಳ ಮೇಲೆ ನಿರ್ಬಂಧ ಹೇರಿಕೆ ಮಾಡಿರುವುದು ಸಂವಿಧಾನಕ್ಕೆ ದಕ್ಕೆ ಎಂದ ಅವರು, ಮಾಧ್ಯಮಗಳನ್ನು ಸದನಕ್ಕೆ ಬಿಡದಿರುವುದು ಖಂಡನೀಯ. ಇದರ ವಿರುದ್ಧ ಹೋರಾಟ ಮಾಡುತ್ತೇನೆ ಎಂದು ಹೇಳಿದರು.

ಯಡಿಯೂರಪ್ಪ ಬೆಕ್ಕು ಕಣ್ಮುಚ್ಚಿ ಹಾಲು ಕುಡಿದರೆ ದೇಶಕ್ಕೆ ತಿಳಿಯುವುದಿಲ್ಲ ಎನ್ನುವ ರೀತಿ ವರ್ತನೆ ಮಾಡುತ್ತಿದ್ದಾರೆ. ಅವರು ದುರ್ಬುದ್ಧಿ ಬಿಡಬೇಕು. ನೀವು ಮಾತನಾಡುವ, ಮಲಗಿರುವ ಹಾಗೂ ಚಿತ್ರಗಳನ್ನು ನೋಡುವ ದೃಶ್ಯಗಳನ್ನು ತೆಗೆಯಬಾರದೇ ಎಂದು ಕೆಣಕಿದ ವಾಟಾಳ್, ನಾನು ಏನಾದರೂ ಈ ಭಾರಿ ಶಾಸಕನಾಗಿದ್ದರೆ ಎಲ್ಲರೂ (ಮಾದ್ಯಮದವರು) ಇಷ್ಟೊತ್ತಿಗೆ ಒಳಗೇ ಇರುವಂತೆ ಮಾಡುತ್ತಿದ್ದೆ ಎಂದು ಹೇಳಿದರು.

ಸದನದ ಕಲಾಪದಿಂದ ಮಾದ್ಯಮದವರನ್ನು ದೂರವಿಟ್ಟ ವಿಚಾರದಲ್ಲಿ ವಿರೋಧ ಪಕ್ಷದವರು ಸಹ ನಾಟಕವಾಡುತ್ತಿದ್ದಾರೆ. ರಾಜೀನಾಮೆ ಕೊಟ್ಟು ಹೊರ ಬರಲಿ. ಕರ್ನಾಟಕದಲ್ಲಿ ಸದನವೇ ಇಲ್ಲ. ಬಜೆಟ್ ಹಾಗೂ ಬೇಡಿಕೆಗಳ ಬಗ್ಗೆ ಬೇಡಿಕೆ ಬಗ್ಗೆ ಚರ್ಚೆಯಾಗಿಲ್ಲ. ಕನಿಷ್ಠ ಪಕ್ಷ ಹದಿನೈದು ದಿನವಾದರೂ ಅಧಿವೇಶನ ನಡೆಯಬೇಕಿತ್ತು. ಮೂರು ದಿನದಲ್ಲಿ ಏನೂ ಮಾಡಲು ಸಾಧ್ಯವಿಲ್ಲ. ಜಿಲ್ಲೆ ಹಾಗೂ ರಾಜ್ಯದಲ್ಲಿ ಮರಳು ಗಣಿಗಾರಿಕೆ ಹಾಗೂ ಕಲ್ಲು ಗಣಿಗಾರಿಕೆ ಲೂಟಿ  ಅತಿಯಾಗಿದೆ. ಈ ದಂಧೆಯಲ್ಲಿ ಮೂರು ಪಕ್ಷಗಳು ಸಹ ಶಾಮೀಲಾಗಿದ್ದಾರೆ. ಇದನ್ನು ಕೂಡಲೇ ಸಿಬಿಐ ತನಿಖೆ ಮಾಡಿಸುವ ಮೂಲಕ ಪ್ರಕರಣ ಬೆಳಕಿಗೆ ತರಬೇಕು ಎಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News