ಪರಮೇಶ್ವರ್ ಶಿಕ್ಷಣ ಸಂಸ್ಥೆ ಮೇಲಿನ ಐಟಿ ದಾಳಿ ರಾಜಕೀಯ ಪ್ರೇರಿತ: ಮಾಜಿ ಸಂಸದ ಆರ್.ಧ್ರುವನಾರಾಯಣ್

Update: 2019-10-11 18:01 GMT

ಮೈಸೂರು,ಅ.11: ಮಾಜಿ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರ ಅವರ ಶಿಕ್ಷಣ ಸಂಸ್ಥೆ ಮೇಲಿನ ಐಟಿ ದಾಳಿ ರಾಜಕೀಯ ಪ್ರೇರಿತ ಎಂದು ಮಾಜಿ ಸಂಸದ ಆರ್. ದ್ರುವನಾರಾಯಣ್ ಆರೋಪಿಸಿದರು.

ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಐಟಿ ದಾಳಿ ತಪ್ಪಲ್ಲ. ಅದನ್ನು ಮಾಡಬೇಡಿ ಎಂದು ನಾವು ಹೇಳುವುದಿಲ್ಲ. ಬಿಜೆಪಿ ಸರ್ಕಾರ ಬಂದ ನಂತರ ವಿಪಕ್ಷಗಳ ಮೇಲೆ ರಾಜಕೀಯ ಪ್ರೇರಿತ ದಾಳಿ ನಡೆಸಿದ್ದಾರೆ. ಡಾ.ಜಿ.ಪರಮೇಶ್ವರ್ ಅವರ ತಂದೆ ಗಂಗಾಧರಯ್ಯ ಶಿಕ್ಷಣ ಭೀಷ್ಮ. ಬಡವರಿಗಾಗಿ ಅನೇಕ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿದ್ದಾರೆ. ಸಿದ್ದಾರ್ಥ ಟ್ರಸ್ಟ್ ಮೂಲಕ 30-40 ವರ್ಷಗಳ ಕಾಲದ ಹಿಂದೆಯೇ ವಿದ್ಯಾ ಸಂಸ್ಥೆಗಳನ್ನು ಆರಂಭಿಸಿದ್ದರು. ಶಿಕ್ಷಣ ಸಂಸ್ಥೆಯಿಂದ ಲಾಭ ಮಾಡುವುದು ಅವರಿಗೆ ಬೇಕಾಗಿಲ್ಲ. ಗ್ರಾಮೀಣ ಮಕ್ಕಳಿಗೆ ಶಿಕ್ಷಣ ನೀಡಲು ಸ್ಥಾಪಿಸಿದ್ದ ಸಂಸ್ಥೆ ಅದು ಎಂದರು.

ಜಾಲಪ್ಪ ಮೇಲಿನ ಐಟಿ ದಾಳಿಗೆ ಕೂಡ  ಅಸಮಾಧಾನ ವ್ಯಕ್ತಪಡಿಸಿದ ಅವರು ವಿರೋಧ ಪಕ್ಷದ ನಾಯಕರ ಮೇಲೆ ದಾಳಿಮಾಡಿ ದಮನ ಮಾಡುವ ಕಾರ್ಯ ಪ್ರಜಾಪ್ರಭುತ್ವದ ಕಗ್ಗೊಲೆ. ಆಪರೇಶನ್ ಕಮಲ ಮಾಡಿದ್ದಾರೆ ಆ ಬಗ್ಗೆ ಐಟಿ ದಾಳಿಯಾಕಿಲ್ಲ ಎಂದು ಪ್ರಶ್ನಿಸಿದರು. ಜನಾರ್ದನ ರೆಡ್ಡಿ ಮಗಳ ಮದುವೆಗೆ ಎಷ್ಟೋ ಕೋಟಿ ಖರ್ಚು ಮಾಡಿದ್ದಾರೆ. ಚಿನ್ನಾಭರಣಗಳನ್ನು ಸಾಕಷ್ಟು ನೀಡಿದ್ದಾರೆ. ಅವರ ಮೇಲೆ ಯಾಕೆ ಐಟಿ ದಾಳಿ ಮಾಡುವುದಿಲ್ಲ ಎಂದು ಪ್ರಶ್ನಿಸಿದರು.

ಮೋದಿ ಮುಖ್ಯಮಂತ್ರಿಯಾಗಿದ್ದಾಗಲೂ ಸಹ ಗುಜರಾತ್ ನಲ್ಲಿ ರಾಜಕೀಯವಾಗಿ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡಿದ್ದಾರೆ ಎಂದು ಆರೋಪಿಸಿದರು.

ಅಧಿವೇಶನಕ್ಕೆ ಮಾದ್ಯಮ ನಿರ್ಬಂಧ ವಿಚಾರಕ್ಕೆ ಪ್ರತಿಕ್ರಿಯಿಸಿ, ಪತ್ರಿಕಾ ಸ್ವಾತಂತ್ರ್ಯಮೊಟಕು ಗೊಳಿಸುವ ಕಾರ್ಯ ಇದು. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತಂದಿದ್ದಾರೆ. ಪ್ರಜಾಪ್ರಭುತ್ವದ ಧೋರಣೆಗಳನ್ನು ಹತ್ತಿಕ್ಕಲಾಗುತ್ತಿದೆ. ಪ್ರಧಾನಿಗಳು ಪತ್ರಿಕಾ ಗೋಷ್ಠೀಯನ್ನೂ ಕರೆಯುವುದಿಲ್ಲ. 5-6 ವರ್ಷಗಳಾಗುತ್ತಾ ಬಂತು. ಯಾರು ಒಳ್ಳೆಯ ನಾಯಕರೋ ಮತ್ತು ಸಂಘಟನಾಕಾರರೋ ಅವರ ಮೇಲೆ ದುರುದ್ದೇಶ ಪೂರ್ವಕವಾಗಿ ಐಟಿ ದಾಳಿ ಮಾಡಲಾಗುತ್ತಿದೆ. ಬಿಜೆಪಿ ಎಂಬುದು ಇಲ್ಲ ಬರೀ ಎರಡು ಹೆಸರಿನಲ್ಲಿ ಅವರು ಅಧಿಕಾರ ನಡೆಸುತ್ತಿದ್ದಾರೆ. ಅಲ್ಲಿ ಹಿರಿಯರಿಗೆ ಗೌರವ ಎಂಬುದೇ ಇಲ್ಲ. ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ ಎಂದು ವಾಗ್ದಾಳಿ ನಡೆಸಿದರು.

ಮೂರು ದಿನಕ್ಕೆ ಸದನ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಿಲ್ ಪಾಸ್ ಮಾಡಲಷ್ಟೇ ಸದನ ಕರೆದಿದ್ದಾರೆ. ವಿಶೇಷ ಅಧಿವೇಶನ ಕರೆದು ಚರ್ಚಿಸಬೇಕಿತ್ತು. ಬೆಳಗಾವಿಯಲ್ಲಿ ಅಧಿವೇಶನ ಮಾಡಬೇಕಿತ್ತು. ಈ ಮೂಲಕ ಪ್ರಾದೇಶಿಕ ಸಮತೋಲನ ಕಾಪಾಡಬೇಕು ಎಂದು ಕಿಡಿ ಕಾರಿದರು.

ಪತ್ರಿಕಾಗೋಷ್ಠಿಯಲ್ಲಿ ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಮೈಲ್ಯಾಕ್ ಮಾಜಿ ಅಧ್ಯಕ್ಷ ಎಚ್.ಎ.ವೆಂಕಟೇಶ್, ಬೋವಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಸೀತಾರಾಂ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News