ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಕಮಲಾ ಹಂಪನಾ ಸೇರಿ ಮೂವರು ಗಣ್ಯರ ಆಯ್ಕೆ: ಡಿಸಿಎಂ ಕಾರಜೋಳ

Update: 2019-10-11 18:03 GMT

ಬೆಂಗಳೂರು. ಸೆ. 11: ಪರಿಶಿಷ್ಟ ಜನಾಂಗದ ಶ್ರೇಯೋಭಿವೃದ್ಧಿಗಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮೂವರು ಗಣ್ಯರನ್ನು ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಎಂ.ಕಾರಜೋಳ ಇಂದಿಲ್ಲಿ ಪ್ರಕಟಿಸಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಡಾ.ಕಮಲಾ ಹಂಪನಾ, ಸಾಮಾಜಿಕ ಕ್ಷೇತ್ರದಲ್ಲಿ ಗುರುತರವಾಗಿ ಸೇವೆಸಲ್ಲಿಸುತ್ತಿರುವ ಓಬಳಪ್ಪ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಡಾ.ಜಿ.ರಂಗಯ್ಯ ಅವರನ್ನು ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ವಿಶ್ರಾಂತ ಕುಲಪತಿ ಹಾಗೂ ಮೈಸೂರು ವಿವಿ ಪ್ರಾಧ್ಯಾಪಕ ಡಾ.ನಿರಂಜನ್ ಎಸ್.ಆರ್. ಅವರ ಅಧ್ಯಕ್ಷತೆಯ ಆಯ್ಕೆ ಸಮಿತಿಯು ಈ ಮೂವರು ಗಣ್ಯರನ್ನು ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಆಯ್ಕೆ ಮಾಡಿ ಶಿಫಾರಸ್ಸು ಮಾಡಿದ್ದು, ಸರಕಾರವು ಈ ಶಿಫಾರಸ್ಸನ್ನು ಅಂಗೀಕರಿಸಿದೆ.

ಅ.13ರಂದು ವಾಲ್ಮೀಕಿ ಜಯಂತಿ ಕಾರ್ಯಕ್ರಮ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆಯಲಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಉದ್ಘಾಟಿಸಲಿದ್ದು, ಈ ಸಮಾರಂಭದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ಪ್ರತಿ ಪ್ರಶಸ್ತಿಯು ತಲಾ 20 ಗ್ರಾಂ ಚಿನ್ನದ ಪದಕ ಹಾಗೂ 5 ಲಕ್ಷ ರೂ.ನಗದು ಒಳಗೊಂಡಿರುತ್ತದೆ ಎಂದು ಅವರು ತಿಳಿಸಿದರು.

ಡಾ.ಕಮಲಾ ಹಂಪನಾ ಅವರು ಕರ್ನಾಟಕದ ಅಗ್ರಗಣ್ಯ ಸಾಹಿತಿಯಾಗಿದ್ದಾರೆ. ನಿರಂತರ ಪರಿಶ್ರಮ, ನಾಡುನುಡಿಯ ಬಗೆಗಿನ ಅನುಪಮ ಪ್ರೀತಿ, ಅವರ ಸಾಹಿತ್ಯಕ ಸಾಧನೆಯಿಂದಲೇ ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ಚಾಪು ಮೂಡಿಸಿದ್ದಾರೆ. ರಾಜ್ಯ ಸಾಹಿತ್ಯ ಅಕಾಡೆು ಪ್ರಶಸ್ತಿಯಿಂದ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಯವರೆಗೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಓಬಳಪ್ಪ ನಿವೃತ್ತ ಕೃಷಿ ಅಧಿಕಾರಿಯಾಗಿದ್ದು, ಮಹರ್ಷಿ ವಾಲ್ಮೀಕಿ ಗುರುಪೀಠದ ಆಡಳಿತಾಧಿಕಾರಿಯಾಗಿ ಹಾಗೂ ಹರಿಹರದ ವಾಲ್ಮೀಕಿ ಹಾಸ್ಟಲ್ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವಾಲ್ಮೀಕಿ ಸಮಾಜದ ಮಕ್ಕಳಿಗೆ ಶಿಕ್ಷಣದ ಮೌಲ್ಯಗಳ ಬಗ್ಗೆ ಅರಿವು ಮೂಡಿಸಿ, ಉಚಿತ ಶಿಕ್ಷಣ ದೊರಕಿಸಿಕೊಡಲು ಅವಿರತವಾಗಿ ಶ್ರಮಿಸುತ್ತಿದ್ದಾರೆ. ಪರಿಶಿಷ್ಟ ವರ್ಗಗಳ ಜನರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಶ್ರಮಿಸುತ್ತಿದ್ದಾರೆ.

ಡಾ.ಜಿ.ರಂಗಯ್ಯ ನರರೋಗ ತಜ್ಞರಾಗಿದ್ದಾರೆ. ಅವರು ದೇಶದಲ್ಲಿ ನ್ಯೂಯಾರ್ಕ್ ಸಿಟಿ ಮೆಡಿಕಲ್ ಸೊಸೈಟಿ ಅಧ್ಯಕ್ಷರಾಗಿ, ಅಮೆರಿಕ ದೇಶದಲ್ಲಿರುವ ಇಂಡಿಯನ್ ನ್ಯೂರಾಲಜಿಸ್ಟ್ ಸಂಸ್ಥೆಯ ಕಾರ್ಯದರ್ಶಿಯಾಗಿ, ಇಂಡಿಯನ್ ನ್ಯೂರಾಲಜಿಸ್ಟ್ ನ್ಯಾಷನಲ್ ಅಸೋಸಿಯೇಷನ್ ಅಧ್ಯಕ್ಷರಾಗಿ, ನ್ಯೂಯಾರ್ಕ್‌ನ ಪ್ರತಿಷ್ಠಿತ ಸ್ಥಳಗಳಲ್ಲಿ ಸ್ಥಾಪಿಸಿರುವ ಮಹಾತ್ಮ ಗಾಂಧಿ ಪ್ರತಿಮೆಯ ಸ್ಥಾಪಕ ಸಮಿತಿ ಸದಸ್ಯರಾಗಿದ್ದಾರೆ. ರಾಷ್ಟದಲ್ಲಿ ಶೈಕ್ಷಣಿಕ ಕ್ಷೇತ್ರಕ್ಕೆ ಅಪಾರವಾಗಿ ಸೇವೆ ಸಲ್ಲಿಸಿದ್ದಾರೆಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News