ನೆರೆ ಹಾವಳಿಯಿಂದಾಗಿ ಒಂದು ಲಕ್ಷ ಕೋಟಿಗೂ ಅಧಿಕ ನಷ್ಟವಾಗಿದೆ: ಪ್ರಕಾಶ್ ರಾಥೋಡ್
ಬೆಂಗಳೂರು, ಅ.11: ಕೆಪಿಸಿಸಿ ವತಿಯಿಂದ ಸಮೀಕ್ಷೆ ನಡೆಸಿರುವ ಪ್ರಕಾರ ರಾಜ್ಯದಲ್ಲಿ ನೆರೆ ಹಾವಳಿಯಿಂದ ಒಂದು ಲಕ್ಷ ಕೋಟಿ ರೂ.ಗೂ ಅಧಿಕ ನಷ್ಟ ಉಂಟಾಗಿದ್ದು, ರಾಷ್ಟ್ರೀಯ ವಿಪತ್ತೆಂದು ಘೋಷಿಸಬೇಕೆಂದು ಕಾಂಗ್ರೆಸ್ ಸದಸ್ಯ ಪ್ರಕಾಶ್ ರಾಥೋಡ್ ಒತ್ತಾಯಿಸಿದರು.
ಶುಕ್ರವಾರ ವಿಧಾನಪರಿಷತ್‌ನಲ್ಲಿ ನಿಯಮ 68ರಡಿ ನೆರೆ ಪರಿಹಾರದ ಕುರಿತು ಮಾತನಾಡಿದ ಅವರು, ಕೆಪಿಸಿಸಿ ಮುಖಂಡರಾದ ಆರ್.ವಿ.ದೇಶಪಾಂಡೆ, ಎಚ್.ಕೆ.ಪಾಟೀಲ್ ಸೇರಿದಂತೆ ಹಲವು ನಾಯಕರು ನೆರೆ ಹಾವಳಿ ಕುರಿತು ಸಮೀಕ್ಷೆ ನಡೆಸಿದ್ದಾರೆ. ನಮ್ಮ ಸಮೀಕ್ಷಾ ವರದಿಯನ್ನು ಪ್ರಧಾನಿ ನರೇಂದ್ರ ಮೋದಿಗೆ ಕಳುಹಿಸಿಕೊಟ್ಟಿದ್ದೇವೆ. ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲವೆಂದು ತಿಳಿಸಿದರು.
ನೆರೆ ಹಾವಳಿಯಿಂದಾಗಿ ಎರಡು ಲಕ್ಷ ಕುಟುಂಬಗಳು ಬೀದಿಗೆ ಬಿದ್ದಿದ್ದಾರೆ. ಆದರೆ, ರಾಜ್ಯ ಸರಕಾರ ಇಲ್ಲಿಯವರೆಗೆ ಕೇವಲ 352ಕೋಟಿ ರೂ.ಮಾತ್ರ ಬಿಡುಗಡೆ ಮಾಡಿದೆ. ಉಳಿದವರು ಎಲ್ಲಿಗೆ ಹೋಗಬೇಕು. ಇದರ ಜೊತೆಗೆ 7.9ಲಕ್ಷ ಹೆಕ್ಟರ್ ಕೃಷಿ ಭೂಮಿ ನಾಶವಾಗಿದೆ. ಫಲವತ್ತಾದ ಭೂಮಿ ಕೊಚ್ಚಿ ಹೋಗಿದೆ. ಸಾವಿರಾರು ಎಕರೆ ಕಾಫಿ ತೋಟಗಳು ಸರ್ವನಾಶವಾಗಿದೆ. ಸಾವಿರಾರು ಕಿಮೀ ರಸ್ತೆ, ವಿದ್ಯುತ್ ಕಂಬಗಳು ನೆರೆ ಹಾವಳಿಗೆ ಕೊಚ್ಚಿ ಹೋಗಿವೆ. ಇವುಗಳ ಪುನರ್ ವಸತಿ ಶಾಶ್ವತ ಪರಿಹಾರ ಒದಗಿಸಲು ಸರಕಾರ ಏನು ಕ್ರಮ ಕೈಗೊಂಡಿದೆ ಎಂದು ಅವರು ಪ್ರಶ್ನಿಸಿದರು.
ಈ ವೇಳೆ ಮಧ್ಯೆ ಪ್ರವೇಶಿಸಿದ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ, ನೆರೆ ಹಾವಳಿಯಿಂದ ಒಂದು ಲಕ್ಷ ಕೋಟಿ ರೂ. ನಷ್ಟ ಆಗಿರುವುದಕ್ಕೆ ಸರಿಯಾದ ಮಾಹಿತಿ ಕೊಡಿ. ನಮಗೂ ಜ್ಞಾನೋದಯವಾಗುತ್ತದೆ ಎಂದರು. ಇದಕ್ಕೆ ಪ್ರತಿಪಕ್ಷದ ಸದಸ್ಯರು ಆಕ್ರೋಶ ವ್ಯಕ್ತಪಡಿಸಿ, ಕೆಪಿಸಿಸಿ ಸಿದ್ಧಪಡಿಸಿರುವ ವರದಿಯ ಪುಸ್ತಕವನ್ನು ಕೈಯಲ್ಲಿ ಹಿಡಿದು ಇದನ್ನು ನಿಮಗೆ ತಲುಪಿಸುತ್ತೇವೆ ಓದಿಕೊಳ್ಳಿ ಎಂದು ತಿರುಗೇಟು ನೀಡಿದರು.
ಪುನಃ ತಮ್ಮ ಮಾತನ್ನು ಮುಂದುವರೆಸಿದ ಪ್ರಕಾಶ್ ರಾಥೋಡ್, ಅಣೆಕಟ್ಟು ಪ್ರದೇಶಗಳ ಹಿನ್ನೀರಿನಲ್ಲಿ ನೆಲೆಗೊಂಡಿರುವ ಊರುಗಳನ್ನು ಸಂಪೂರ್ಣವಾಗಿ ಸ್ಥಳಾಂತರ ಮಾಡಿ, ಮರು ನಿರ್ಮಿಸಬೇಕಿದೆ. ಹಾಗೂ ಮತ್ತೊಮ್ಮೆ ನೆರೆ ಹಾವಳಿ ಸಂಭವಿಸದಂತೆ ಎಚ್ಚರಿಕೆ ವಹಿಸುವ ನಿಟ್ಟಿನಲ್ಲಿ ತಜ್ಞರ ಸಮಿತಿ ರಚಿಸಿ, ಜಲಪ್ರವಾಹಕ್ಕೆ ಶಾಶ್ವತ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿದರು.
ಪ್ರಧಾನಿ ನರೇಂದ್ರ ಮೋದಿ ಬಳಿ ನೆರೆ ಪರಿಹಾರಕ್ಕೆ ಸಂಬಂಧಿಸಿದಂತೆ ಮಾತನಾಡಲು ರಾಜ್ಯದ ಬಿಜೆಪಿ ನಾಯಕರಿಗೆ ಧೈರ್ಯ ಇಲ್ಲದಿದ್ದರೆ, ಸರ್ವಪಕ್ಷ ನಿಯೋಗವನ್ನು ಕರೆದುಕೊಂಡು ಹೋಗಲಿ. ನಾವು ರಾಜ್ಯಕ್ಕೆ ಆಗಿರುವ ಸಮಸ್ಯೆಗಳನ್ನು ವಿವರಿಸಿ ಪರಿಹಾರಕ್ಕೆ ಒತ್ತಾಯಿಸುತ್ತೇವೆ.
-ಪ್ರಕಾಶ್ ರಾಥೋಡ್, ಕಾಂಗ್ರೆಸ್ ಸದಸ್ಯ