ಸುಮಲತಾ ಹೆಸರೇಳಿ ರಾಜಕೀಯ ಮಾಡಬೇಕಾದ ಪರಿಸ್ಥಿತಿ ಬಂದಿಲ್ಲ: ಮಾಜಿ ಸಂಸದ ಶಿವರಾಮೇಗೌಡ

Update: 2019-10-12 14:09 GMT

ನಾಗಮಂಗಲ, ಅ.12: ಸುಮಲತಾ ಸಂಸದೆಯಾಗುವ ಮುನ್ನವೇ ನಾನು ಮೂವತ್ತು ವರ್ಷದಿಂದ ಫಸ್ಟ್ ಕ್ಲಾಸ್ ರಾಜಕೀಯ ಮಾಡಿಕೊಂಡು ಬಂದವನು. ಇವರ ಹೆಸರು ಹೇಳಿಕೊಂಡು ರಾಜಕೀಯ ಮಾಡಬೇಕಾದ ಪರಿಸ್ಥಿತಿ ನಮಗೆ ಬಂದಿಲ್ಲ ಎಂದು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ತಿರುಗೇಟು ನೀಡಿದ್ದಾರೆ.

ಪಟ್ಟಣದ ಪ್ರವಾಸಿಮಂದಿರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವರು ನನ್ನನ್ನ ಟೀಕೆ ಮಾಡುತ್ತಾ ಮಾಧ್ಯಮಗಳಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ ಎಂಬ ಸುಮಲತಾ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸ್ವಾಭಿಮಾನದ ಹೆಸರಿನಲ್ಲಿ ಮತ ಪಡೆದ ಇವರು ಮಂಡ್ಯದಲ್ಲಿ ಬಿಜೆಪಿ, ನಾಗಮಂಗಲದಲ್ಲಿ ಕಾಂಗ್ರೆಸ್ ಕಚೇರಿಗೆ ಹೋಗುತ್ತಾರೆ. ಯಾರಿಗೆ ಎಷ್ಟು ಪಾಲು ಕೊಡುತ್ತಾರೆ ನೋಡೋಣ ಎಂದು ವ್ಯಂಗ್ಯವಾಡಿದರು.

ಮಂಡ್ಯ ಕಬ್ಬು ಬೆಳೆಗಾರರ ಸಂಕಷ್ಟಕ್ಕೆ ಕುಮಾರಸ್ವಾಮಿ ಸರಕಾರವೇ ಕಾರಣವೆಂದು ಆರೋಪಿಸುವ ಸುಮಲತಾ ಅವರು, ಈಗ ಸಂಸದೆಯಾಗಿದ್ದು, ಅವರೇ ಸಮಸ್ಯೆ ಬಗೆಹರಿಸಲಿ. ಅದು ಬಿಟ್ಟು ಕೆಸರೆರಚಾಟ ಏಕೆ? ಓಟ್ ಹಾಕಿದವರ ಮನೆಯಲ್ಲಿ ಊಟಕ್ಕೆ ಹೋಗಲಿ, ನಮ್ಮ ಜೆಡಿಎಸ್ ಕಚೇರಿಗೆ ಬರೋದು ಬೇಡ, ನಾವು ಕರೆಯೋದು ಇಲ್ಲ ಎಂದು ಶಿವರಾಮೇಗೌಡ ಎಂದರು.

ಪ್ರಾದೇಶಿಕ ಪಕ್ಷ ಬೆಂಬಲಿಸಲು ಮನವಿ
ಕಾಂಗ್ರೆಸ್, ಬಿಜೆಪಿ ರಾಷ್ಟ್ರೀಯ ಪಕ್ಷಗಳ ಪರ ಒಲವು ತೊರಿಸಿದ್ದರಿಂದ ರಾಜ್ಯದಲ್ಲಿ ರೈತರ ಜ್ವಲಂತ ಸಮಸ್ಯೆಗಳು ಉಲ್ಬಣವಾಗಿದೆ ಎಂದು ಆರೋಪಿಸಿದ ಅವರು, ಪ್ರಾದೇಶಿಕ ಪಕ್ಷ ಜೆಡಿಎಸ್‍ಗೆ ಶಕ್ತಿ ತುಂಬುವ ಮೂಲಕ ಜನತೆ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಮನವಿ ಮಾಡಿದರು.

ಮೈತ್ರಿ ಸರಕಾರದಲ್ಲಿ ರೈತರ ಹಿತ ಕಾಪಾಡಲು ಸಾಲಮನ್ನಾದಂತಹ ದಿಟ್ಟ ನಿರ್ಧಾರ ಕೈಗೊಂಡವರು ಮಾಜಿ ಸಿಎಂ ಕುಮಾರಸ್ವಾಮಿ, ಉತ್ತರ ಕರ್ನಾಟಕದಲ್ಲಿನ ನೆರೆ ಸಂತ್ರಸ್ತರ ಪರವಾಗಿ ಇಳಿ ವಯಸ್ಸಿನಲ್ಲೂ ಹೋರಾಟ ಮಾಡುತ್ತಿರುವ ಮಾಜಿ ಪ್ರಧಾನಿ ದೇವೇಗೌಡರು ರೈತರ ಹಿತ ಕಾಯಲು ಬದ್ದವಾಗಿದ್ದಾರೆ ಎಂದು ಅವರು ಹೇಳಿದರು.

ಸಿಎಂ ಯಡಿಯೂರಪ್ಪ ನೆರೆ ಸಂತ್ರಸ್ತರ ಪರಿಹಾರದ ಹೆಚ್ಚುವರಿ ಹಣ ಬಿಡುಗಡೆ ಮಾಡಬೇಕು. 24 ಬಿಜೆಪಿ ಸಂಸದರಿದ್ದರೂ ನೆರೆಸಂತ್ರಸ್ತರ ಕಡೆಗಣಿಸಿರುವ ಕೇಂದ್ರ ಸರಕಾರದ ಕ್ರಮ ಪ್ರಶ್ನಿಸಲಿಲ್ಲ. ಇನ್ನಾದರು ಜನತೆ ಮತ್ತು ಮಾಧ್ಯಮಗಳು ಪ್ರಾದೇಶಿಕ ಪಕ್ಷಗಳನ್ನು ಬೆಂಬಲಿಸಬೇಕು ಎಂದು ತಿಳಿಸಿದರು.

ಸದನದಲ್ಲಿ ಕುಳಿತು  ಬ್ಲೂಫಿಲಂ ನೋಡುವ ಜಾತಿಯವರು ಇದ್ದಾರೆ ಎಂದು ತೋರಿದ್ದೇ ಮಾಧ್ಯಮದವರು. ಆರೆಸ್ಸೆಸ್ ಹಿನ್ನೆಲೆಯಲ್ಲಿ ಬಂದಿರುವ ಸ್ಪೀಕರ್ ವಿಶ್ವೇಶ್ವರ ಕಾಗೇರಿಯವರು ಸದನದಲ್ಲಿನ ಕಲಾಪ ಪ್ರಸಾರಕ್ಕೆ ತಡೆಯೊಡ್ಡುವ ನಿರ್ಧಾರ ಏಕೆ ತೆಗೆದುಕೊಂಡರೋ ಗೊತ್ತಿಲ್ಲ ಎಂದು ಅವರು ಪ್ರತಿಕ್ರಿಯಿಸಿದರು.

ಸುದ್ದಿಗೋಷ್ಠಿಯಲ್ಲಿ ಸರಕಾರಿ ಪಡಿತರ ವಿತರಕರ ಸಂಘದ ರಾಜ್ಯಾದ್ಯಕ್ಷ ಟಿ,ಕೃಷ್ಣಪ್ಪ, ಮುಖಂಡರಾದ ಟಿ.ಕೆ. ರಾಮೇಗೌಡ, ಚನ್ನಪ್ಪ, ಆಸಿಫ್, ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News