ನೆರೆ ಪರಿಹಾರದ ಬಗ್ಗೆ ಸರಕಾರದ ಕ್ರಮಕ್ಕೆ ಆಕ್ರೋಶ: ಸಂಸದ ಅಣ್ಣ ಸಾಹೇಬ್ ಗೆ ಘೇರಾವ್ ಹಾಕಿದ ಸಂತ್ರಸ್ತರು

Update: 2019-10-12 14:37 GMT

ಬೆಳಗಾವಿ, ಅ 12: ಉತ್ತರ ಕರ್ನಾಟಕದಲ್ಲಿ ನೆರೆಯಿಂದಾಗಿ ಅಪಾರ ಹಾನಿ ಸಂಭವಿಸಿದ್ದು, ಜನ ರೋಸಿ ಹೋಗಿದ್ದಾರೆ. ಸಂಕಷ್ಟದಲ್ಲಿರುವ ಸಂತ್ರಸ್ತರ ಸಹಾಯಕ್ಕೆ ಸರಕಾರ ಗಮನ ಹರಿಸುತ್ತಿಲ್ಲ ಎಂದು ನೆರೆ ಸಂತ್ರಸ್ತರು ಸಂಸದ ಅಣ್ಣಾಸಾಹೇಬ್ ಜೊಲ್ಲೆಗೆ ಘೇರಾವ್ ಹಾಕಿ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. 

ತಾಲೂಕಿನ ಹುದಲಿ ಗ್ರಾಮದಲ್ಲಿ ಮಹಾತ್ಮಾ ಗಾಂಧೀಜಿ ಅವರ 150ನೇ ಜನ್ಮದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಪಾದಯಾತ್ರೆಯ ಸಂದರ್ಭದಲ್ಲಿ ಸಂಸದ ಜೊಲ್ಲೆಗೆ ಘೇರಾವ್ ಹಾಕಿ ತರಾಟೆಗೆ ತೆಗೆದುಕೊಂಡ ಸಂತ್ರಸ್ತರು, ರಾಜ್ಯದಲ್ಲಿ ನೆರೆಯಿಂದಾಗಿ ಅಪಾರ ಹಾನಿ ಸಂಭವಿಸಿದೆ. ಅಪಾರ ಸಾವು ನೋವುಗಳು ಆಗಿವೆ. ಜನ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದರೂ ಈ ಬಗ್ಗೆ ಸರಕಾರ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಸಂತ್ರಸ್ತರು ತಮ್ಮ ಆಕ್ರೋಶವನ್ನು ಹೊರಹಾಕಿದರು.

ನೆರೆ ಬಂದು ಎರಡು ತಿಂಗಳು ಕಳೆದಿವೆ. ಜನಪ್ರತಿನಿಧಿಗಳು ಕೇವಲ ಸ್ವಾರ್ಥಕ್ಕಾಗಿ ತಮ್ಮ ತಮ್ಮಲ್ಲಿಯೇ ಪ್ರತ್ಯಾರೋಪಗಳನ್ನು ಮಾಡುತ್ತ ಕಾಲಹರಣ ಮಾಡುತ್ತಿದ್ದಾರೆ. ಆದರೆ ಸಂತ್ರಸ್ತರ ಬಗ್ಗೆ ಅವರಿಗೆ ಕಿಂಚಿತ್ತೂ ಕಾಳಜಿ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸರಕಾರ ಕೇವಲ ನಾಮಕಾವಸ್ತೆಗೆ ಅಲ್ಪಸ್ವಲ್ಪಪರಿಹಾರವನ್ನು ಬಿಡುಗಡೆ ಮಾಡುತ್ತಿದ್ದು, ಅದು ನಮಗೆ ಸರಿಯಾಗಿ ತಲುಪುತ್ತಿಲ್ಲ. ಅಲ್ಲದೆ ಕೆಲವರಿಗೆ ತಲುಪಿದರೂ ಸರಿಯಾಗಿ ತಲುಪುತ್ತಿಲ್ಲ. ಸರಕಾರದಿಂದ ನಮಗೆ ಯಾವುದೇ ಪರಿಹಾರ ಬಂದಿಲ್ಲ ಎಂದು ದೂರಿದರು.

ಸ್ಥಳೀಯ ಶಾಸಕ ಸತೀಶ್ ಜಾರಕಿಹೊಳಿ ನಮಗೆ ಎಲ್ಲ ರೀತಿಯ ಸಹಾಯ ಮಾಡಿದ್ದಾರೆ. ಆದರೆ ಇಷ್ಟು ದಿನ ನೀವೇನು ಮಾಡಿದಿರಿ? ನಿಮಗೆ ರಾಜ್ಯ ಸರಕಾರದಿಂದಲೂ ಪರಿಹಾರ ಕೊಡಲು ಆಗುತ್ತಿಲ್ಲ. ಪ್ರಧಾನಿ ಮೋದಿ ಬಳಿಯೂ ಪರಿಹಾರ ಕೇಳಲು ನಿಮಗೆ ಧೈರ್ಯವಿಲ್ಲ. ರಾಜ್ಯದ ಸಂಸದರು ಸೇರಿ ಏನು ಮಾಡುತ್ತಿದ್ದೀರಿ. ನೀವೆಲ್ಲ ರಾಜೀನಾಮೆ ಕೊಟ್ಟು ಮನೆಗೆ ಹೋಗಿ ಎಂದು ಆಕ್ರೋಶ ಹೊರಹಾಕಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News