ಚಿಕ್ಕಮಗಳೂರು: ನೋಟಿನ ಮೇಲೆ ಪಾಕಿಸ್ತಾನದ ಹೆಸರು ಉಲ್ಲೇಖಿಸಿ ಶಾಂತಿ ಕದಡುವ ಬರಹ; ಓರ್ವನ ಬಂಧನ

Update: 2019-10-12 14:48 GMT
ಸಾಂದರ್ಭಿಕ ಚಿತ್ರ

ಚಿಕ್ಕಮಗಳೂರು, ಅ.12: ಪಾಕಿಸ್ತಾನದಿಂದ ಬಂದು ಬಾಳೆಹೊನ್ನೂರಿನಲ್ಲಿ ಉಳಿದುಕೊಂಡಿದ್ದೇವೆ. ಇಂಡಿಯಾದವರನ್ನು ಒಬ್ಬರನ್ನೂ ಬಿಡುವುದಿಲ್ಲ... ಎಂಬಿತ್ಯಾದಿಯಾಗಿ ಶಾಂತಿ ಕದಡುವ ಬರಹ ಬರೆಯಲಾಗಿದ್ದ ಐವತ್ತು ರೂ. ಮುಖಬೆಲೆಯ ನೋಟಿನ ಫೋಟೋವೊಂದರ ಸಂದೇಶವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟ ಹಿನ್ನೆಲೆಯಲ್ಲಿ ಯುವಕನೋರ್ವನನ್ನು ಬಂಧಿಸಲಾಗಿದೆ.

ಯುವಕ ಶಾಂತಿ ಕದಡುವ ಉದ್ದೇಶದಿಂದ ಈ ಕೃತ್ಯ ಎಸಗಿದ್ದಾನೆಂದು ತನಿಖೆಯಿಂದ ತಿಳಿದು ಬಂದಿದೆ. ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರೀಶ್ ಪಾಂಡೆ ತಿಳಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಪ್ರಕಟನೆ ನೀಡಿರುವ ಅವರು, "ಟಾರ್ಗೆಟ್ ಬಾಳೆಹೊನ್ನೂರು, ನಾವು ಪಾಕಿಸ್ತಾನದವರು. 6 ಜನ ಇದ್ದೇವೆ. ರಾಜ್ಯದ ಒಂದೊಂದು ಜಿಲ್ಲೆಯಲ್ಲಿದ್ದೇವೆ. ಇಂಡಿಯಾದವರನ್ನು ಒಬ್ಬರನ್ನೂ ಬಿಡುವುದಿಲ್ಲ. ಪಾಕಿಸ್ತಾನದ 2 ಹುಲಿಗಳು, ಬಾಳೆಹೊನ್ನೂರಿನಲ್ಲಿದ್ದೇವೆ. ಕನ್ನಡದವರು ನಮಗೆ ಸಹಾಯ ಮಾಡುತ್ತಿದ್ದಾರೆ" ಎಂದು ಬರೆಯಲಾದ 50 ರೂ. ಮುಖಬೆಲೆಯ ನೋಟೊಂದರ ಫೋಟೊ ಸಾಮಾಜಿಕ ಜಾಲಾತಾಣಗಳಲ್ಲಿ ಹರಿದಾಡುತ್ತಿತ್ತು. ಈ ಸಂಬಂಧ ಜಿಲ್ಲಾ ಪೊಲೀಸ್ ಇಲಾಖೆ ಸೂಕ್ಷ್ಮವಾಗಿ ತನಿಖೆ ಕೈಗೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ಹರಿಯಬಿಟ್ಟ ಯುವಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಸಾರ್ವಜನಿಕರ ನೆಮ್ಮದಿಗೆ ಭಂಗ ತರುವ, ಶಾಂತಿ ಕದಡುವ ಉದ್ದೇಶದಿಂದ ಬಂಧಿತ ಯುವಕ ಇಂತಹ ಸಂದೇಶವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾನೆ. ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿಯ ಸಂದೇಶ ಕಂಡು ಯಾರೂ ಆತಂಕಕ್ಕೆ ಒಳಗಾಗಬಾರದು. ಜನರು ಈ ರೀತಿಯ ಸಂದೇಶಗಳಿಗೆ ಹೆದರುವ ಆವಶ್ಯಕತೆ ಇಲ್ಲ. ಜನರು ಇಂತಹ ಸಂದೇಶವನ್ನು ಯಾವುದೇ ವ್ಯಕ್ತಿ, ಗ್ರೂಪ್‍ಗಳಿಗೆ ರವಾನಿಸಬಾರದೆಂದು ಮನವಿ ಮಾಡಿರುವ ಅವರು, ಇಂತಹ ಸಂದೇಶವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ, ಫಾರ್ವರ್ಡ್ ಮಾಡುವವರ ಪತ್ತೆಗೆ ತಂಡವೊಂದು ಕಾರ್ಯಪ್ರವೃತ್ತವಾಗಿದ್ದು, ಸಂದೇಶವನ್ನು ರವಾನಿಸುವವರ ವಿರುದ್ಧ ಕಾನೂನು ಕ್ರಮ ಜರಗಿಸಲಾಗುವುದು ಎಂದು ಎಸ್ಪಿ ಹರೀಶ್ ಪಾಂಡೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News