ಹಾಲಿನ ಉತ್ಪನ್ನಗಳ ಆಮದಿಗೆ ಆಡಳಿತ, ವಿಪಕ್ಷ ಸದಸ್ಯರ ಆಕ್ಷೇಪ

Update: 2019-10-12 16:13 GMT

ಬೆಂಗಳೂರು, ಅ. 12: ‘ಹಾಲಿನ ಉತ್ಪನ್ನಗಳನ್ನು ಹೊರದೇಶಗಳಿಂದ ಆಮದು ಮಾಡಿಕೊಳ್ಳಲು ಮುಂದಾಗಿರುವ ಕೇಂದ್ರ ಸರಕಾರದ ಕ್ರಮ ಸರಿಯಲ್ಲ. ಈ ತೀರ್ಮಾನವನ್ನು ಕೂಡಲೇ ಹಿಂಪಡೆಯಬೇಕೆಂದು ಆಡಳಿತ ಮತ್ತು ವಿಪಕ್ಷ ಸದಸ್ಯರು ಆಗ್ರಹಿಸಿದ್ದಾರೆ.

ಶನಿವಾರ ವಿಧಾನಸಭೆಯಲ್ಲಿ ಅನುದಾನದ ಬೇಡಿಕೆಗಳ ಮೇಲೆ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡುತ್ತಿದ್ದ ವೇಳೆ ಹಾಲಿನ ಪ್ರೋತ್ಸಾಹಧನವನ್ನು ನಿಲ್ಲಿಸಬೇಡಿ ಎಂದು ಆಗ್ರಹಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಕಾಂಗ್ರೆಸ್ ಸದಸ್ಯ ಅಮರೇಗೌಡ ಬಯ್ಯಾಪುರ, ಕೆಎಂಎಫ್ ಅಧ್ಯಕ್ಷರು ಈ ಸಂಬಂಧ ಹೇಳಿಕೆ ನೀಡಿದ್ದಾರೆಂದು ಗಮನ ಸೆಳೆದರು.

ಇದಕ್ಕೆ ಧ್ವನಿಗೂಡಿಸಿದ ಬಿಜೆಪಿ ಸದಸ್ಯ ಸೋಮಶೇಖರ್ ರೆಡ್ಡಿ, ಕೇಂದ್ರ ಸರಕಾರ ಹಾಲಿನ ಉತ್ಪನ್ನಗಳ ಆಮದು ನೀತಿಯಿಂದ ಹೈನುಗಾರಿಕೆಯಲ್ಲಿ ತೊಡಗಿರುವ ರೈತರಿಗೆ ಅನ್ಯಾಯವಾಗಲಿದೆ. ಈಗಾಗಲೇ ಗುಜರಾತ್ ವಿರೋಧ ವ್ಯಕ್ತಪಡಿಸಿದೆ. ಈ ಬಗ್ಗೆ ಕೇಂದ್ರ ಪುನರ್ ಪರಿಶೀಲನೆ ನಡೆಸಬೇಕು ಎಂದು ಆಗ್ರಹಿಸಿದರು.

ರಾಜ್ಯದಲ್ಲೇ ಹೆಚ್ಚಿನ ಪ್ರಮಾಣದಲ್ಲಿ ಹಾಲು ಉತ್ಪಾದನೆ ಆಗುತ್ತಿದ್ದು, ಹೊರ ದೇಶಗಳಿಂದ ಹಾಲಿನ ಉತ್ಪನ್ನಗಳ ಆಮದು ಮಾಡಿಕೊಳ್ಳುವುದರಿಂದ ನಮ್ಮ ಉತ್ಪನ್ನಗಳಿಗೆ ಬೇಡಿಕೆ ಕುಸಿಯಲಿದೆ. ಯಾವುದೇ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಬಾರದು ಎಂದು ಒತ್ತಾಯಿಸಿದರು.

ಇದಕ್ಕೆ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು ಧ್ವನಿಗೂಡಿಸಿ ಕೇಂದ್ರದ ಕ್ರಮ ಸರಿಯಲ್ಲ ಎಂದು ಆಕ್ಷೇಪಿಸಿದರು. ಬಳಿಕ ಮಾತನಾಡಿದ ಸಿದ್ದರಾಮಯ್ಯ, ನಮ್ಮ ರಾಜ್ಯದಲ್ಲೆ ಹೆಚ್ಚಿನ ಪ್ರಮಾಣದಲ್ಲಿ ಹಾಲಿನ ಉತ್ಪಾದನೆ ಆಗುತ್ತಿದ್ದು, ವಿದೇಶದಿಂದ ಹಾಲಿನ ಉತ್ಪನ್ನಗಳ ಆಮದು ಬೇಡ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News