ಶಿಕ್ಷಕರ ಕಡ್ಡಾಯ ವರ್ಗಾವಣೆ: ಎಲ್‌ಐಸಿ ಸರಕಾರಿ ಸ್ವಾಮ್ಯವೆಂದು ಪರಿಗಣಿಸದ ಶಿಕ್ಷಣ ಇಲಾಖೆ

Update: 2019-10-12 16:14 GMT

ಬೆಂಗಳೂರು, ಅ.12: ಶಿಕ್ಷಕರ ಕಡ್ಡಾಯ ವರ್ಗಾವಣೆ ಸಂದರ್ಭದಲ್ಲಿ ಜೀವ ವಿಮಾ ನಿಗಮ(ಎಲ್‌ಐಸಿ)ವನ್ನು ಸಾರ್ವಜನಿಕ ವಲಯದಲ್ಲಿ ಪರಿಗಣಿಸದೇ ಏಕಾಏಕಿ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ನಡೆಸಿರುವುದಕ್ಕೆ ಇದೀಗ ಆಕ್ರೋಶ ವ್ಯಕ್ತವಾಗಿದೆ.

ಕಡ್ಡಾಯ ವರ್ಗಾವಣೆ ಸಂದರ್ಭದಲ್ಲಿ ಸರಕಾರಿ, ಅರೆ ಸರಕಾರಿ, ಖಾಸಗಿ ಎಂಬ ಮೂರು ರೀತಿಯಲ್ಲಿ ಶಿಕ್ಷಕರಿಗೆ ವಿನಾಯತಿ ನೀಡಲು ಅವಕಾಶಗಳಿವೆ. ಹೀಗಾಗಿ, ಎಲ್‌ಐಸಿಯನ್ನು ಸಾರ್ವಜನಿಕ ಉದ್ದಿಮೆ ಎಂದು ಪರಿಗಣಿಸಿದರೆ ಅಲ್ಲಿ ಪತಿ ಅಥವಾ ಪತ್ನಿ ಕೆಲಸ ಮಾಡುತ್ತಿದ್ದರೆ, ಆ ಶಿಕ್ಷಕರಿಗೆ ವರ್ಗಾವಣೆಯಿಂದ ವಿನಾಯಿತಿ ನೀಡಬೇಕಿದೆ.

ಇದೀಗ ಶಿಕ್ಷಣ ಇಲಾಖೆಯು ಎಲ್‌ಐಸಿಯನ್ನು ಸಾರ್ವಜನಿಕ ವಲಯವೆಂದು ಪರಿಗಣಿಸಿಯೇ ಇಲ್ಲ. ಇದರಿಂದ ಸಾವಿರಾರು ಶಿಕ್ಷಕರು ಕಡ್ಡಾಯ ವರ್ಗಾವಣೆಗೆ ಸಿಲುಕಿದ್ದಾರೆ. ಈ ಸಂಬಂಧ ಆರ್‌ಟಿಐ ಕಾರ್ಯಕರ್ತರೊಬ್ಬರು ಮಾಹಿತಿ ಕೇಳಿದ್ದು, ಇದೊಂದು ಸಾರ್ವಜನಿಕ ವಲಯ ಸ್ವಾಮ್ಯದ ಉದ್ದಿಮೆಯಾಗಿದೆ. ಕೇಂದ್ರ ಸರಕಾರದ ವ್ಯಾಪ್ತಿಯಲ್ಲಿ ಬರಲಿದೆ ಎಂದು ಉತ್ತರಿಸಿದೆ.

ಅಲ್ಲದೆ, ಕಳೆದ ತಿಂಗಳು ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ದೇಶಕರಿಗೆ ಪತ್ರ ಬರೆದು ಎಲ್‌ಐಸಿ ಸ್ಪಷ್ಟನೆ ನೀಡಿದೆ. ಆದರೂ, ಶಿಕ್ಷಣ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ವಿನಾಕಾರಣ ಕಡ್ಡಾಯ ವರ್ಗಾವಣೆ ಮಾಡುತ್ತಿದೆ ಎಂದು ಶಿಕ್ಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿನಾಯಿತಿ ಅಸಾಧ್ಯ: ಎಲ್‌ಐಸಿ ಯಾವ ಸ್ವಾಮ್ಯಕ್ಕೊಳಪಡಲಿದೆ ಎಂದು ಪತ್ರ ಬರೆದು ಸ್ಪಷ್ಟನೆ ಕೇಳಲಾಗಿತ್ತು. ಎಲ್‌ಐಸಿಯಿಂದ ಯಾವುದೇ ಉತ್ತರ ಬಾರದ ಕಾರಣ ಕಡ್ಡಾಯ ವರ್ಗಾವಣೆಯಲ್ಲಿ ವಿನಾಯಿತಿ ನೀಡಲು ಅಸಾಧ್ಯ. ಅಲ್ಲದೆ, ಈಗಾಗಲೇ ವರ್ಗಾವಣೆ ಪ್ರಕ್ರಿಯೆ ಮುಗಿಯುವ ಹಂತಕ್ಕೆ ಬಂದಿದೆ. ಇದೀಗ ಏನೂ ಮಾಡಲು ಆಗುವುದಿಲ್ಲ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News