ದತ್ತಮಾಲಾ ಅಭಿಯಾನ: ವಿಗ್ರಹ ಮುಂದಿಟ್ಟು ಉದ್ವಿಗ್ನ ಸೃಷ್ಟಿಸಲು ಶ್ರೀರಾಮಸೇನೆ ಯತ್ನ- ಆರೋಪ

Update: 2019-10-12 16:48 GMT

ಚಿಕ್ಕಮಗಳೂರು, ಅ.12: ದತ್ತಮಾಲಾ ಅಭಿಯಾನದ ಹಿನ್ನೆಲೆಯಲ್ಲಿ ಶ್ರೀರಾಮಸೇನೆಯ ಮುಖಂಡರು ಅ.13ರಂದು ನಗರದಲ್ಲಿ ಹಮ್ಮಿಕೊಂಡಿರುವ ಶೋಭಾಯಾತ್ರೆಯಲ್ಲಿ ಕೊಂಡೊಯ್ಯಲು ತಂದಿರುವ ವಿಗ್ರಹವೊಂದು ಚಿಕ್ಕಮಗಳೂರಿನಾದ್ಯಂತ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಸಿದೆ. ಇದೇ ಸಂದರ್ಭದಲ್ಲಿ ವಿಗ್ರಹ ಕೊಂಡೊಯ್ಯಲು ಜಿಲ್ಲಾಡಳಿತ ನಿರಾಕರಿಸಿದೆ.

ಈ ವಿಗ್ರಹವನ್ನು ಬಾಬಾಬುಡಾನ್ ಗಿರಿಯಲ್ಲಿ ಸ್ಥಾಪಿಸಿ ಆ ಮೂಲಕ ಕೋಮು ಗಲಭೆಯನ್ನು ಎಬ್ಬಿಸಲು ಶ್ರೀರಾಮಸೇನೆ ಸಂಚು ನಡೆಸಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಈ ಆರೋಪವನ್ನು ನಿರಾಕರಿಸಿರುವ ಶ್ರೀರಾಮಸೇನೆ, ಶೋಭಾಯಾತ್ರೆಯಲ್ಲಿ ಬಳಸಲು ಮಾತ್ರ ಈ ವಿಗ್ರಹವನ್ನು ಕಾರವಾರದಿಂದ ತರಲಾಗಿದೆ ಎಂದು ಹೇಳಿದೆ.

ಇತ್ತೀಚೆಗೆ ನಗರಕ್ಕೆ ತರಲಾಗಿರುವ ಮೂರು ತಲೆಯ, ಏಕಶಿಲೆಯಿಂದ ಕೆತ್ತಲಾಗಿರುವ ವಿಗ್ರಹವನ್ನು ಸೇನೆಯ ಕಾರ್ಯಕರ್ತರು ನಗರದ ಜಯನಗರ ಬಡಾವಣೆಯಲ್ಲಿರುವ ಸಾಯಿಮಂದಿರಲ್ಲಿ ಇರಿಸಿದ್ದಾರೆ.

ಶೋಭಾಯಾತ್ರೆ ನೆಪದಲ್ಲಿ ವಿಗ್ರಹವನ್ನು ಬಾಬಾಬುಡಾನ್‌ ಗಿರಿಯಲ್ಲಿ ಪ್ರತಿಷ್ಠಾಪನೆ ಮಾಡಿದಲ್ಲಿ ಜಿಲ್ಲೆಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಮುಂಜಾಗ್ರತಾ ಕ್ರಮವನ್ನು ಕೈಗೊಂಡಿದ್ದು, ಸಾಯಿಮಂದಿರದಲ್ಲಿ ಇರಿಸಲಾಗಿದ್ದ ವಿಗ್ರಹವನ್ನು ಎಸ್ಪಿ ಕಚೇರಿಗೆ ಸ್ಥಳಾಂತರಿಸಲು ಮುಖಂಡರಿಗೆ ಸೂಚಿಸಿದೆ.

ಇದೀಗ ಸೇನೆಯ ಮುಖಂಡರು ಹಾಗೂ ಸೇನೆಯ ರಾಜ್ಯ ಕಾರ್ಯದರ್ಶಿ ಗಂಗಾಧರ್ ಕುಲಕರ್ಣಿ ಜಿಲ್ಲಾಧಿಕಾರಿ ಹಾಗೂ ಎಸ್ಪಿ ಅವರಿಗೆ ಮನವಿ ಸಲ್ಲಿಸಿ, ವಿಗ್ರಹವನ್ನು ಶೋಭಾ ಯಾತ್ರೆಯಲ್ಲಿ ಮಾತ್ರ ಬಳಸಲಾಗುವುದು. ಯಾತ್ರೆ ಮುಗಿದ ಬಳಿಕ ಹಿಂದಕ್ಕೆ ಕೊಂಡೊಯ್ಯಲಾಗುವುದು. ಯಾವುದೇ ಕಾರಣಕ್ಕೂ ಕಾನೂನು ಉಲ್ಲಂಘಿಸುವ ಸಾಹಸಕ್ಕೆ ಕೈಹಾಕುವುದಿಲ್ಲ ಎಂದು ಮನವಿ ಮಾಡಿದ ಹಿನ್ನೆಲೆಯಲ್ಲಿ ವಿಗ್ರಹವನ್ನು ಸಾಯಿಮಂದಿರ ದಲ್ಲಿರಿಸಲು ಅನುಮತಿ ನೀಡಿದ್ದಾರೆ. ಆದರೆ, ಕಳೆದ ಮೂರು ದಿನಗಳಿಂದಳೂ ವಿಗ್ರಹ ಇರಿಸಲಾಗಿರುವ ಸಾಯಿಮಂದಿರದ ಮೇಲೆ ಪೊಲೀಸರು ಹದ್ದಿನ ಕಣ್ಣಿರಿಸಿದ್ದಾರೆ.

ವಿಗ್ರಹವನ್ನು ಮುಂದಿಟ್ಟು ಶ್ರೀರಾಮಸೇನೆ ಶಾಂತಿ ಕೆಡಿಸುವ ಮಾಹಿತಿ ದೊರಕಿರುವ ಹಿನ್ನೆಲೆಯಲ್ಲಿ ವಿಗ್ರಹವನ್ನು ಶೋಭಾಯಾತ್ರೆಯಲ್ಲಿ ಕೊಂಡೊಯ್ಯುವಂತಿಲ್ಲ ಎಂದು ಶನಿವಾರ ಪೊಲೀಸ್ ಇಲಾಖೆ ಸೇನೆಯ ಮುಖಂಡರಿಗೆ ಸೂಚನೆ ನೀಡಿದೆ. ವಿಗ್ರಹವನ್ನು ಕಾರವಾರದ ಭಕ್ತರೊಬ್ಬರು ಕೊಡುಗೆಯಾಗಿ ನೀಡಿದ್ದಾರೆ. ಅದನ್ನು ಶೋಭಾಯಾತ್ರೆಯಲ್ಲಿ ಮಾತ್ರ ಬಳಸುವ ಉದ್ದೇಶ ನಮ್ಮದು. ವಿಗ್ರಹವನ್ನು ಗಿರಿಗೆ ಕೊಂಡೊಯ್ದು ಕಾನೂನು ಉಲ್ಲಂಘಿಸಬಾರದೆಂದು ಸಾಮಾನ್ಯ ಜ್ಞಾನ ನಮಗಿದೆ. ಶೋಭಾಯಾತ್ರೆಯಲ್ಲಿ ದತ್ತನ ವಿಗ್ರಹವನ್ನು ಕೊಂಡೊಯ್ಯಬಾರದೆಂದು ಕಾನೂನು ಹೇಳಿಲ್ಲ. ಸಂವಿಧಾನವೂ ಹೇಳಿಲ್ಲ. ಜಿಲ್ಲಾಡಳಿತ ಶೋಭಾಯಾತ್ರೆಯಲ್ಲಿ ಈ ವಿಗ್ರಹವನ್ನು ಕೊಂಡೊಯ್ಯಬಾರದೆಂದು ತಿಳಿಸಿದೆ. ಈ ಸಂಬಂಧ ಇನ್ನೂ ಅಂತಿಮ ನಿರ್ಧಾರವಾಗಿಲ್ಲ. ಚರ್ಚೆ ನಡೆಯುತ್ತಿದೆ.

-ಪ್ರಮೋದ್ ಮುತಾಲಿಕ್

ಕಲ್ಲಿನ ವಿಗ್ರಹ ಬಳಸಲು ಅವಕಾಶವಿಲ್ಲ: ದಂಡಾಧಿಕಾರಿ ಸ್ಪಷ್ಟನೆ
ದತ್ತಮಾಲಾ ಅಭಿಯಾನದ ನೆಪದಲ್ಲಿ ಕಲ್ಲಿನಿಂದ ಕೆತ್ತಲಾದ ದತ್ತನ ವಿಗ್ರಹವೊಂದನ್ನು ಶೋಭಾಯತ್ರೆಯಲ್ಲಿ ಕೊಂಡೊಯ್ಯುವ ಶ್ರೀರಾಮಸೇನೆಯ ಯತ್ನಕ್ಕೆ ಜಿಲ್ಲಾಡಳಿತ ಬ್ರೇಕ್ ಹಾಕಿದೆ.

ಈ ಸಂಬಂಧ ಆದೇಶವೊಂದನ್ನು ಹೊರಡಿಸಿರುವ ತಾಲೂಕು ದಂಡಾಧಿಕಾರಿ ಹಾಗೂ ತಹಶೀಲ್ದಾರ್ ನಂದಕುಮಾರ್, ದತ್ತಮಾಲಾ ಅಭಿಯಾನದ ಹೆಸರಿನಲ್ಲಿ ಯಾವುದೇ ಹೊಸ ಆಚರಣೆಗೆ ಕಾನೂನಿನಲ್ಲಿ ಅವಕಾಶವಿಲ್ಲ. ಶ್ರೀರಾಮಸೇನೆಯ ಮುಖಂಡರು ಅ.13ರಂದು ನಗರದಲ್ಲಿ ನಡೆಸುವ ಶೋಭಾಯಾತ್ರೆಯಲ್ಲಿ ಕಾರವಾರದಿಂದ ತರಿಸಲಾದ ಕಲ್ಲಿನ ವಿಗ್ರಹವನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲು ಕೋರಿದ್ದಾರೆ. ಆದರೆ, ಕಲ್ಲಿನ ವಿಗ್ರಹವನ್ನು ಶೋಭಾಯಾತ್ರೆಯ ಮೆರವಣಿಗೆಯಲ್ಲಿ ಕೊಂಡೊಯ್ಯುವುದು ಹೊಸ ಆಚರಣೆಯಾಗಿದ್ದು, ಈ ಹೊಸ ಆಚರಣೆಗೆ ಯಾವುದೇ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಅವರು ಆದೇಶದಲ್ಲಿ ಸ್ಪಷ್ಟ ಪಡಿಸಿದ್ದಾರೆ.

ಜಿಲ್ಲಾಡಳಿತ ದತ್ತಮಾಲಾ ಅಭಿಯಾನದಡಿಯಲ್ಲಿ ಈ ಹಿಂದೆ ನೀಡಿದ್ದ ಆಚರಣೆಗಳಿಗೆ ಮಾತ್ರ ಅವಕಾಶವಿದೆ. ಇದರ ಹೊರತಾಗಿ ಕಲ್ಲಿನ ವಿಗ್ರಹವನ್ನು ಮೆರವಣಿಯಲ್ಲಿ ಬಳಿಸಿದಲ್ಲಿ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್ ನಂದಕುಮಾರ್ ಆದೇಶದಲ್ಲಿ ತಿಳಿಸಿದ್ದು, ರವಿವಾರ ಶ್ರೀರಾಮಸೇನೆಯ ಶೋಭಾಯಾತ್ರೆಯು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ನಿಗದಿ ಪಡಿಸಿರುವ ರಸ್ತೆ, ಸ್ಥಳಗಳಲ್ಲಿ ಮಾತ್ರ ಸಂಚರಿಸಬೇಕೆಂದು ಆದೇಶದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News