ಯೋಗ ಅಳವಡಿಸಿಕೊಂಡರೆ ಹೆಚ್ಚು ಚಟುವಟಿಕೆಯಿಂದ ಇರಲು ಸಾಧ್ಯ: ಯದುವೀರ್

Update: 2019-10-12 17:17 GMT

ಮೈಸೂರು,ಅ.12: ಯೋಗವನ್ನು ಅಳವಡಿಸಿಕೊಂಡರೆ ಹೆಚ್ಚು ಚಟುವಟಿಕೆಯಿಂದ ಇರಲು ಸಾಧ್ಯ ಎಂದು ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.

ನಗರದ ಮೈಸೂರು ವಿಶ್ವವಿದ್ಯಾನಿಲಯದ ಸೆನೆಟ್ ಭವನದಲ್ಲಿ ಶನಿವಾರ ನಡೆದ ಅಖಿಲ ಭಾರತೀಯ ಪ್ರತಿನಿಧಿ ಮಂಡಲ್ ಬೈಠಕ್ ನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಮೈಸೂರು ಅರಸರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಆರೋಗ್ಯಕ್ಕೆ ಹೆಚ್ಚಿನ ಮಹತ್ವ ನೀಡಿದ್ದು, ಎಲ್ಲರಿಗೂ ಆರೋಗ್ಯ ದೊರೆಯಬೇಕೆನ್ನುವ ದೃಷ್ಟಿಯಿಂದ ಆಸ್ಪತ್ರೆಗಳನ್ನು ತೆರೆದಿದ್ದರು. ಹೆಲ್ತ್ ಕೇರ್ ಗಳನ್ನು ನಿರ್ಮಿಸಿದ್ದರು. ಆಯುರ್ವೇದಿಕ್  ಮೆಡಿಕಲ್ ಕಾಲೇಜುಗಳು  ಕೂಡ  ನಿರ್ಮಿಸಲ್ಪಟ್ಟಿದ್ದವು. ಇಂದು ಆರೋಗ್ಯ ಕಾಪಾಡಿಕೊಳ್ಳಲು ಯೋಗ ವಿಶ್ವಾದ್ಯಂತ ಮಹತ್ವ ಪಡೆದುಕೊಂಡಿದೆ. ಯೋಗದಿಂದ ಹಲವು ಉಪಯೋಗಗಳಿದ್ದು, ದಿನವಿಡೀ ಲವಲವಿಕೆಯಿಂದ ಇರುವಂತೆ ಮಾಡುತ್ತದೆ ಎಂದು ತಿಳಿಸಿದರು.

ಈ ಸಂದರ್ಭ ಉಪಸ್ಥಿತರಿದ್ದ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಮಾತನಾಡಿ, ಎಲ್ಲ ಧರ್ಮ ಸಾಧನೆಗೂ ಶರೀರವೇ ಮೂಲ ಮಾಧ್ಯಮ. ಶರೀರದ ಆಧಾರವಿಲ್ಲದೇ ಆತ್ಮವಿಲ್ಲ. ಶರೀರವನ್ನು ಸ್ವಸ್ಥವಾಗಿಟ್ಟುಕೊಳ್ಳಬೇಕು. ಶರೀರ ಸ್ವಸ್ಥವಾಗಿದ್ದರೆ ಬುದ್ಧಿ ಮತ್ತು ಮನಸ್ಸು ಸ್ವಸ್ಥವಾಗಿರುತ್ತದೆ. ಮನಸ್ಸು ಸ್ವಸ್ಥವಾಗಿದ್ದರೆ ಬಲ ಪ್ರಾಪ್ತಿಯಾಗುತ್ತದೆ. ತನಗೆ ಪ್ರಾಪ್ತಿಯಾದ ಬಲವನ್ನು ಲೋಕಕಲ್ಯಾಣಕ್ಕಾಗಿ ಬಳಸುತ್ತಾನೆ ಎಂದರು.

ಕಾರ್ಯಕ್ರಮದಲ್ಲಿ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ  ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು. ಈ ಸಂದರ್ಭ ಆರೋಗ್ಯ ಭಾರತಿ ಅಖಿಲ ಭಾರತೀಯ ಅಧ್ಯಕ್ಷ ಡಾ.ಪ್ರವೀಣ್ ಬಾವುಸಾರ್, ಪ್ರಧಾನ ಕಾರ್ಯದರ್ಶಿ ಡಾ.ಸುನೀಲ್ ಜೋಷಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News