ಮೈಸೂರು: ಕನ್ನಡ ಶಾಲೆ ಮುಚ್ಚದಂತೆ ಒತ್ತಾಯಿಸಿ ಧರಣಿ: ಬಿಗುವಿನ ವಾತಾರಣ, ಪೊಲೀಸ್ ಬಂದೋಬಸ್ತ್

Update: 2019-10-12 17:22 GMT

ಮೈಸೂರು,ಅ.12: ಕನ್ನಡ ಪ್ರಾಥಮಿಕ ಶಾಲೆಯೊಂದನ್ನು ಶಿಕ್ಷಣ ಇಲಾಖೆ ಮುಚ್ಚಲು ಮುಂದಾಗಿರುವುದನ್ನು ವಿರೋಧಿಸಿ ಶನಿವಾರ ಕನ್ನಡ ಪರ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯಿತು. 

ನಗರದ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ಮಹಾರಾಣಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಮುಚ್ಚಬಾರದೆಂದು ಕನ್ನಡಪರ ಹೋರಾಟಗಾರರು ಶಾಲೆಯ ಎದುರು ಪ್ರತಿಭಟನೆ ನಡೆಸಿದ್ದು ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾದ್ದರಿಂದ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ಪ್ರತಿಭಟನೆಯಲ್ಲಿ ಪಾಲ್ಗೊಂಡ ಇತಿಹಾಸ ತಜ್ಞ ಪ್ರೊ.ನಂಜರಾಜೇ ಅರಸ್ ಮಾತನಾಡಿ, ಇಲ್ಲಿ ಕಲಿಯುವವರೆಲ್ಲ ಬಡ ಮಕ್ಕಳೇ ಆಗಿದ್ದಾರೆ. ಅವರಿಗೆ ಹೆಚ್ಚಿನ ಪ್ರಮಾಣದಲ್ಲಿ ಶಾಲಾ ಶುಲ್ಕ ಭರಿಸಲು ಶಕ್ತಿ ಇಲ್ಲ. ಈ ವರ್ಷ 48 ಮಕ್ಕಳು ಇಲ್ಲಿ ಕಲಿಯುತ್ತಿದ್ದು, ಶಾಲೆ ಮುಚ್ಚಿದರೆ ಅವರ ಭವಿಷ್ಯಕ್ಕೆ ಕುತ್ತಾಗಲಿದೆ ಎಂದರು.

ಶಾಲೆ ಮುಚ್ಚುವ ಕುರಿತು ಮಾಹಿತಿ ನೀಡಲು ಆಗಮಿಸಿದ ಅಧಿಕಾರಿಯನ್ನು ತಡೆದು ಶಾಲೆ ಮುಚ್ಚೋದಕ್ಕೆ ಯಾರು ಹೇಳಿದ್ದಾರೆ. ನಮಗೆ ಅದರ ಮಾಹಿತಿಯ ದಾಖಲೆ ತೋರಿಸಿ ಎಂದು ಪಟ್ಟು ಹಿಡಿದರು. ಆಗ ಸ್ಥಳದಲ್ಲಿದ್ದ ಅಧಿಕಾರಿಯವರು ನಮಗೆ ಆದೇಶ ಬಂದಿದೆ. ಈ ದಾಖಲೆಯನ್ನು ನೋಡಿ ಎಂದು ತೋರಿಸಿದರು. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಅದಕ್ಕಾಗಿ ದೇವರಾಜ ಠಾಣೆಯ ಪೊಲೀಸರು ಸ್ಥಳಕ್ಕಾಗಮಿಸಿ ಬಂದೋಬಸ್ತ್ ಕೈಗೊಂಡರು.

ಪ್ರತಿಭಟನಾಕಾರರು ಕನ್ನಡ ಶಾಲೆ ಉಳಿಯಲಿ, ಕನ್ನಡ ವಿರೋಧಿಗಳಿಗೆ ಧಿಕ್ಕಾರ, ಇತಿಹಾಸವಿರುವ ಕನ್ನಡ ಶಾಲೆ ಉಳಿಯಲಿ ಉಳಿಯಲಿ ಎಂದು ಘೋಷಣೆ ಕೂಗಿದರು.

ಪ್ರತಿಭಟನೆಯಲ್ಲಿ ಕನ್ನಡಪರ ಹೋರಾಟಗಾರರಾದ ಪ.ಮಲ್ಲೇಶ್, ಕನ್ನಡ ಹೋರಾಟಗಾರ ಮೂಗೂರು ನಂಜುಂಡಸ್ವಾಮಿ, ಪ್ರವೀಣ್, ಅರಸ್, ಅಜಯ್  ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News