ನ.5ರಿಂದ ಕೊಲ್ಕತ್ತಾದಲ್ಲಿ ಅಂತರಾಷ್ಟ್ರೀಯ ವಿಜ್ಞಾನ ಮೇಳ: ಕೇಂದ್ರ ಸಚಿವ ಡಾ.ಹರ್ಷವರ್ಧನ್

Update: 2019-10-12 17:25 GMT

ಮೈಸೂರು,ಅ.12: ಯುವಕರನ್ನು ವಿಜ್ಞಾನದತ್ತ ಸೆಳೆಯುವ ಮತ್ತು ಸಂಶೋಧನೆಗೆ ಉತ್ತೇಜನಕೊಡುವ ಐದನೇ ಭಾರತದ ಅಂತಾರಾಷ್ಟ್ರೀಯ ವಿಜ್ಞಾನ ಮೇಳ ನ. 5ರಿಂದ 8ರವರೆಗೆ ಕೊಲ್ಕತ್ತಾದಲ್ಲಿ ಆಯೋಜಿಸಲಾಗಿದೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಹರ್ಷವರ್ಧನ್ ತಿಳಿಸಿದರು.

ಮೈಸೂರಿನ ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯಕ್ಕೆ ಶನಿವಾರ ಭೇಟಿ ನೀಡಿದ್ದ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ವಿಜ್ಞಾನ ಮತ್ತು ತಂತ್ರಜ್ಞಾನ ಮಂತ್ರಾಲಯ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ವಿಜ್ಞಾನ ಭಾರತಿ ಸಂಸ್ಥೆ ಸಹಯೋಗದಲ್ಲಿ 2015ರಲ್ಲಿ ಆರಂಭಿಸಲಾದ ಈ ವಿಜ್ಞಾನ ಮೇಳ ಮೊದಲ ಎರಡು ವರ್ಷಗಳು ನವದೆಹಲಿಯಲ್ಲಿ ನಡೆದಿದ್ದು, 3ನೇ ವರ್ಷ ಚೆನ್ನೈ, ನಾಲ್ಕನೇ ವರ್ಷ ಲಕ್ನೋದಲ್ಲಿ ನಡೆಯಿತು.

ಮೊದಲ ವರ್ಷ 3 ರಿಂದ 4 ಲಕ್ಷ ಜನರು ಮೇಳದಲ್ಲಿ ಭಾಗವಹಿಸಿದ್ದರು. ಕಳೆದ ವರ್ಷ ಲಕ್ನೋದಲ್ಲಿ ನಡೆದ ನಾಲ್ಕನೇ ವಿಜ್ಞಾನ ಮೇಳದಲ್ಲಿ 10 ಲಕ್ಷ ಜನರು ಭಾಗವಹಿಸಿದ್ದರು. ಈ ವರ್ಷ ಕೊಲ್ಕತ್ತಾದಲ್ಲಿ ನಡೆಯಲಿರುವ ಐದನೇ ವಿಜ್ಞಾನ ಮೇಳದಲ್ಲಿ ಇನ್ನೂ ಹೆಚ್ಚಿನ ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಮಾಹಿತಿ ನೀಡಿದರು.

ಈ ಮೇಳದಲ್ಲಿ ವಿದ್ಯಾರ್ಥಿಗಳು, ನವ ಶೋಧಕರು, ಕಲಾವಿದರು, ಸಂಶೋಧಕರು ಹಾಗೂ ಜನಸಾಮಾನ್ಯರು ಒಂದೆಡೆ ಸೇರಿ ಭಾರತದ ವೈಜ್ಞಾನಿಕ ಮತ್ತು ತಾಂತ್ರಿಕ ಸಾಧನೆಗಳ ಬಗ್ಗೆ ವಿಚಾರ ವಿನಿಮಯಕ್ಕೆ ಈ ಮೇಳ ವೇದಿಕೆಯಾಗಲಿದೆ. ವಿಜ್ಞಾನ ಮೇಳದ ಪ್ರಚಾರಕ್ಕಾಗಿ ದೇಶಾದ್ಯಂತ 100 ಕಾರ್ಯಕ್ರಮ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಸುಮಾರು 1500 ಯುವ ವಿಜ್ಞಾನಿಗಳು, ಸಂಶೋಧಕರು, ಅಂತಾರಾಷ್ಟ್ರೀಯ ಮಟ್ಟದಲ್ಲಿ ತಜ್ಞರೆಂದು ಗುರುತಿಸಿಕೊಂಡಿರುವವರೊಂದಿಗೆ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸುವುದಲ್ಲದೆ, ತಮ್ಮ ಸಂಶೋಧನೆಗಳ ಪ್ರಬಂಧ, ಭಿತ್ತಿಪತ್ರಗಳನ್ನು ಇಲ್ಲಿ ಪ್ರಕಟಿಸುವರು ಎಂದು ಹೇಳಿದರು.

ಭಾರತದ ವೈಜ್ಞಾನಿಕ ಹಾಗೂ ತಾಂತ್ರಿಕ ಸಾಮರ್ಥ್ಯಗಳು ವಿಜ್ಞಾನ ನಗರದಲ್ಲಿ ಆಯೋಜಿಸುವ ವಿಜ್ಞಾನ ಮೇಳದಲ್ಲಿ ಪ್ರದರ್ಶಿಸಲಾಗುವುದು. ಹೊಸ ಯುಗದ ತಂತ್ರಜ್ಞಾನ, ಅಂಗವಿಕಲರಿಗಾಗಿ ವಸ್ತುಪ್ರದರ್ಶನ, ಪುಸ್ತಕ ಮೇಳ ಕೂಡ ಆಯೋಜಿಸಲಾಗಿದೆ. ಜತೆಗೆ ವಿಜ್ಞಾನ ಸಾಹಿತ್ಯ ಮೇಳ ಕೂಡ ನಡೆಯಲಿದೆ ಎಂದರು.

ಪ್ರತಿ ಸಂಸದರ ಕ್ಷೇತ್ರದಿಂದ 5 ಮಕ್ಕಳು: ಈ ವರ್ಷದ ವಿಜ್ಞಾನ ಮೇಳದಲ್ಲಿ ವಿದ್ಯಾರ್ಥಿಗಳ ವಿಜ್ಞಾನ ಗ್ರಾಮವೊಂದನ್ನು ಆಯೋಜಿಸಲಾಗಿದೆ. ಇಲ್ಲಿಗೆ ದೇಶದೆಲ್ಲೆಡೆಯಿಂದ 2500 ಶಾಲಾ ಮಕ್ಕಳನ್ನು ಆಹ್ವಾನಿಸಲಾಗಿದೆ. ಪ್ರಧಾನಮಂತ್ರಿ ಸಂಸದರ ಆದರ್ಶ ಗ್ರಾಮ ಯೋಜನೆಯಡಿ ಪ್ರತಿಯೊಬ್ಬ ಸಂಸದರೂ ತಮ್ಮ ಕ್ಷೇತ್ರದಿಂದ ಐವರು ಶಾಲಾ ಮಕ್ಕಳು ಹಾಗೂ ಓರ್ವ ಶಿಕ್ಷಕರನ್ನು ಈ ವಿಜ್ಞಾನ ಮೇಳಕ್ಕೆ ನಾಮ ನಿರ್ದೇಶನ ಮಾಡಲಿದ್ದಾರೆ. ಆರು ಪ್ರಖ್ಯಾತ ವಿಜ್ಞಾನಿಗಳ ಹೆಸರಿರುವ ಶಿಬಿರಗಳಲ್ಲಿ ಈ ವಿದ್ಯಾರ್ಥಿಗಳು ವಿಜ್ಞಾನದ ಆಟಗಳು, ವಿಜ್ಞಾನಿ-ತಂತ್ರಜ್ಞರೊಂದಿಗೆ ಸಂವಾದ ನಡೆಸಲಿದ್ದಾರೆ.

ಸಿಎಪ್‍ಟಿಆರ್‍ಐ ನಿರ್ದೇಶಕ ಡಾ.ಕೆಎಸ್‍ಎಸ್ ರಾಘವರಾವ್, ವಿಜ್ಞಾನ ಭಾರತೀ ಕಾರ್ಯದರ್ಶಿ ಪ್ರವೀಣ್ ಸುದ್ದಿಗೋಷ್ಠಿಯಲ್ಲಿದ್ದರು.

ಪ್ರತಿಪಕ್ಷದ ಆರೋಪ ನಿರಾಧಾರ

ಸ್ವಾಯತ್ತ ಸಂಸ್ಥೆಗಳಾದ ಐಟಿ, ಈಡಿ, ಸಿಬಿಐನಂತಹ ತನಿಖಾ ಸಂಸ್ಥೆಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿವೆ. ವಿರೋಧ ಪಕ್ಷಗಳ ನಾಯಕರನ್ನು ಗುರಿಯಾಗಿಸಿಕೊಂಡು ಆದಾಯ ತೆರಿಗೆ ದಾಳಿ ನಡೆಯುತ್ತಿದೆ ಎಂಬುದು ಆಧಾರ ರಹಿತ ಆರೋಪ. ಪ್ರತಿಪಕ್ಷಗಳ ಆರೋಪ ನಿರಾಧಾರ.
-ಡಾ.ಹರ್ಷವರ್ಧನ, ಕೇಂದ್ರ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News