ಕೊಡಗಿನ ಜನಪ್ರತಿನಿಧಿಗಿಳಿಂದ ಮಾಜಿ ಸೈನಿಕರ ಕಡೆಗಣನೆ: ನಿವೃತ್ತ ಮೇಜರ್ ಜ.ಕಾರ್ಯಪ್ಪ ಆರೋಪ

Update: 2019-10-12 17:28 GMT

ಮಡಿಕೇರಿ, ಅ.12: ಕೊಡಗಿನ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ತಮ್ಮ ಪ್ರತಿಷ್ಠೆ ಮತ್ತು ಸ್ವಾರ್ಥಕ್ಕಾಗಿ ಫೀ.ಮಾ.ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಅವರ ಹೆಸರನ್ನು ಬಳಸಿಕೊಳ್ಳುತ್ತಿದ್ದಾರೆಯೇ ಹೊರತು ದೇಶಕ್ಕಾಗಿ ಗಡಿ ಕಾದು ಬಂದ ಮಾಜಿ ಸೈನಿಕರ ಬಗ್ಗೆ ಯಾವುದೇ ಕಾಳಜಿ ತೋರುತ್ತಿಲ್ಲವೆಂದು ಕೊಡಗು ಜಿಲ್ಲಾ ಮಾಜಿ ಸೈನಿಕರ ಸಂಘದ ಅಧ್ಯಕ್ಷ ನಿವೃತ್ತ ಮೇಜರ್ ಜನರಲ್ ಬಿ.ಎ.ಕಾರ್ಯಪ್ಪ ಆರೋಪಿಸಿದ್ದಾರೆ.

ನಗರದ ರೋಟರಿ ಸಭಾಂಗಣದಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೊಡಗಿನ ನಿವೃತ್ತ ಸೈನಿಕರಿಗೆ ಸರ್ಕಾರದ ಸೌಲಭ್ಯ ಕಲ್ಪಿಸುವಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.  

ಪರಮವೀರ ಚಕ್ರ, ಶೌರ್ಯಚಕ್ರ ಪಡೆದ ಯೋಧರಿಗೆ ಹರಿಯಾಣ ಸರಕಾರ ಹೆಚ್ಚು ಸೌಲಭ್ಯಗಳನ್ನು ಒದಗಿಸುತ್ತಿದೆ. ಆದರೆ ಕರ್ನಾಟಕ ಸರಕಾರ ಮಾಜಿ ಸೈನಿಕರನ್ನು ನಿರ್ಲಕ್ಷಿಸಿದೆ ಎಂದು ಟೀಕಿಸಿದರು. ಮಾಜಿ ಸೈನಿಕರಿಗೆ ಮಂಜೂರು ಮಾಡಿರುವ ಭೂಮಿಯನ್ನು ಕಸಿದುಕೊಳ್ಳಲು ಜಿಲ್ಲಾಡಳಿತ ಮುಂದಾಗಿದ್ದು, ಈ ಕ್ರಮ ಮುಂದುವರೆದರೆ ಸಂಘದ ವತಿಯಿಂದ ಬೃಹತ್ ಪ್ರತಿಭಟನಾ ರ‍್ಯಾಲಿ ಹಮ್ಮಿಕೊಳ್ಳಲಾಗುವುದು ಎಂದರು.

ಸೇನೆಯಿಂದ ನಿವೃತ್ತರಾದ ಸೈನಿಕರು ಸಂಘದ ಸದಸ್ಯತ್ವ ಪಡೆದುಕೊಳ್ಳಲು ಹಿಂದೇಟು ಹಾಕುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಕಾರ್ಯಪ್ಪ, ಸಂಕಷ್ಟ ಬಂದಾಗ ಮಾತ್ರ ಸಂಘವನ್ನು ನೆನಪಿಸಿಕೊಳ್ಳುವುದು ವಿಪರ್ಯಾಸವೆಂದರು. ಸರಕಾರ ಮತ್ತು ಸಂಘದ ಮೂಲಕ ಸಿಗುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಮನವಿ ಮಾಡಿದರು.

ದಾಖಲೆಗಳಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವಾಗ ಹುದ್ದೆಯ ರ್ಯಾಂಕ್‍ಗಳನ್ನು ನಮೂದಿಸುವಂತೆ ಸಲಹೆ ನೀಡಿದರು.
ಮಾಜಿ ಸೈನಿಕರಿಗೆ ಜಿಲ್ಲಾ ಕೇಂದ್ರವಾದ ಮಡಿಕೇರಿಯಲ್ಲಿ ಕನಿಷ್ಟ ವಿಶ್ರಾಂತಿ ಪಡೆಯುವುದಕ್ಕೆ ಮತ್ತು ಅವರ ಅಹವಾಲುಗಳನ್ನು ಸ್ವೀಕರಿಸಲು ಮಾಜಿ ಸೈನಿಕರ ಭವನ ನಿರ್ಮಾಣಕ್ಕೆ ಜಾಗ ನೀಡಬೇಕೆಂದು ಕಾರ್ಯಪ್ಪ ಒತ್ತಾಯಿಸಿದರು.

ನಿವೃತ್ತ ಮೇಜರ್ ಮಂದಪ್ಪ ಮಾತನಾಡಿ, ದೇಶ ರಕ್ಷಣೆಗಾಗಿ ಹಗಲಿರುಳು ದುಡಿದು ನಿವೃತ್ತರಾಗುವ ಯೋಧರಿಗೆ ನಿವೃತ್ತಿ ಬದುಕಿನಲ್ಲಿ ಯಾವುದೇ ಗೌರವ ಸಿಗುತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿದರು. 

ಮಾಜಿ ಸೈನಿಕರ ಸಂಘದ ಹಿರಿಯರಾದ ಮೇದಪ್ಪ, ಕಾರ್ಯದರ್ಶಿ ಗಣಪತಿ, ಚೇರಂಬಾಣೆ ಸಂಘದ ಅಧ್ಯಕ್ಷ ಸುಬೇದಾರ್ ಮಾದಪ್ಪ, ನಾಪೋಕ್ಲು ಸಂಘದ ಶಂಭು, ಕುಶಾಲನಗರ ಸಂಘದ ಪದ್ಮನಾಭ, ಸೋಮವಾರಪೇಟೆ ಸಂಘದ ಈರಪ್ಪ, ಸುಬ್ಬಯ್ಯ ಹಾಗೂ ಸಂಘದ ಪದಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಸಭೆಯ ಮೊದಲು ಸಂಘದ ಕಾರ್ಯದರ್ಶಿ ನಿವೃತ್ತ ಮೇಜರ್ ಓ.ಎಸ್.ಚಿಂಗಪ್ಪ, ಸಂಘದ ವಾರ್ಷಿಕ ವರದಿ ಹಾಗೂ 2018-19ನೇ ಸಾಲಿನ ಅಡಿಟ್ ಮತ್ತು ಮಂಜೂರಾತಿಯನ್ನು ಓದಿದರು.

ಇದೇ ಸಂದರ್ಭ ಸಂಘದ ಬಲವರ್ಧನೆ ಮತ್ತು ನಿವೃತ್ತ ಯೋಧರ ಯೋಗಕ್ಷೇಮದ ಬಗ್ಗೆ ಚರ್ಚಿಸಲಾಯಿತು. ಮೃತ ಯೋಧರಿಗೆ ಸಂತಾಪ ಸೂಚಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News