‘ಕೊಡಗು ರಾಷ್ಟೀಯ ವಿಪತ್ತು ಪ್ರದೇಶ’ ಘೋಷಣೆಗೆ ಆಗ್ರಹ: ರೈತರ ವಾಹನ ಜಾಥಾಕ್ಕೆ ತಲಕಾವೇರಿಯಲ್ಲಿ ಚಾಲನೆ

Update: 2019-10-12 17:35 GMT

ಮಡಿಕೇರಿ, ಅ.12 : ಜಿಲ್ಲೆಯ ರೈತರ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ 3 ದಿನಗಳ ಕಾಲ ನಡೆಯುವ ರೈತರ ಬೃಹತ್ ವಾಹನ ಜಾಥಾಕ್ಕೆ ತಲಕಾವೇರಿಯಲ್ಲಿ ಚಾಲನೆ ನೀಡಲಾಯಿತು. 

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕೊಡಗು ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಮುಂದಾಳತ್ವದಲ್ಲಿ ನಡೆದ ರೈತ ಜಾಥಾ ಕಾರ್ಯಕ್ರಮಕ್ಕೆ ವೀರಚಕ್ರ ಪ್ರಶಸ್ತಿ ಪಡೆದ ಮೇಜರ್ ಜನರಲ್ ಕುಪ್ಪಂಡ ನಂಜಪ್ಪ, ಅಂತರಾಷ್ಟ್ರೀಯ ರ‍್ಯಾಲಿ ಪಟು ಜಗತ್‍ ನಂಜಪ್ಪ, ಇತರ ಗಣ್ಯರು ಹಸಿರು ನಿಶಾನೆ ತೋರಿದರು.

ತಲಕಾವೇರಿಯಲ್ಲಿ ರೈತರನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಕೊಡಗು ಜಿಲ್ಲೆಯಲ್ಲಿ ಸತತ ಎರಡು ವರ್ಷ ನಡೆದ ಪ್ರಾಕೃತಿಕ ವಿಕೋಪದಿಂದ ಅಪಾರ  ಹಾನಿ ಸಂಭವಿಸಿದೆ. ಕೊಡಗನ್ನು ರಾಷ್ಟ್ರೀಯ ವಿಪತ್ತು ಪ್ರದೇಶವೆಂದು ಘೋಷಿಸಬೇಕೆಂದು ಆಗ್ರಹಿಸಿದ್ದಲ್ಲದೆ, ಪರಿಹಾರದ ಮಾರ್ಗದರ್ಶಿ ನೀತಿಯನ್ನು ಬದಲಿಸುವಂತೆ ಆಗ್ರಹಿಸಿದರು. 

ವಾಹನ ಜಾಥಾವನ್ನು ಹಸಿರು ನಿಶಾನೆ ತೋರಿ ಉದ್ಘಾಟಿಸಿದ ವೀರಚಕ್ರ ಪ್ರಶಸ್ತಿ ಪಡೆದ ಮೇಜರ್ ಜನರಲ್ ಕುಪ್ಪಂಡ ನಂಜಪ್ಪ, ಜಿಲ್ಲೆಯ ರೈತರು ರೈತ ಸಂಘದೊಂದಿಗೆ ಕೈ ಜೋಡಿಸಿ ಹೋರಾಟಕ್ಕೆ ಬೆಂಬಲ ನೀಡಬೇಕೆಂದು ಮನವಿ ಮಾಡಿದರು. ಮತ್ತೋರ್ವ ಅತಿಥಿ ಅಂತರಾಷ್ಟ್ರೀಯ ರ‍್ಯಾಲಿ ಪಟು ಜಗತ್‍ ನಂಜಪ್ಪ ಮಾತನಾಡಿದರು. 

ಮಾನವ ಸರಪಳಿ-ಮುಂಜಾನೆ ತಲಕಾವೇರಿಯಿಂದ ಹೊರಟ ರೈತರ ವಾಹನ ಜಾಥಾವು ಭಾಗಮಂಡಲ ಮೂಲಕ ಹಾದು ಬಂದು ಜಿಲ್ಲಾ ಕೇಂದ್ರ  ಮಡಿಕೇರಿಯ ಜ.ತಿಮ್ಮಯ್ಯ ವೃತ್ತದಲ್ಲಿ ಸಮಾಗಮಗೊಂಡಿತು. ರೈತ ಮುಖಂಡರು ಜ.ತಿಮ್ಮಯ್ಯ ವೃತ್ತದಲ್ಲಿ ಬೃಹತ್  ಮಾನವ ಸರಪಳಿ ನಿರ್ಮಿಸಿ, ರೈತರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಕೂಡಲೇ ಸರ್ಕಾರ ಗಮನ ಸೆಳೆಯುವ ಮೂಲಕ ಅನ್ನದಾತರ ಸಂಕಷ್ಟಕ್ಕೆ ನಿಲ್ಲಬೇಕು ಎಂದು ಹೇಳಿದರು.

ಸಿ.ಎನ್.ಸಿ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ, ಯುಕೋ ಸಂಘಟನೆಯ ಜಿಲ್ಲಾಧ್ಯಕ್ಷ ಮಂಜು ಚಿಣ್ಣಪ್ಪ,  ರಾಜ್ಯ ರೈತ ಸಂಘದ ಮುಖಂಡರಾದ ಚಾಮರಸ ಮಾಲಿ ಪಾಟೀಲ್, ಜಿಲ್ಲಾ ರೈತ ಮುಖಂಡರಾದ ಸುಜಯ್ ಬೋಪಯ್ಯ, ಅಪ್ಪಚಂಗಡ ಮೋಟಯ್ಯ,ಸೋಮೆಯಂಗಡ ಗಣೇಶ್ ಸೇರಿ ಹಲವರು ಮಾತನಾಡಿದರು. ನೂರಾರು ವಾಹನಗಳು ಜಾಥಾದಲ್ಲಿ ಪಾಲ್ಗೊಂಡಿದ್ದವು.

ತಿತಿಮತಿ ಮಾರ್ಗವಾಗಿ ಕೊಡಗಿನ ಗಡಿ ಆನೆಚೌಕೂರು ದಾಟಿ ಹುಣಸೂರಿನತ್ತ ವಾಹನ ಜಾಥಾವು ಪ್ರಯಾಣ ಬೆಳೆಸಿತು. 

ಬೇಡಿಕೆಗಳು
ಜಿಲ್ಲೆಯನ್ನು ರಾಷ್ಟ್ರೀಯ ವಿಪತ್ತು ಪ್ರದೇಶವೆಂದು ಘೋಷಿಸಬೇಕು, ರೈತರ ಸಾಲ ಸಂಪೂರ್ಣ ಮನ್ನಾ ಮಾಡಬೇಕು, ನೂತನವಾಗಿ ಬಡ್ಡಿ ರಹಿತ ಸಾಲ ನೀಡಬೇಕು, ಜಿಲ್ಲೆಯ ಜಲಪ್ರಳಯ, ಬೆಳೆಹಾನಿ, ಭೂ ಕುಸಿತದಿಂದ ನೊಂದ ರೈತರಿಗೆ ವೈಜ್ಞಾನಿಕವಾಗಿ ಸಂಪೂರ್ಣ ನಷ್ಟ ಪರಿಹಾರವನ್ನು 10 ಪಟ್ಟು ಹೆಚ್ಚಿಸಬೇಕು.

ವಿಜ್ಞಾನಿಗಳಿಂದ ತನಿಖೆ ವರದಿ ಪಡೆದು ಭೂ ಕುಸಿತದಿಂದ ಮನೆ ಕಳೆದುಕೊಂಡವರಿಗೆ ಮನೆ ನಿರ್ಮಾಣ, ಜಮೀನು ಕಳೆದುಕೊಂಡವರಿಗೆ  ಜಮೀನು ನೀಡಬೇಕು, ಕಾಫಿ ಕರಿಮೆಣಸು, ಅಡಿಕೆ ಬೆಳೆಗಳು ಜಲಪ್ರಳಯದಿಂದ ಸಂಪೂರ್ಣ ಹಾಳಾಗಿದ್ದು ಶೀಘ್ರವೇ ಪ್ರತ್ಯೇಕ ಪರಿಹಾರ ನೀಡಬೇಕು. ತಮಿಳುನಾಡು, ಕೇರಳ ರಾಜ್ಯದ ಮಾದರಿಯಲ್ಲಿ ಬೆಳೆ ಸೆಸ್ ನಿಷೇಧಿಸಬೇಕು, ವನ್ಯ ಜೀವಿಗಳಿಂದ ರೈತರು ಅನುಭವಿಸುತ್ತಿರುವ ನಷ್ಟದ ಪರಿಹಾರ 10 ಪಟ್ಟು ಏರಿಕೆ ಮಾಡಬೇಕು.

ಜಿಲ್ಲೆಯ ಜಮ್ಮಾಬಾಣೆ ವಿವಾದವನ್ನು ರೈತರೊಂದಿಗೆ ಚರ್ಚಿಸಿ ಬಗೆಹರಿಸಬೇಕು, ಡಾ.ಸ್ವಾಮಿನಾಥನ್ ವರದಿಯನ್ನು ಜಾರಿಗೊಳಿಸಬೇಕು, ಭತ್ತ ಬೆಳೆಯುವ ರೈತರಿಗೆ ಪ್ರತಿ ಏಕರೆಗೆ 20 ಸಾವಿರ ರೂ.ಪ್ರೋತ್ಸಾಹ ಧನ ನೀಡಬೇಕು. ಗೋಣಿಕೊಪ್ಪ ಆನೆಚೌಕೂರು ಮೈಸೂರು ರಾಜ್ಯ ಹೆದ್ದಾರಿ ಸಂಚಾರಕ್ಕೆ ಯಾವುದೇ ನಿರ್ಬಂಧ ಹೇರಬಾರದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಪ್ರತಿಭಟನಾಕಾರರು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News