ಬಾಳ್ ಠಾಕ್ರೆ ಬಂಧನಕ್ಕೆ ಕ್ಷಮೆ ಯಾಚಿಸಿ: ಶಿವಸೇನೆ ಒತ್ತಾಯ

Update: 2019-10-13 03:53 GMT

ಮುಂಬೈ: ಮುಂಬೈ ಗಲಭೆ ಸಂಬಂಧ ಎನ್‌ಸಿಪಿ ಸರ್ಕಾರ ಅಧಿಕಾರದಲ್ಲಿದ್ದಾಗ 2000ನೇ ಇಸ್ವಿಯಲ್ಲಿ ಶಿವಸೇನೆ ಮುಖ್ಯಸ್ಥ ಬಾಳ್ ಠಾಕ್ರೆಯನ್ನು ಬಂಧಿಸಿದ ಕ್ರಮಕ್ಕಾಗಿ ಆ ಪಕ್ಷ ಸಾರ್ವಜನಿಕರಲ್ಲಿ ಕ್ಷಮೆ ಯಾಚಿಸಬೇಕು ಎಂದು ಶಿವಸೇನೆ ಒತ್ತಾಯಿಸಿದೆ.

ಈ ಮೂಲಕ ಬಾಳ್ ಠಾಕ್ರೆ ಬಂಧನ ವಿವಾದ 19 ವರ್ಷಗಳ ಬಳಿಕ ರಾಜಕೀಯ ತಿರುವು ಪಡೆದುಕೊಂಡಿದೆ.

"ಶಿವಸೇನೆ ಮುಖ್ಯಸ್ಥರನ್ನು ಬಂಧಿಸಿದ್ದು ದೊಡ್ಡ ಪ್ರಮಾದ; ಅದನ್ನು ನಾನು ವಿರೋಧಿಸಿದ್ದೆ" ಎಂದು ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರು ಹೇಳಿಕೆ ನೀಡುವ ಮೂಲಕ ವಿವಾದ ಸೃಷ್ಟಿಯಾಗಿತ್ತು. ಆದರೆ ಎನ್‌ಸಿಪಿಯ ಕೆಲ ನಾಯಕರು ಆ ಘಟನೆ ಬಗ್ಗೆ ಅಚಲವಾಗಿದ್ದರು. ಈ ಹಿನ್ನೆಲೆಯಲ್ಲಿ ಘಟನೆ ಬಗ್ಗೆ ಕ್ಷಮೆ ಯಾಚಿಸುವಂತೆ ಶಿವಸೇನೆ ಮುಖಂಡರು ಎನ್‌ಸಿಪಿಗೆ ಒತ್ತಾಯಿಸಿದ್ದಾರೆ.

ಪವಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಶಿವಸೇನೆ ವಕ್ತಾರ ರಾವುತ್, "ಮುಖಂಡರೊಬ್ಬರ ಒತ್ತಡದಿಂದಾಗಿ ಬಾಳ್ ಠಾಕ್ರೆ ಅವರನ್ನು ಬಂಧಿಸಲಾಗಿತ್ತು. ಅದು ದೊಡ್ಡ ಪ್ರಮಾದ; ಆದರೆ ಇದು ಮನವರಿಕೆಯಾಗಲು ನಿಮಗೆ ಬಹಳಷ್ಟು ವರ್ಷ ಬೇಕಾಯಿತು. ಅಜಿತ್ ದಾದಾ ನೀವು ಕ್ಷಮೆ ಯಾಚಿಸಬೇಕು" ಎಂದು ಆಗ್ರಹಿಸಿದರು.

ಕಾಂಗ್ರೆಸ್-ಎನ್‌ಸಿಪಿ ಸರ್ಕಾರ ಅಧಿಕಾರದಲ್ಲಿದ್ದಾಗ, ಮುಂಬೈ ಗಲಭೆಗೆ ಕುಮ್ಮಕ್ಕು ನೀಡಿದ ಆರೋಪದಲ್ಲಿ ಎನ್‌ಸಿಪಿ ಮುಖಂಡ ಹಾಗೂ ಗೃಹಸಚಿವರಾಗಿದ್ದ ಛಗನ್ ಭುಜಬಲ್ ಅವರು ಠಾಕ್ರೆ ಬಂಧನಕ್ಕೆ ಮುಂದಾಗಿದ್ದರು. ಆದರೆ ಶಿವಸೇನೆ ಮುಖ್ಯಸ್ಥ ನ್ಯಾಯಾಲಯದ ಮುಂದೆ ಶರಣಾಗಿದ್ದರು. ಆದರೆ ನ್ಯಾಯಾಲಯ ಠಾಕ್ರೆಯನ್ನು ಖುಲಾಸೆಗೊಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News