ದತ್ತ ವಿಗ್ರಹದ ಮೆರವಣಿಗೆಗೆ ಜಿಲ್ಲಾಡಳಿತ ನಿಷೇಧ: ಮೌನ ಪ್ರತಿಭಟನೆಯಲ್ಲಿ ಮುಕ್ತಾಯ ಕಂಡ ಶೋಭಾಯಾತ್ರೆ

Update: 2019-10-13 16:51 GMT

ಚಿಕ್ಕಮಗಳೂರು, ಅ.13: ದತ್ತಮಾಲಾ ಅಭಿಯಾನದ ಅಂಗವಾಗಿ ಶ್ರೀರಾಮಸೇನೆ ವತಿಯಿಂದ ರವಿವಾರ ನಗರದಲ್ಲಿ ಹಮ್ಮಿಕೊಂಡಿದ್ದ ಶೋಭಾಯಾತ್ರೆ  ಕೆಲ ಗೊಂದಲಗಳೊಂದಿಗೆ ಮುಕ್ತಾಯಗೊಂಡಿತು. ಜಿಲ್ಲಾಡಳಿತದ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರಿಂದ ಹಿಂದೆ ವಿಜೃಂಭಣೆಯಿಂದ ನಡೆಯುತ್ತಿದ್ದ ಶೋಭಾಯಾತ್ರೆ ಈ ಬಾರಿ ವಿಜೃಂಭಣೆಯಿಲ್ಲದೇ ನಡೆಯಿತು.

ಶ್ರೀರಾಮಸೇನೆಯ ಮುಖಂಡರು ಹಾಗೂ ಕಾರ್ಯಕರ್ತರು ಈ ಬಾರಿ ನಗರದಲ್ಲಿ ದತ್ತಮಾಲಾ ಅಭಿಯಾನವನ್ನು ವಿಜೃಂಭಣೆಯಿಂದ ನಡೆಸುವ ಸಿದ್ಧತೆ ಕೈಗೊಂಡು, ಶೋಭಾಯಾತ್ರೆಯನ್ನು ಅದ್ಧೂರಿಯಾಗಿ ನಡೆಸುವ ಉದ್ದೇಶ ಹೊಂದಿದ್ದರು. ಇದಕ್ಕೆಂದು ಕಾರವಾರದಿಂದ ದತ್ತನ ಮೂರ್ತಿಯನ್ನು ನಗರಕ್ಕೆ ತರಲಾಗಿತ್ತು. ಆದರೆ ಕಾರವಾರದಿಂದ ತರಲಾದ ಕಲ್ಲಿನ ವಿಗ್ರಹವನ್ನು ಶೋಭಾಯಾತ್ರೆಯ ಮೆರವಣಿಗೆಯಲ್ಲಿ ಕೊಂಡೊಯ್ಯುವುದಕ್ಕೆ ಜಿಲ್ಲಾಡಳಿತ ನಿರ್ಭಂಧ ವಿಧಿಸಿತ್ತು.

ಶೋಭಾಯಾತ್ರೆಯ ಹಿನ್ನೆಲೆಯಲ್ಲಿ ರವಿವಾರ ಬೆಳಗ್ಗೆ ನಗರದ ಶಂಕರಮಠದ ಆವರಣದಲ್ಲಿ ಶ್ರೀರಾಮಸೇನೆಯ ಮುಖಂಡರಾದ ಪ್ರಮೋದ್ ಮುತಾಲಿಕ್, ಗಂಗಾಧರ್ ಕುಲಕರ್ಣಿ, ರಂಜಿತ್‍ ಶೆಟ್ಟಿ, ಕಾಶ್ಮೀರದಿಂದ ಆಗಮಿಸಿದ್ದ ಆಧ್ಯಾತ್ಮಿಕ ಚಿಂತಕ ರಾಹುಲ್ ಕೌಲ್, ಕಾಳಿ ಸ್ವಾಮೀಜಿ ಮತ್ತಿತರರು ಧಾರ್ಮಿಕ ಸಭೆ ನಡೆಸಿದರು. ಸಭೆಯಲ್ಲಿ ಎಲ್ಲ ಮುಖಂಡರು ಕಲ್ಲಿನ ವಿಗ್ರಹವನ್ನು ಜಿಲ್ಲಾಡಳಿತ ಮೆರವಣಿಗೆಯಲ್ಲಿ ಕೊಂಡೊಯ್ಯಲು ನಿಷೇಧ ಹೇರಿದ್ದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸಭೆ ನಡೆಯುತ್ತಿದ್ದಂತೆ ಶೋಭಾಯಾತ್ರೆಗೆ ಮುಂದಾದ ಮುಖಂಡರು, ಕಾರ್ಯಕರ್ತರ ಮೂಲಕ ಕಲ್ಲಿನ ವಿಗ್ರಹವನ್ನು ಟ್ಯಾಕ್ಟರ್ ನಲ್ಲಿ ತರಲು ಸೂಚನೆ ನೀಡಿದ್ದರು. ವಿಗ್ರಹವನ್ನು ಮೆರವಣಿಗೆಯಲ್ಲಿ ಕೊಂಡೊಯ್ಯುವಂತಿಲ್ಲ ಎಂದು ಜಿಲ್ಲಾಡಳಿತ ಈ ಮೊದಲೆ ಆದೇಶ  ಹೊರಡಿಸಿ ಮುಖಂಡರಿಗೆ ಸೂಚನೆ ನೀಡಿದ್ದರೂ ವಿಗ್ರಹ ತರಲು ಮುಂದಾದ ಕಾರ್ಯಕರ್ತರಿಗೆ ಜಿಲ್ಲಾಡಳಿತ ವಿಗ್ರಹವನ್ನು ಸಾಯಿ ಮಂದಿರದಿಂದ ಕದಲಿಸಲು ಬಿಡಲಿಲ್ಲ. ಬಿಗಿ ಪೊಲೀಸ್ ಭದ್ರತೆ ಒದಗಿಸಿದ್ದರಿಂದ ಕಾರ್ಯಕರ್ತರು ನಿರ್ವಾಹವಿಲ್ಲದೇ ಹಿಂದಿರುಗಿದ್ದರು.

ಇದರಿಂದ ಕೆರಳಿದ ಶ್ರೀರಾಮಸೇನೆ ಮುಖಂಡರು, ಜಿಲ್ಲಾಡಳಿತ, ಪೊಲೀಸ್ ಇಲಾಖೆ, ರಾಜ್ಯ ಸರಕಾರ ಹಾಗೂ ಶಾಸಕರು, ಸಂಸದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ದಿಢೀರ್ ಧರಣಿ ನಡೆಸಲು ಕರೆ ನೀಡಿದರು. ಈ ವೇಳೆ ಸ್ಥಳದಲ್ಲಿದ್ದ ಸಾವಿರಾರು ಕಾರ್ಯಕರ್ತರು ಸರಕಾರ, ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಮೊಳಗಿಸಿ ರಸ್ತೆಯಲ್ಲಿ ಕೂತು ಧರಣಿ ನಡೆಸಿದರು. ಈ ಹಂತದಲ್ಲಿ ಸ್ಥಳದಲ್ಲಿ ಭಾರೀ ಗೊಂದಲ ಏರ್ಪಟ್ಟು, ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.

ಬಳಿಕ ಜಿಲ್ಲಾಡಳಿತಕ್ಕೆ ಅರ್ಧ ಗಂಟೆಗಳ ಗಡುವು ನೀಡಿದ ಮುಖಂಡರು ವಿಗ್ರಹವನ್ನು ಒಪ್ಪಿಸಬೇಕೆಂದು ಪಟ್ಟು ಹಿಡಿದರು. ಕಾರ್ಯಕರ್ತರು, ಮುಖಂಡರು ಧಿಕ್ಕಾರದ ಘೋಷಣೆಗಳನ್ನು ಕೂಗಿದರು. ಅರ್ಧ ಗಂಟೆಗಳ ಗಡುವು ಮುಗಿದರೂ ಜಿಲ್ಲಾಡಳಿತ ಯಾವುದೇ ಮಾತುಕತೆಗೆ ಆಗಮಿಸಿದ್ದನ್ನು ಕಂಡ ಮುಖಂಡರು, ಕಾರ್ಯಕರ್ತರು ಧರಣಿ ಮುಂದುವರಿಸುತ್ತಿರುವಂತೆಯೇ ಶಂಕರಮಠದ ಒಳಗೆ ಪ್ರವೇಶಿಸಿ ಗೌಪ್ಯ ಸಮಾಲೋಚನೆ ನಡೆಸಿದರು.

ಜಿಲ್ಲಾಡಳಿತದ ಮೌನದ ಸೂಚನೆ ಅರಿತ ಮುಖಂಡರು, ವಿಗ್ರಹವಿಲ್ಲದೇ ಶೋಭಾಯಾತ್ರೆ ನಡೆಸುವುದಿಲ್ಲ. ಶೋಭಾಯಾತ್ರೆಯನ್ನು ಬಾಯಿಗೆ ಕಪ್ಪುಪಟ್ಟಿ ಕಟ್ಟಿಕೊಂಡು ಮೌನ ಪ್ರತಿಭಟನೆ ರೂಪದಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಮೌನ ಪ್ರತಿಭಟನೆಗೆ ಕರೆ ನೀಡಿದರು. ನಂತರ ಎಲ್ಲ ಮುಖಂಡರು ಬಾಯಿಗೆ ಕಪ್ಪುಪಟ್ಟಿ ಧರಿಸಿಕೊಂಡು ದತ್ತನ ವಿಗ್ರಹವಿಲ್ಲದ ಖಾಲಿ ವಾಹನದೊಂದಿಗೆ ಬಸವನಹಳ್ಳಿ ರಸ್ತೆಯಲ್ಲಿರುವ ಶಂಕರಮಠದಿಂದ ಎಂಜಿ ರಸ್ತೆಯ ಮೂಲಕ ಸಾಗಿ ಆಝಾದ್ ಪಾರ್ಕ್ ವೃತ್ತದಲ್ಲಿ ಪ್ರತಿಭಟನೆಯನ್ನು ಸಮಾಪ್ತಿಗೊಳಿಸಿದರು. ನಂತರ ಕಾರ್ಯಕರ್ತರು, ಮುಖಂಡರು ಬಾಬಾ ಬುಡನ್‍ಗಿರಿಗೆ ವಾಹನಗಳ ಮೂಲಕ ತೆರಳಿದರು. 

ಸಚಿವ ಸಿ.ಟಿ.ರವಿ ವಿರುದ್ಧ ಪರೋಕ್ಷ ವಾಗ್ದಾಳಿ
ಶೋಭಾಯಾತ್ರೆಯಲ್ಲಿ ವಿಗ್ರಹದ ಮೆರವಣಿಗೆಗೆ ಅವಕಾಶ ನೀಡದ ಹಿನ್ನೆಲೆಯಲ್ಲಿ ಶ್ರೀರಾಮ ಸೇನೆಯ ಮುಖಂಡರು ಸಚಿವ ಸಿ.ಟಿ.ರವಿ ಹಾಗೂ ಬಿಜೆಪಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ದತ್ತನ ವಿಗ್ರಹವನ್ನು ದತ್ತಪೀಠದಲ್ಲಿ ಪ್ರತಿಷ್ಠಾಪಿಸಲು ತಂದಿಲ್ಲ. ಆದರೆ ಜಿಲ್ಲಾಡಳಿತ ತಪ್ಪು ಕಲ್ಪನೆಯಿಂದ ವಿಗ್ರಹವನ್ನು ವಶಕ್ಕೆ ಪಡೆದು. ಮೆರವಣಿಗೆ ನಡೆಸಲು ಅನುಮತಿ ನೀಡಿಲ್ಲ. ಇದರ ಹಿಂದೆ ಸರಕಾರ ಹಾಗೂ ಜಿಲ್ಲೆಯಲ್ಲಿ ಈ ಹಿಂದೆ ಪಡಿ ಸಂಗ್ರಹಿಸಿದವರ ಕೈವಾಡ ಇದೆ. ಇವರ ಆದೇಶದಿಂದಲೇ ಜಿಲ್ಲಾಡಳಿತ ಈ ಕ್ರಮಕೈಗೊಂಡಿದೆ. ದತ್ತಸ್ವಾಮಿ ಇವರಿಗೆ ಸರಿಯಾದ ಪಾಠ, ಶಾಸ್ತಿ ಕಲಿಸಿಲಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.

ಗಡ್ಡ ಬೋಳಿಸಲ್ಲ, ತಲೆ ಕೂದಲು ತೆಗೆಯೊಲ್ಲ
ಧರಣಿ ಸಂದರ್ಭದಲ್ಲಿ ಮಾತನಾಡಿದ ಶ್ರೀರಾಮಸೇನೆಯ ರಾಜ್ಯ ಕಾರ್ಯದರ್ಶಿ ಗಂಗಾಧರ್ ಕುಲಕರ್ಣಿ, ಜಿಲ್ಲಾಡಳಿತದ ಕ್ರಮದ ಹಿಂದೆ ರಾಜಕಾರಣಿಗಳಿದ್ದಾರೆ. ಇವರಿಗೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಾಗುವುದು. ಅಧಿಕಾರಕ್ಕೇರಲು ಹಿಂದೂಗಳ ಓಟು ಬೇಕು, ಹಿಂದೂಗಳ ಧಾರ್ಮಿಕ ಸಮಸ್ಯೆಗಳು ಎದುರಾದಾಗ ರಾಜಕೀಯ ಮಾಡುವ ಇಂತಹ ರಾಜಕಾರಣಿಂದಲೇ ಸಮಸ್ಯೆಗಳು ಬಗೆಹರಿಯುತ್ತಿಲ್ಲ ಎಂದ ಅವರು, ನಮಗೆ ನ್ಯಾಯಾಲಯದ ಕಾನೂನಿನ ಮೇಲೆ ನಂಬಿಕೆ ಇದೆ. ದತ್ತನ ವಿಗ್ರಹವನ್ನು ನ್ಯಾಯಾಲಯದ ಆದೇಶದ ಬಳಿಕವೇ ಭವ್ಯ ಮೆರವಣಿಯಲ್ಲಿ ದತ್ತಪೀಠದಲ್ಲಿ ಪ್ರತಿಷ್ಠಾಪಿಸುತ್ತೇವೆ. ಕದ್ದು ಮುಚ್ಚಿ ಅಲ್ಲಿ ಪ್ರತಿಷ್ಠಾಪಿಸುವುದಿಲ್ಲ. ದತ್ತನ ವಿಗ್ರಹವನ್ನು ದತ್ತಪೀಠದಲ್ಲಿ ಪ್ರತಿಷ್ಠಾಪನೆ ಮಾಡುವವರೆಗೂ ನಾನು ತಲೆ ಕೂದಲು ತೆಗೆಯುವದಿಲ್ಲ, ಗಡ್ಡ ಬೋಳಿಸುವುದಿಲ್ಲ ಎಂದು ಹೇಳಿದರು.

ಬಿಗಿ ಪೊಲೀಸ್ ಭದ್ರತೆ
ಶೋಭಾಯಾತ್ರೆ ಹಿನ್ನೆಲೆಯಲ್ಲಿ ವಿಗ್ರಹದ ವಿಚಾರವಾಗಿ ಅಹಿತಕರ ಘಟನೆಗಳು ಸಂಭವಿಸುವುದನ್ನು ತಡೆಯಲು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಜಿಲ್ಲೆ ಹಾಗೂ ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಭದ್ರತೆ ಕೈಗೊಂಡಿತ್ತು. ಎಸ್ಪಿ ಹರೀಶ್ ಪಾಂಡೆ ಅಲ್ಲದೇ ಐಜಿಪಿ ಕೂಡ ನಗರದಲ್ಲಿ ಬೀಡು ಬಿಟ್ಟು ಭದ್ರತೆಯ ನೇತೃತ್ವ ವಹಿಸಿದ್ದರು. ಎಸ್ಪಿ ಹಾಗೂ ಡಿಸಿ ಖುದ್ದ ರಸ್ತೆಗಿಳಿದು ಮೆರವಣಿಗೆ ಸಾಗುವ ಎಂಜಿ ರಸ್ತೆಯಲ್ಲಿನ ಭದ್ರತಾ ವ್ಯವಸ್ಥೆಗಳನ್ನು ಪರಿಶೀಲಿಸಿದರು. ನಗರದ ಪ್ರಮುಖ ದೇವಾಲಯ, ಮಸೀದಿ, ಚರ್ಚ್‍ಗಳಿಗೆ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿತ್ತು. ಬಾಬಾ ಬುಡನ್‍ಗಿರಿಗೆ ಸಾಗುವ ಆಯಕಟ್ಟಿನ ಪ್ರದೇಶಗಳಲ್ಲೂ ಪೊಲೀಸರ ಸರ್ಪಗಾವಲನ್ನು ಹಾಕಲಾಗಿತ್ತು. ವಾಹನಗಗಳ ಸಂಚಾರ ದಟ್ಟಣೆ ನಿಯಂತ್ರಿಸಲು ಕೆಲ ರಸ್ತೆಗಳಲ್ಲಿ ವಾಹನ ಸಂಚಾರವನ್ನು ನಿಷೇಧಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News