ವಾಲ್ಮೀಕಿ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಾಟ: ಡಿವೈಎಸ್ಪಿ, ಮೂವರು ಪೊಲೀಸರಿಗೆ ಗಾಯ

Update: 2019-10-13 15:57 GMT

ಮೈಸೂರು,ಅ.13: ವಾಲ್ಮೀಕಿ ಜಯಂತಿ ಮೆರವಣಿಗೆ ವೇಳೆ ಡಿಜೆ ಸೌಂಡ್ ಗೆ ಅವಕಾಶ ನೀಡಲಿಲ್ಲ ಎಂದು ಆರೋಪಿಸಿ ಯುವಕರು ಪೊಲೀಸರ ಮೇಲೆ ಕಲ್ಲು ತೂರಾಟ ಮಾಡಿ ಬಸ್ಸು, ಕಾರುಗಳ ಮೇಲೆ ದಾಂಧಲೆ ನಡೆಸಿದ ಪರಿಣಾಮ ಓರ್ವ ಡಿವೈಎಸ್ಪಿ ಮತ್ತು ಮೂವರು ಪೊಲೀಸರಿಗೆ ಗಾಯಗಳಾಗಿರುವ ಘಟನೆ ನಂಜನಗೂಡು ನಗರದಲ್ಲಿ ನಡೆದಿದೆ.

ರಾಜ್ಯಾದ್ಯಂತ ವಾಲ್ಮೀಕಿ ಜಯಂತಿ ಆಚರಣೆ ನಡೆಯುತ್ತಿದ್ದು, ನಂಜನಗೂಡು ನಗರದಲ್ಲೂ ರವಿವಾರ ತಾಲೂಕು ಆಡಳಿತ ವತಿಯಿಂದ ವಾಲ್ಮೀಕಿ ಜಯಂತಿ ಆಚರಣೆ ಮಾಡಲಾಯಿತು. ಇದೇ ವೇಳೆ ನಗರದ ನಂಜನಗೂಡು-ಊಟಿ ರಸ್ತೆಯಲ್ಲಿರುವ ಸರಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಆವರಣದಿಂದ ಶ್ರೀಶ್ರೀಕಂಠೇಶ್ವರಸ್ವಾಮಿ ದೇವಸ್ಥಾನದಲ್ಲಿರುವ ಕಲಾಮಂದಿರದ ವರೆಗೆ ಮೆರವಣಿಗೆ ಸಾಗುವ ವೇಳೆ ಊಟಿ ರಸ್ತೆಯ ಪ್ರಸನ್ನ ಚಿಂತಾಮಣಿ ಗಣಪತಿ ದೇವಸ್ಥಾನದ ಮುಂಭಾಗ ಈ ಘಟನೆ ನಡೆದಿದೆ.

ತಾಲೂಕಿನ ವಿವಿಧ ಹಳ್ಳಿಗಳಿಂದ ಬಂದಿದ್ದ ನೂರಾರು ಮಂದಿ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಯುವಕರ ಗುಂಪು ಆಟೋಗಳಲ್ಲಿ ಡಿಜೆ ಸೌಂಡ್ಸ್ ಅನ್ನು ಕಟ್ಟಿಕೊಂಡು ಕುಣಿದು ಕುಪ್ಪಳಿಸಲು ಮುಂದಾದರು. ಇದಕ್ಕೆ ತಡೆಯೊಡ್ಡಿದ ಪೊಲೀಸರು ಡಿಜೆ ಸೌಂಡ್ಸ್ ಹಾಕದಂತೆ ಎಚ್ಚರಿಕೆ ನೀಡಿದರು. ಇದರಿಂದ ಕೆರಳಿದ ಯುವಕರು ನಾವು ಡಿಜೆ ಸೌಂಡ್ ಹಾಕಲೇಬೇಕು ಎಂದು ಹಠಕ್ಕೆ ಬಿದ್ದರು. ಆದರೆ ಸಮುದಾಯದ ಮುಖಂಡರು ಡಿಜೆ ಸೌಂಡ್ ಬೇಡ ಎಂದರೂ ಯುವಕರು ಒಪ್ಪಲಿಲ್ಲ, ಇದರಿಂದ ಪೊಲೀಸರು ಮತ್ತು ಯುವಕರ ನಡುವೆ ಮಾತಿನ ಚಕಮಕಿ ನಡೆಯಿತು ಎನ್ನಲಾಗಿದೆ.

ಒಂದು ಹಂತದಲ್ಲಿ ಉದ್ರೇಕಗೊಂಡ ಯುವಕರ ಗುಂಪು ಪೊಲೀಸರತ್ತ ಕಲ್ಲು ಎಸೆಯಲು ಶುರುಮಾಡಿತು. ಪೊಲೀಸರು ಶಾಂತ ರೀತಿಯಿಂದ ಮನವಿ ಮಾಡಿದರೂ ಬಗ್ಗಲಿಲ್ಲ ಎನ್ನಲಾಗಿದ್ದು. ನಂತರ ಊಟಿ ರಸ್ತೆಯಲ್ಲಿ ಬರುತ್ತಿದ್ದ ಸರಕಾರಿ ಬಸ್ಸು, ಲಾರಿ ಹಾಗೂ ಕಾರಿನ ಮೇಲೆ ಕಲ್ಲುಗಳನ್ನು ತೂರಲು ಪ್ರಾರಂಭಿಸಿದರು. ಇದರಿಂದ ಬಸ್ಸಿನ ಗಾಜು ಪುಡಿ ಪುಡಿಯಾಗಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿರುವುದನ್ನು ಅರಿತ ಪೊಲೀಸರು ಲಾಠಿ ಚಾರ್ಚ್ ಮಾಡಿ ಗುಂಪನ್ನು ಚದುರಿಸಿದರು.

ಇದೇ ವೇಳೆ ನಂಜನಗೂಡು ಉಪವಿಭಾಗದ ಡಿವೈಎಸ್ಪಿ ಮಲ್ಲಿಕ್, ಸೇರಿದಂತೆ ಮೂವರು ಪೊಲೀಸರಿಗೆ ಗಾಯಗಳಾಗಿದ್ದು, ಅವರಿಗೆ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ಹೆಚ್ಚಿನ ಅನಾಹುತ ನಡೆಯದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.

50 ಮಂದಿ ವಶಕ್ಕೆ: ಡಿವೈಎಸ್ಪಿ ಮಲ್ಲಿಕ್
ಪೊಲೀಸರ ಮೇಲ ಹಲ್ಲೆ ನಡೆಸಿ ಧಾಂದಲೆ ನಡೆಸಿ ಹಿನ್ನಲೆಯಲ್ಲಿ ಈಗಾಗಲೇ 50 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಯಾರು ತಪ್ಪಿತಸ್ಥರು ಎಂದು ಪರಿಶೀಲಿಸಲಾಗುತ್ತಿದೆ ಎಂದು ನಂಜನಗೂಡು ಉಪವಿಭಾಗದ ಡಿವೈಎಸ್ಪಿ ಮಲ್ಲಿಕ್ ತಿಳಿಸಿದರು.

“ವಾರ್ತಾಭಾರತಿ”ಯೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಅವರು, ಡಿಜೆ ಸೌಂಡ್ಸ್ ಗೆ ಅವಕಾಶ ನೀಡದಿದ್ದಕ್ಕೆ ಒಂದು ಗುಂಪು ಮೆರವಣಿಗೆಯಲ್ಲಿ ಒಂದು ಕಿ.ಮಿ. ದೂರ ಕ್ರಮಿಸಿ ನಂತರ ಬಂದು ಮೈಸೂರು-ಊಟಿ ರಸ್ತೆಯಲ್ಲಿರುವ ಶ್ರಿಪ್ರಸನ್ನ ಚಿಂತಾಮಣಿ ಗಣಪತಿ ದೇವಸ್ಥಾನದ ಬಳಿ ರಸ್ತೆ ತಡೆ ನಡೆಸಲು ಮುಂದಾದರು. ತಕ್ಷಣ ಅವರನ್ನು ಅಲ್ಲಿಂದ ತೆರಳುವಂತೆ ಎಷ್ಟೇ ಮನವಿ ಮಾಡಿದರು ಜಗ್ಗಲಿಲ್ಲ. ನಂತರ ನಮ್ಮ ಮೇಲೆ ಮತ್ತು ಬಸ್ಸು ಕಾರುಗಳ ಮೇಲೆ ಕಲ್ಲು ತೂರಲು ಪ್ರಾರಂಭಿಸಿದರು. ನಂತರ ಲಘು ಲಾಠಿ ಪ್ರಹಾರ ಮಾಡಿ ಗುಂಪನ್ನು ಚದುರಿಸಲಾಯಿತು ಎಂದು ಹೇಳಿದರು.

ಮೆರವಣಿಗೆ ಮೊದಲೆ ಡಿಜೆ ಸೌಂಡ್ಸ್ ಗೆ ಅವಕಾಶವಿಲ್ಲ ಎಂದು ಹೇಳಲಾಗಿದೆ. ಕಳೆದ ವರ್ಷ ಸಹ ಇದೇ ವಿಚಾರಕ್ಕೆ ಸ್ವಲ್ಪ ಗಲಾಟೆ ನಡೆದಿದೆ. ಆದರೂ ಕೆಲವರು ಉದ್ದೇಶಪೂರ್ವಕವಾಗಿ ವಿವಾದ ಮಾಡಿದ್ದಾರೆ. ತಪ್ಪು ಮಾಡಿರುವವರನ್ನು ಬಂಧಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News