ಬಂಡೀಪುರ: ಇಬ್ಬರು ರೈತರು, ಆನೆ ಮರಿಯನ್ನು ಬಲಿ ಪಡೆದಿದ್ದ ನರಭಕ್ಷಕ ಹುಲಿ ಕೊನೆಗೂ ಬಲೆಗೆ

Update: 2019-10-13 16:20 GMT

ಚಾಮರಾಜನಗರ, ಅ.13: ಇಬ್ಬರು ಅನ್ನದಾತರನ್ನು ಬಲಿ ತೆಗೆದುಕೊಂಡ ನರಭಕ್ಷಕ ಹಸಿದ ಹೆಬ್ಬುಲಿ ಸತತ ಐದು ದಿನಗಳ ನಿರಂತರ ಕೂಂಬಿಂಗ್ ಕಾರ್ಯಾಚರಣೆ ನಂತರ ಸೆರೆ ಸಿಕ್ಕಿದೆ.‌ ಇದರಿಂದಾಗಿ ಕಾಡಂಚಿನ ಗ್ರಾಮದ ನಿವಾಸಿಗಳು ನಿಟ್ಟುಸಿರು ಬಿಡುವಂತಾಗಿದೆ. 

ಕಳೆದ ನಲವತ್ತು ದಿನಗಳ ಅಂತರದಲ್ಲಿ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ನ್ಯಾಷನಲ್ ಪಾರ್ಕಿನ ವ್ಯಾಪ್ತಿಯ ಕಾಡಂಚಿನ ಗ್ರಾಮಗಳಾದ ಚೌಡಳ್ಳಿ ಮತ್ತು ಹುಂಡೀಪುರ ಗ್ರಾಮದ ಅನ್ನದಾತರಿಬ್ಬರನ್ನು ಹಾಡುಹಗಲೇ ಹುಲಿ ಬಲಿ ತೆಗೆದುಕೊಂಡಿತ್ತು. 

ಚೌಡಳ್ಳಿ ಗ್ರಾಮದ ಶಿವಮಾದಯ್ಯ ಹಾಗು ಶಿವಲಿಂಗಪ್ಪರವರು ಹಸಿದ ಹೆಬ್ಬಲಿಗೆ ಬಲಿಯಾಗಿದ್ದರು. ಈ ದುರ್ಘಟನೆಯಿಂದ ಬಂಡಿಪುರದ ಅರಣ್ಯ ಅಧಿಕಾರಿಗಳು ಮತ್ತು ಕಾಡಂಚಿನ ಗ್ರಾಮಸ್ಥರಿಗೆ ಸಂಘರ್ಷ ಏರ್ಪಟಿತ್ತು. ಈ ನಡುವೆ ನರಹಂತಕ ಹುಲಿಯನ್ನು ಜೀವಂತವಾಗಿ ಅಥವಾ ಕೊಂದಾದರೂ ಸೆರೆ ಹಿಡಿಯಲು ಅರಣ್ಯ ಇಲಾಖೆಯ ಅಧಿಕಾರಿ ಜಗತ್ ರಾಂ ಆದೇಶಿಸಿದ್ದರು. ಅರಣ್ಯಾಧಿಕಾರಿಗಳ ಆದೇಶದಂತೆ ಕಳೆದ ಐದು ದಿನಗಳಿಂದ ನಿರಂತರವಾಗಿ ಕೂಂಬಿಂಗ್ ಕಾರ್ಯಾಚರಣೆ ನಡೆಯುತ್ತಿತ್ತು. ಕೂಂಬಿಂಗ್ ಸ್ಪೆಷಲಿಸ್ಟ್ ಅಭಿಮನ್ಯು ನೇತೃತ್ವದಲ್ಲಿ ಗಣೇಶ, ಗೋಪಾಲಸ್ವಾಮಿ, ಪಾರ್ಥಸಾರಥಿ, ಜಯಪ್ರಕಾಶ, ರೋಹಿತ್, ಗಣೇಶ ಆನೆ ಕೂಂಬಿಂಗ್ ಕಾರ್ಯಾಚರಣೆಗೆ ಇಳಿದಿತ್ತು.

ಅರಣ್ಯ ಇಲಾಖೆಯ ಅಪಾರಾಧಗಳ ಪತ್ತೆ ಹಚ್ಚುವ 'ರಾಣಾ' ಶ್ವಾನವನ್ನೂ ಸಹ ಹುಲಿ ಜಾಡು ಪತ್ತೆಗಾಗಿ ಬಳಸಿಕೊಳ್ಳಲಾಗಿತ್ತು. ಅಲ್ಲಲ್ಲಿ 200 ಕ್ಯಾಮಾರಾ ಅಳವಡಿಸಿಲಾಗಿತ್ತು ಮತ್ತು‌ ಡ್ರೋಣ್ ಮೂಲಕವು ಸಹ ಹುಲಿ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು.

ಶನಿವಾರ ರಾತ್ರಿ ಗೋಪಾಲಸ್ವಾಮಿ ಬೆಟ್ಟ ವಲಯದ ಮಗುವಿನಹಳ್ಳಿ ಸಮೀಪ ಜಮೀನಿನ ಬಳಿ ಹುಲಿ ಕಾಣಿಸಿಕೊಂಡಿತ್ತು. ಹುಲಿ ಕಾರ್ಯಾಚರಣೆ ಶನಿವಾರ ಆರಂಭಿಸುತ್ತಿದ್ದಂತೆಯೇ ಹುಲಿಯು ನವಜಾತ ಆನೆ ಮರಿಯನ್ನೂ ಕೊಂದಿತ್ತು. ಇಬ್ಬರು ರೈತರ ಬಳಿಕ ಆನೆ ಮರಿಯನ್ನೂ ಬಲಿ ಪಡೆದ ಘಟನೆಯಿಂದ ಕಂಗಾಲಾದ ಅರಣ್ಯ ಅಧಿಕಾರಿಗಳು ಹಸಿದ ಹೆಬ್ಬುಲಿ ಸೆರೆಗೆ ರಣತಂತ್ರ ರೂಪಿಸಿದ್ದರು. ಭಾನುವಾರ ಮುಂಜಾನೆ ಮಗುವಿನಗಳ್ಳಿ ಸಮೀಪದ ಜಮೀನಿನ ಬಳಿ ಹುಲಿ ಹೆಜ್ಜೆ ಕಂಡ ಅರಣ್ಯಾಧಿಕಾರಿಗಳು ಕೂಂಬಿಂಗ್ ಕಾರ್ಯಾಚರಣೆ ಚುರುಕುಗೊಳಿಸಿದರು. 

ಮಧ್ಯಾಹ್ನ ವೇಳೆಗೆ ಪೊದೆಯ ನಡುವೆ ಹುಲಿ ಘರ್ಜನೆ ಕೇಳಿದ ನುರಿತ ವನ್ಯಜೀವಿ ವೈದ್ಯರು ಹುಲಿಯತ್ತ‌ ಅರವಳಿಕೆ ಚುಚ್ಚುಮದ್ದು ಸಿಡಿಸಿದರು. ಸಂಜೆ 4 ಗಂಟೆ ವೇಳೆಗೆ ಅರಣ್ಯಾಧಿಕಾರಿಗಳ ತಂಡ ಪೊದೆಯಲ್ಲಿ ನಿತ್ರಾಣ ಕಳೆದುಕೊಂಡಿದ್ದ ನರಭಕ್ಷಕ ಹುಲಿಗೆ ಬಲೆ ಹಾಕಿ ಸುರಕ್ಷಿತವಾಗಿ ಹಿಡಿದರು.

ಈ ಸಂದರ್ಭದಲ್ಲಿ ಸ್ಥಳೀಯ ಶಾಸಕ ಸಿ.ಎಸ್.ನಿರಂಜನಕುಮಾರ್ ಸ್ಥಳದಲ್ಲಿದ್ದರು.

ಕಾರ್ಯನಿಮಿತ್ತ‌ ಮೈಸೂರಿಗೆ ಆಗಮಿಸಿದ್ದ ಅರಣ್ಯ ಸಚಿವ ಸಿ.ಸಿ.ಪಾಟೀಲ್ ಆಪರೇಷನ್ ಟೈಗರ್ ವಿಚಾರ ತಿಳಿಯುತ್ತಿದಂತೆಯೇ ಸ್ಥಳಕ್ಕೆ ತೆರಳಿ ಸೆರೆ ಹಿಡಿದ ಹುಲಿಯನ್ನು ವೀಕ್ಷಿಸಿದರು. ಬಳಿಕ ಹುಲಿಯನ್ನು ಮೈಸೂರಿನ ವನ್ಯಜೀವಿ ವಿಶ್ರಾಂತ ಧಾಮಕ್ಕೆ ಸ್ಥಳಾಂತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News