×
Ad

ಸರಕಾರದ ಹುಳುಕು ಮುಚ್ಚಿಡಲು 3 ದಿನಗಳಿಗೆ ಅಧಿವೇಶನ ಮೊಟಕು: ಸಿದ್ದರಾಮಯ್ಯ ಆರೋಪ

Update: 2019-10-13 22:52 IST

ಚಿಕ್ಕಮಗಳೂರು, ಅ.13: ಅಧಿವೇಶನಲ್ಲಿ ಬಜೆಟ್‍ನಂತಹ ವಿಷಯದ ಚರ್ಚೆಯಲ್ಲೂ ಆಡಳಿತರೂಢ ಪಕ್ಷದವರು ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ರೂಲ್ ನಂ.178ನಂತೆ 15 ದಿನಗಳಿಗೆ ಕಡಿಮೆ ಇಲ್ಲದಂತೆ ನಡೆಯಬೇಕು. ಆದರೆ ಸರಕಾರದವರು ಎಲ್ಲ ನಿಯಮಾವಳಿಗಳನ್ನು ಉಲ್ಲಂಘಿಸುವ ಮೂಲಕ ಅಧಿವೇಶನವನ್ನು ಮೂರೇ ದಿನಕ್ಕೆ ಮೊಟಕುಗೊಳಿಸಿದ್ದಾರೆ. ಅಧಿವೇಶನ ಹೆಚ್ಚು ದಿನ ನಡೆದಲ್ಲಿ ಸರಕಾರದ ವೈಫಲ್ಯಗಳು ಜಗಜ್ಜಾಹೀರಾಗುತ್ತವೆಂಬ ಭೀತಿಯಿಂದ ಬಿಜೆಪಿಯವರದ್ದಾಗಿದೆ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.

ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ನಗರಕ್ಕೆ ಆಗಮಿಸಿದ್ದ ಅವರು ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಮ್ಮ ಅಧಿಕಾರವಧಿಯಲ್ಲಿ ಹಾಗೂ ಬಜೆಟ್‍ನಂತಹ ವಿಷಯಗಳ ಮೇಲಿನ ಚರ್ಚೆಗೆ 15 ದಿನಗಳ ಕಾಲಾವಕಾಶ ನೀಡುತ್ತಿದ್ದೆವು. ಬಿಜೆಪಿಯವರು ಆತಂಕದಿಂದಾಗಿ ಮೂರೇ ದಿನಕ್ಕೆ ಅಧಿವೇಶನವನ್ನು ತರಾತುರಿಯಲ್ಲಿ ಮುಗಿದ್ದಾರೆ. ಮೂರು ದಿನಗಳ ಅಧಿವೇಶನದಲ್ಲಿ ಒಂದೂವರೆ ದಿನ ಅತಿವೃಷ್ಟಿ ಮೇಲಿನ ಚರ್ಚೆಯಾಗಿದೆ ಎಂದ ಅವರು, ಕರ್ನಾಟಕ ರಾಜ್ಯದ ವಿಧಾನಸಭೆ ಅಧಿವೇಶನಗಳ ಇತಿಹಾಸದಲ್ಲಿ ವಿರೋಧ ಪಕ್ಷಗಳ ನಾಯಕರು ಮಾತನಾಡುವಾಗ ನಿರ್ಬಂಧ ಹೇರಿದ ಇತಿಹಾಸವೇ ಇಲ್ಲ. ಬಜೆಟ್ ಮೇಲೆ ಚರ್ಚೆ ಮಾಡುವಾಗ ವಿರೋಧ ಪಕ್ಷದ ನಾಯಕನ ಮಾತಿಗೆ ನಿರ್ಬಂಧ ಹೇರುವಂತಿಲ್ಲ. ನನ್ನ ಅಧಿಕಾರವಧಿಯಲ್ಲಿ 13 ಬಜೆಟ್ ಮಂಡಿಸಿದ್ದೇನೆ. ಆದರೆ ಯಾವತ್ತೂ ವಿರೋಧ ಪಕ್ಷದ ನಾಯಕನಿಗೆ ನೀವು ಮಾತಾಡಿದ್ದು ಸಾಕೆಂದು ನಿರ್ಬಂಧ ಹೇರಿಲ್ಲ ಎಂದರು.

ಬಿಜೆಪಿಯವರ ಮಾನಸಿಕ ಸ್ಥಿತಿಯೇ ಹಾಗಿದ್ದು, ಹೆಚ್ಚು ದಿನ ಅಧಿವೇಶನ ನಡೆದಲ್ಲಿ ಸರಕಾರದ ಹುಳುಕುಗಳು, ವೈಫಲ್ಯಗಳು, ತಪ್ಪುಗಳು ಜನರಿಗೆ ತಿಳಿಯುತ್ತದೆ ಎಂಬ ಕಾರಣಕ್ಕೆ ಮೂರು ದಿನಗಳಿಗೆ ಅಧಿವೇಶನವನ್ನು ಮೊಟಕುಗೊಳಿಸಿದ್ದಾರೆ. ಬಿಜೆಪಿಯವರ ಈ ಮನಸ್ಥಿತಿ ಮುಂದುವರಿದಲ್ಲಿ ಮುಂದಿನ ದಿನಗಳಲ್ಲಿ ಅಧಿವೇಶನಗಳನ್ನು ನಡೆಸಲು ಬಿಡುವುದಿಲ್ಲ ಎಂದು ಮುಖ್ಯಮಂತ್ರಿ ಹಾಗೂ ಸ್ಪೀಕರ್ ಗೆ ಎಚ್ಚರಿಸಿದ್ದೇನೆಂದು ಸಿದ್ದರಾಮಯ್ಯ ಹೇಳಿದರು.

ಪ್ರಜಾಪ್ರಭುತ್ವ ಎಂಬುದು ನಮ್ಮ ಪ್ರತಿಷ್ಠೆ ಅಲ್ಲ. ಪ್ರಜಾಪ್ರಭುತ್ವ ಉಳಿಯಬೇಕು. ಜನರು ನಮ್ಮನ್ನು ಶಾಸಕರನ್ನಾಗಿ ಆಯ್ಕೆ ಮಾಡುವುದು ಬೆಂಗಳೂರಿಗೆ ಮೋಜು ಮಾಡಲು ಅಲ್ಲ. ವಿಧಾನಸಭೆಯಲ್ಲಿ ಜನರ ಸಮಸ್ಯೆಯನ್ನು ಚರ್ಚಿಸಲು ಜನ ನಮ್ಮನ್ನು ಆಯ್ಕೆ ಮಾಡುತ್ತಿದ್ದಾರೆ. ಅಧಿವೇನಗಳಿಗೆ ಸಂಬಂಧಿಸಿದಂತೆ ಒಂದು ಕಾನೂನನ್ನು ನಾವೇ ಮಾಡಿಕೊಂಡಿದ್ದೇವೆ. ಅದರಂತೆ ವಿಧಾನಸಭೆ ಅಧಿವೇಶನ ವರ್ಷದಲ್ಲಿ ಕನಿಷ್ಠ 60 ದಿನಗಳಾದರೂ ನಡೆಯಬೇಕು. ಆದರೆ ಪ್ರಸಕ್ತ ಈ ಕಾನೂನಿಗೂ ಗೌರವವಿಲ್ಲದಂತಾಗಿದೆ ಎಂದ ಅವರು, ಪ್ರಧಾನಿ ಮೋದಿ ಅವರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ, ಅಮಿತ್ ಶಾನಿಗಂತೂ ಇಲ್ಲವೇ ಇಲ್ಲ. ಪ್ಯಾಸಿಸ್ಟ್ ಶಕ್ತಿಗಳಾಗಿರುವ ಆರೆಸ್ಸೆಸ್‍ನವರಿಗಂತೂ ಈ ನಂಬಿಕೆ ಇರಲೂ ಸಾಧ್ಯವೇ ಇಲ್ಲ. ಇದರಿಂದಾಗಿ ಬಿಜೆಪಿಯವರು ಸರ್ವಾಧಿಕಾರಿಗಳಂತೆ ಅಧಿಕಾರ ನಡೆಸುತ್ತಿದ್ದಾರೆಂದು ಸಿದ್ದರಾಮಯ್ಯ ಆರೋಪಿಸಿದರು.

ವರ್ಷದ ಬಜೆಟ್ ಗಾತ್ರ 2,43,153 ಕೋ. ರೂ. ಆಗಿದೆ. ಇದು ಜನರ ತೆರಿಗೆ ಹಣವಾಗಿದೆ. ಇದನ್ನು ಮನಬಂದಂತೆ ಖರ್ಚು ಮಾಡುವಂತಿಲ್ಲ. ತೆರಿಗೆ ಹಣವನ್ನು ಸಮರ್ಪಕವಾಗಿ ಜನರ ಕಲ್ಯಾಣಕ್ಕೇ ಬಳಸಬೇಕು. ಬಡವರು, ಕಾರ್ಮಿಕರು, ಮಹಿಳೆಯರು, ಶೋಷಿತರು, ರೈತ ಸಮುದಾಯಗಳಿಗೆ ಸಾಮಾಜಿಕ, ಆರ್ಥಿಕ ನ್ಯಾಯ ನೀಡಲು ಈ ಹಣವನ್ನು ಖರ್ಚು ಮಾಡಬೇಕಿದೆ. ಇದು ಸರಕಾರದ ಆದ್ಯತೆಯಾಗಿದೆ.

-ಸಿದ್ದರಾಮಯ್ಯ, ಮಾಜಿ ಸಿಎಂ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News