ವಿದೇಶಿ ಹಾಲು ಆಮದು ಮಾಡಿಕೊಳ್ಳುವ ಕೇಂದ್ರದ ನಿರ್ಧಾರಕ್ಕೆ ಖಂಡನೆ

Update: 2019-10-14 14:16 GMT

ಬೆಂಗಳೂರು, ಅ.14: ಕೇಂದ್ರ ಸರಕಾರವು ವಿದೇಶಿ ಹಾಲನ್ನು ಆಮದು ಮಾಡಿಕೊಳ್ಳುವ ಆಲೋಚನೆಯಲ್ಲಿದ್ದು, ಹೈನೋದ್ಯಮದಲ್ಲಿ ದೈತ್ಯ ರಾಷ್ಟ್ರಗಳೆನಿಸಿರುವ ನ್ಯೂಝಿಲ್ಯಾಂಡ್ ಮತ್ತು ಆಸ್ಟ್ರೇಲಿಯದ ಹಾಲು ಮತ್ತು ಅದರ ಉತ್ಪನ್ನಗಳು ಭಾರತಕ್ಕೆ ಪ್ರವೇಶಿಸಿದ್ದೇ ಆದರೆ, ರಾಷ್ಟ್ರದ 10 ಕೋಟಿಗೂ ಹೆಚ್ಚು ಹೈನೋದ್ಯಮಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಲಿದ್ದು, ದೇಶದ ಆರ್ಥಿಕ ಪರಿಸ್ಥಿತಿಯ ಮೇಲೆ ಶೇ.25ರಷ್ಟು ಪರಿಣಾಮ ಬೀರಲಿದೆ ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಜಿಲ್ಲಾಧ್ಯಕ್ಷ ಬಿ.ಸಿ.ಯೋಗೀಶ್‌ಗೌಡ ಆತಂಕ ವ್ಯಕ್ತಪಡಿಸಿದ್ದಾರೆ.

ದೇಶದ ಹೈನೋದ್ಯಮಕ್ಕೆ ಹೊಸ ಕ್ರಾಂತಿ ಬರೆದ ಡಾ.ಕುರಿಯನ್‌ರ ದೂರದೃಷ್ಟಿಯಿಂದಾಗಿ ಕೋಟ್ಯಂತರ ಕುಟುಂಬಗಳು ತಮ್ಮ ಜೀವನೋಪಾಯ ಕಂಡುಕೊಂಡಿವೆ. ಮುಕ್ತ ವ್ಯಾಪಾರ ಒಪ್ಪಂದದ ವ್ಯಾಪ್ತಿಗೆ ಹೈನೋತ್ಪನ್ನ ಸೇರಿದತೆ ಸುಂಕ ವಿನಾಯಿತಿ ಲಾಭ ಪಡೆದು ಭಾರತದಲ್ಲಿ ಆಸ್ಟ್ರೇಲಿಯ, ನ್ಯೂಝಿಲ್ಯಾಂಡ್ ಹಾಲಿನ ಮಾರಾಟಕ್ಕೆ ಅವಕಾಶ ಸಿಗಲಿದೆ ಎಂದು ಅವರು ತಿಳಿಸಿದ್ದಾರೆ.

ಇದರಿಂದ ರಾಷ್ಟ್ರದ ಹೈನೋದ್ಯಮಿಗಳು ವಿದೇಶಿ ಹಾಲಿನ ಮುಂದೆ ಸ್ಪರ್ಧೆ ಮಾಡಲಾಗದೆ ಮುಂದೊಂದು ದಿನ ಉದ್ಯಮವನ್ನೇ ತ್ಯಜಿಸಲಿದ್ದು, ಮುಂದಿನ ಕೆಲ ವರ್ಷಗಳಲ್ಲಿ ವಿದೇಶಿ ಹಾಲು ಮತ್ತು ಅದರ ಉತ್ಪನ್ನಗಳಿಗೆ ಅನಿವಾರ್ಯವಾಗಿ ರಾಷ್ಟ್ರ ಕೈಯೊಡ್ಡುವ ಪರಿಸ್ಥಿತಿ ಬಂದರೂ ಅಚ್ಚರಿಯಿಲ್ಲ ಎಂದು ಯೋಗೀಶ್‌ ಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಬೇರೆ ರಾಷ್ಟ್ರಗಳಿಂದ ಹಾಲು ಬರಕೂಡದೆಂದು ಕೂಗಿ ಹೇಳಲು ವೇದಿಕೆಯ ರಾಜ್ಯಾಧ್ಯಕ್ಷ ರಮೇಶ್ ಗೌಡ ನೇತೃತ್ವದಲ್ಲಿ ಚನ್ನಪಟ್ಟಣ ಕಾವೇರಿ ವೃತ್ತದಲ್ಲಿ ಅ.15ರಂದು ಬೆಳಗ್ಗೆ 11 ಗಂಟೆಗೆ ಉಚಿತ ಹಾಲು ವಿತರಿಸಿ ಪ್ರತಿಭಟನೆಯನ್ನು ಮಾಡಲಾಗುತ್ತಿದೆ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News