ಕಲಬುರಗಿ: ಶ್ರೀರಾಮಸೇನೆ, ಎಬಿವಿಪಿ ವಿರೋಧದ ನಡುವೆಯೂ ಕನ್ಹಯ್ಯ ಕುಮಾರ್ ಉಪನ್ಯಾಸಕ್ಕೆ ಅನುಮತಿ

Update: 2019-10-14 14:18 GMT

ಕಲಬುರಗಿ, ಅ.14: ಗುಲಬರ್ಗಾ ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಸಂಸ್ಥೆಯಲ್ಲಿ ನಾಳೆ(ಅ.15) ನಡೆಯಲಿರುವ ಸಮಾರಂಭದಲ್ಲಿ ಜೆಎನ್‌ಯು ವಿದ್ಯಾರ್ಥಿ ಸಂಘದ ಮಾಜಿ ನಾಯಕ ಕನ್ಹಯ್ಯ ಕುಮಾರ್‌ಗೆ ಉಪನ್ಯಾಸ ನೀಡಲು ಸಿಂಡಿಕೇಟ್ ಅನುಮತಿ ನೀಡಿದೆ.

ವಿಶ್ವವಿದ್ಯಾಲಯದಲ್ಲಿ ಕನ್ಹಯ್ಯ ಕುಮಾರ್‌ಗೆ ಭಾಷಣ ಮಾಡಲು ಅನುಮತಿ ನೀಡಬಾರದು ಎಂದು ಸ್ಥಳೀಯ ಪ್ರಭಾವಿ ಸಂಸದರೊಬ್ಬರು ಹಾಗೂ ಶ್ರೀರಾಮಸೇನೆ, ಎಬಿವಿಪಿ ಸೇರಿದಂತೆ ಮತ್ತಿತರೆ ಸಂಘಟನೆಗಳು ಒತ್ತಡ ಹೇರಿದ್ದರು. ಅಲ್ಲದೆ, ಕನ್ಹಯ್ಯಗೆ ಆಹ್ವಾನ ನೀಡಿದ್ದನ್ನು ಹಿಂಪಡೆಯಬೇಕು ಎಂದೂ ಒತ್ತಾಯಿಸಿದ್ದರು.

ಈ ಸಂಬಂಧ ಸೋಮವಾರ ವಿವಿಯಲ್ಲಿ ನಡೆಯ ಸಿಂಡಿಕೇಟ್ ಸಭೆಯಲ್ಲಿ ಚರ್ಚೆ ನಡೆದಿದ್ದು, ಕನ್ಹಯ್ಯ ಕುಮಾರ್‌ಗೆ ವಿಶ್ವವಿದ್ಯಾಲಯದ ಅಂಬೇಡ್ಕರ್ ಅಧ್ಯಯನ ವಿಭಾಗವೇ ಆಹ್ವಾನಿಸಿದೆ. ಈ ಸಂಬಂಧ ಆಹ್ವಾನ ಪುಸ್ತಕ ಮುದ್ರಣವಾಗಿದೆ. ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಈ ಹಂತದಲ್ಲಿ ಪ್ರಭಾವಿ ಮುಖಂಡರ ಮಾತು ಕೇಳಿ ಕಾರ್ಯಕ್ರಮಕ್ಕೆ ಅಡ್ಡಿ ಮಾಡುತ್ತಿರುವುದು ಸರಿಯಲ್ಲ ಎಂಬ ಮಾತುಗಳು ಕೇಳಿಬಂದಿದ್ದವು.

ಇದರ ನಡುವೆ ಕನ್ಹಯ್ಯ ಕುಮಾರ್‌ಗೆ ಅನುಮತಿ ನಿರಾಕರಣೆ ಮಾಡಬಾರದು ಎಂದು ವಿದ್ಯಾರ್ಥಿಗಳು ವಿವಿಯಲ್ಲಿ ಪ್ರತಿಭಟನೆ ನಡೆಸಿದರು. ಸಭೆ ಬಳಿಕ ಪ್ರತಿಭಟನಾಕಾರರ ಬಳಿಗೆ ಆಗಮಿಸಿದ ಹಂಗಾಮಿ ಕುಲಪತಿ ಪ್ರೊ,ಪರಿಮಳಾ ಅಂಬೇಕರ್ ಅನುಮತಿ ನೀಡಲಾಗಿದೆ ಎಂದು ಪ್ರಕಟಿಸಿದರು.

ವಿವಿಯ ವಿದ್ಯಾರ್ಥಿಗಳು ಕಾರ್ಯಕ್ರಮ ಸಂಘಟಿಸಿದ ಮೇಲೆ ಅದನ್ನು ನಡೆಸಲೇಬೇಕು ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದರು. ಇದೀಗ ಸಿಂಡಿಕೇಟ್ ಸಭೆಯ ತೀರ್ಮಾನದಂತೆ ಕನ್ಹಯ್ಯ ಕುಮಾರ್ ವಿವಿಯಲ್ಲಿ ಉಪನ್ಯಾಸ ನೀಡುವುದು ಖಚಿತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News