'ಹುಣಸೂರು ಪ್ರತ್ಯೇಕ ಜಿಲ್ಲೆ' ಘೋಷಿಸಲು ಅನರ್ಹ ಶಾಸಕ ಎಚ್.ವಿಶ್ವನಾಥ್ ಆಗ್ರಹ

Update: 2019-10-14 14:42 GMT

ಬೆಂಗಳೂರು, ಅ. 14: ಮೈಸೂರು ಜಿಲ್ಲೆಯನ್ನು ವಿಭಜನೆ ಮಾಡಿ ಹುಣಸೂರು ತಾಲೂಕನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕು. ಅಲ್ಲದೆ, ಮಾಜಿ ಸಿಎಂ ದೇವರಾಜ ಅರಸು ಅವರ ಹೆಸರನ್ನು ನೂತನ ಜಿಲ್ಲೆಗೆ ನಾಮಕರಣ ಮಾಡಬೇಕು ಎಂದು ಅನರ್ಹ ಶಾಸಕ ಎಚ್.ವಿಶ್ವನಾಥ್ ಆಗ್ರಹಿಸಿದ್ದಾರೆ.

ಸೋಮವಾರ ಇಲ್ಲಿನ ಡಾಲರ್ಸ್‌ ಕಾಲನಿಯಲ್ಲಿರುವ ಧವಳಗಿರಿಯ ನಿವಾಸದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಮೈಸೂರು ಜಿಲ್ಲೆಗೆ ಸೇರಿರುವ ಹಳೆಯ ನಾಲ್ಕು ತಾಲೂಕು ಹಾಗೂ ಕುಮಾರಸ್ವಾಮಿ ಅವಧಿಯಲ್ಲಿ ಘೋಷಣೆಯಾದ ಎರಡು ತಾಲೂಕು ಸೇರಿಸಿ ಹೊಸ ಜಿಲ್ಲೆ ಮಾಡಬೇಕು ಎಂದು ಕೋರಿದರು.

ಹುಣಸೂರು ನೂತನ ಜಿಲ್ಲೆ ರಚನೆ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪಗೆ ಪ್ರಸ್ತಾವ ಸಲ್ಲಿಸಲಾಗಿದೆ. ಶೀಘ್ರದಲ್ಲೆ ಆರು ತಾಲೂಕುಗಳ ಜನಪ್ರತಿನಿಧಿಗಳ ಸಭೆ ಕರೆದು ಸಭೆ ನಡೆಸಿ ಈ ಸಂಬಂಧ ತೀರ್ಮಾನ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ವಿಶ್ವನಾಥ್ ಇದೇ ವೇಳೆ ಸ್ಪಷ್ಟನೆ ನೀಡಿದರು.

17 ಮಂದಿ ಶಾಸಕರ ಅನರ್ಹತೆ ಸಂಬಂಧ ಅಕ್ಟೋಬರ್ 22ಕ್ಕೆ ಸುಪ್ರೀಂ ಕೋರ್ಟ್ ತೀರ್ಪು ಹೊರಬೀಳುವ ನಿರೀಕ್ಷೆ ಇದೆ. ಆ ಬಳಿಕ ಉಪಚುನಾವಣೆ ಸಂಬಂಧ ತೀರ್ಮಾನ ಮಾಡಲಾಗುವುದು. ಅಲ್ಲಿಯ ವರೆಗೂ ಈ ಬಗ್ಗೆ ಏನೂ ಹೇಳುವುದಿಲ್ಲ ಎಂದು ವಿಶ್ವನಾಥ್ ಪ್ರತಿಕ್ರಿಯಿಸಿದರು.

ಆದಾಯ ತೆರಿಗೆ ಇಲಾಖೆ ದಾಳಿಗೆ ಸಂಬಂಧಿಸಿದಂತೆ ಈಗಾಗಲೇ ಡಾ.ಜಿ. ಪರಮೇಶ್ವರ್ ಸ್ಪಷ್ಟನೆ ನೀಡಿದ್ದು, ದಾಳಿಯನ್ನು ರಾಜಕೀಯಕರಣಗೊಳಿಸಬಾರದು ಎಂದು ಹೇಳಿದ್ದಾರೆ. ಹೀಗಾಗಿ ದಾಳಿ ರಾಜಕೀಯ ಪ್ರೇರಿತ ಎಂದು ಹೇಳುವುದು ಸಲ್ಲ ಎಂದು ವಿಶ್ವನಾಥ್ ಆಕ್ಷೇಪಿಸಿದರು.

ತಿಪಟೂರು ಜಿಲ್ಲೆ ರಚನೆಗೆ ಒತ್ತಾಯ

‘ದೇವರಾಜ ಅರಸು ಅಗ್ರಗಣ್ಯ ನಾಯಕ, ಪ್ರಾದೇಶಿಕ ಎಲ್ಲೆ ಮೀರಿ ಬೆಳೆದವರು. ಅವರನ್ನು ಚುನಾವಣೆಗಾಗಿ ಹುಣಸೂರಿಗೆ ಸೀಮಿತ ಮಾಡುವುದು ಬೇಡ. ಅವರ ಹೆಸರಿನಲ್ಲಿ ರಾಜ್ಯದ ವಿಶ್ವ ವಿದ್ಯಾಲಯಗಳಲ್ಲಿ ಅಧ್ಯಯನ ಪೀಠ ಪ್ರಾರಂಭಿಸಿ. ಆಡಳಿತ ಕಾರಣಕ್ಕಾಗಿ ಸಣ್ಣ-ಸಣ್ಣ ಜಿಲ್ಲೆಗಳ ರಚನೆ ಆಗಬೇಕು. ತುಮಕೂರು ಜಿಲ್ಲೆ ತಿಪಟೂರು ಇದರಲ್ಲಿ ಒಂದು. ಸರಕಾರ ಸಣ್ಣ ಜಿಲ್ಲೆ ಮಾಡಲಿ’

-ರಮೇಶ್ ಬಾಬು, ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News