ರಾಜ್ಯದ 642 ಪ್ರೌಢಶಾಲೆಗಳಲ್ಲಿ ಗಣಿತ ಶಿಕ್ಷಕರೇ ಇಲ್ಲ !

Update: 2019-10-14 14:56 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಅ.14: ಭಾರತೀಯ ಮಹಾಲೇಖಪಾಲರ ವರದಿ(ಸಿಎಜಿ)ಯಲ್ಲಿ ರಾಜ್ಯದಲ್ಲಿನ 642 ಪ್ರೌಢ ಶಾಲೆಗಳಲ್ಲಿ ಗಣಿತ ಶಿಕ್ಷಕರೇ ಇಲ್ಲದಿರುವುದು ಸೇರಿದಂತೆ ಶಿಕ್ಷಕರ ಕೊರತೆ ಇರುವುದನ್ನು ಗುರುತಿಸಿದೆ.

ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಸಮಿತಿ(ಆರ್‌ಎಂಎಸ್‌ಎ) ಕಾರ್ಯ ನಿರ್ವಹಣೆ, ಲಭ್ಯವಿರುವ ಹಣದ ಬಳಕೆಯಲ್ಲಿ ತೀವ್ರ ವೈಫಲ್ಯವನ್ನು ಗುರುತಿಸಿರುವ ವರದಿಯು, ಶೈಕ್ಷಣಿಕ ಗುಣಮಟ್ಟಕ್ಕೆ ಶಿಕ್ಷಕರ ಪಾತ್ರ ಮುಖ್ಯ ಎಂದು ಹೇಳಿದೆ.

ಪ್ರತಿಯೊಂದು ತರಗತಿಯಲ್ಲಿಯೂ 40 ವಿದ್ಯಾರ್ಥಿಗಳು ಇರಬೇಕು ಎಂಬ ನಿಯಮವಿದೆ. ಆದರೆ, 2,721 ಶಾಲೆಗಳಲ್ಲಿ ಅನುಪಾತ 1:41 ರಿಂದ 1:61 ವರೆಗೂ ಇದೆ. ಅದರ ಜತೆಗೆ 30 ವಿದ್ಯಾರ್ಥಿಗಳಿಗೆ ಒಬ್ಬರು ಶಿಕ್ಷಕರಿರಬೇಕು(ಪಿಟಿಆರ್) ಎಂಬ ನಿಯಮವಿದೆ. ಆದರೆ, 874 ಶಾಲೆಗಳಲ್ಲಿ ಪಿಟಿಆರ್ 1:30ಕ್ಕಿಂತ ಹೆಚ್ಚಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

2018 ಮಾರ್ಚ್‌ಗೆ ಅಂತ್ಯಗೊಂಡ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಗೆ ಸಂಬಂಧಿಸಿದ ವರದಿಯಲ್ಲಿ ಅಂಕಿ ಅಂಶಗಳನ್ನು ಗುರುತಿಸಿದ್ದು, ಲಭ್ಯವಿದ್ದ ಹಣ ಬಳಕೆ ಶೇ.30 ರಿಂದ ಶೇ.55 ರಷ್ಟು ಆಗಿದೆ. ಹೀಗಾಗಿ, ಕಂಪ್ಯೂಟರ್ ಶಿಕ್ಷಣ, ಪ್ರಯೋಗಾಶಾಲಾ ವಸ್ತುಗಳ ಹಾಗೂ ಪೀಠೋಪಕರಣಗಳ ಖರೀದಿಯಲ್ಲಿಯೂ ನಿರ್ಲಕ್ಷ್ಯ ಮಾಡಲಾಗಿದೆ. ಅಲ್ಲದೆ, ಸುಮಾರು 516 ಶಾಲೆಗಳಲ್ಲಿ ಬಾಲಕ-ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ ನಿರ್ಮಾಣ ಕಾರ್ಯ ಆರಂಭವಾಗಿಲ್ಲ ಎಂಬ ಅಂಶಗಳನ್ನು ತಿಳಿಸಿದೆ.

ಕಲಿಕೆಯನ್ನು ಅರ್ಥಪೂರ್ಣವಾಗಿಸಲು ಮಕ್ಕಳಲ್ಲಿ ವಿಜ್ಞಾನ, ಗಣಿತದಲ್ಲಿ ಆಸಕ್ತಿ ಮೂಡಿಸಲು ರಾಷ್ಟ್ರೀಯ ಆವಿಷ್ಕಾರ ಅಭಿಯಾನದ ಅಡಿಯಲ್ಲಿ 2016-18 ರ ನಡುವೆ ಸುಮಾರು 2.39 ಕೋಟಿ ಮೌಲ್ಯದ ವಿಜ್ಞಾನ, ಗಣಿತ ಕಿಟ್‌ಗಳನ್ನು ಖರೀದಿ ಮಾಡಬೇಕಿತ್ತು. ಆದರೆ, ಖರೀದಿ ಮಾಡಿಲ್ಲ ಎಂದು ಸಿಎಜಿ ವರದಿಯಲ್ಲಿ ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News