ಶೋಭಾಯಾತ್ರೆಯಲ್ಲಿ ಸರಕಾರ, ಸಚಿವ ರವಿ ವಿರುದ್ಧದ ಪ್ರತಿಭಟನೆ ಹಾಸ್ಯಾಸ್ಪದ: ಬಿಜೆಪಿ ವಕ್ತಾರ ವರಸಿದ್ಧಿ ವೇಣುಗೋಪಾಲ್

Update: 2019-10-14 15:45 GMT
ಸಾಂದರ್ಭಿಕ ಚಿತ್ರ

ಚಿಕ್ಕಮಗಳೂರು, ಅ.14: ಶ್ರೀರಾಮ ಸೇನೆಯ ದತ್ತ ಮಾಲಾ ಅಭಿಯಾನ ಸಂದರ್ಭ ರವಿವಾರ ಕಪ್ಪು ಬಟ್ಟೆ ಧರಿಸಿ ಸರಕಾರದ ವಿರುದ್ಧ ಪ್ರತಿಭಟನೆ ಮಾಡಿರುವುದು ಹಾಸ್ಯಾಸ್ಪದ ಎಂದು ಜಿಲ್ಲಾ ಬಿಜೆಪಿ ವಕ್ತಾರ ವರಸಿದ್ಧಿ ವೇಣುಗೋಪಾಲ್ ಪತ್ರಿಕಾ ಹೇಳಿಕೆಯಲ್ಲಿ ಟೀಕಿಸಿದ್ದಾರೆ. 

ಶ್ರೀ ರಾಮಸೇನೆಯ ದತ್ತ ಮಾಲಾ ಅಭಿಯಾನ ಅಂಗವಾಗಿ ನಡೆದ ಶೋಭಯಾತ್ರೆಯಲ್ಲಿ ಕಲ್ಲಿನ ವಿಗ್ರಹವನ್ನು ಮೆರವಣಿಗೆಯಲ್ಲಿ ಬಳಕೆ ಮಾಡುತ್ತೇವೆ ಎಂದು ಶ್ರೀ ರಾಮಸೇನೆ ಈ ಹಿಂದೆ ಹೇಳಿಕೆ ನೀಡಿತ್ತು. ಆದರೆ ಇದಕ್ಕೆ ಶ್ರೀರಾಮಸೇನೆ ಸಂಘಟನೆಯು ಜಿಲ್ಲಾಡಳಿತದಿಂದ ಪೂರ್ವ ಅನುಮತಿಯನ್ನು ಕೇಳಿರಲಿಲ್ಲ. ವಿಗ್ರಹವನ್ನು ನಗರಕ್ಕೆ ತಂದ ನಂತರ ಪೊಲೀಸ್ ಇಲಾಖೆ ಮಾಹಿತಿ ಪಡೆದು ವಿಗ್ರಹಕ್ಕೆ ರಕ್ಷಣೆ ನೀಡಿದೆ. ಮೆರವಣಿಗೆಯಲ್ಲಿ ಪಂಚಲೋಹ ವಿಗ್ರಹವನ್ನು ಬಳಸಬಹುದಾಗಿತ್ತು. ಆದರೆ, ಇವರು ಕಲ್ಲಿನ ವಿಗ್ರಹ ಬಳಸಿರುವುದು ಹೊಸ ಆಚಾರಣೆಯಾಗಿರುತ್ತದೆ. ಈ ವಿವಾದ ನ್ಯಾಯಲಯದಲ್ಲಿರುವುದರಿಂದ ಕಾನೂನು ಉಲ್ಲಂಘನೆಯಾಗುತ್ತದೆ ಎಂಬ ಉದ್ದೇಶದಿಂದ ಅನುಮತಿಯನ್ನು ಜಿಲ್ಲಾಡಳಿತ ನಿರಾಕರಿಸಿದೆ ಎಂದು ತಿಳಿಸಿರುವ ಅವರು, ಜಿಲ್ಲಾಡಳಿತ ಕಾನೂನು ಪಾಲನೆ ಮಾಡಿರುವುದನ್ನೇ ಸೇನೆಯ ಮುಖಂಡರು ಅಪಾರ್ಥ ಮಾಡಿಕೊಂಡು ರಾಜ್ಯ ಸರಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿಟಿ ರವಿ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ಮಾಡಿರುವುದು ಹಾಸ್ಯಾಸ್ಪದ ಎಂದು ಅವರು ಟೀಕಿಸಿದ್ದಾರೆ.

ದತ್ತ ಪೀಠ ಹೋರಾಟಕ್ಕೆ ದಾರಿಯನ್ನು ತೋರಿಸಿದವರು ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ಎಂಬುದನ್ನು ಮುತಾಲಿಕ್‍ ಮರೆಯಬಾರದು. ಶ್ರೀ ರಾಮಸೇನೆಯ ವಿಗ್ರಹವನ್ನು ಶೋಭಾಯಾತ್ರೆಯಲ್ಲಿ ಕೊಂಡೊಯ್ಯಲು ಮೊದಲೇ ಜಿಲ್ಲಾಡಳಿತಕ್ಕೆ ಅಥವಾ ಸರಕಾರಕ್ಕೆ ಮನವಿ ಸಲ್ಲಿಸಿದ್ದಿದ್ದರೆ ಅನುಮತಿ ನೀಡುತ್ತಿದ್ದರು. ಆದರೆ ಮುಖಂಡರು ಶೋಭಾಯಾತ್ರೆಯ ಹಿಂದಿನ ದಿನ ಅನುಮತಿ ಕೇಳಿರುವುದು ಅನುಮತಿ ನೀಡದಿರಲು ಕಾರಣವಾಗಿರಬಹುದೆಂದು ಅವರು ತಿಳಿಸಿದ್ದಾರೆ.

ದತ್ತ ಪೀಠ ಸಂಬಂಧ ಸಚಿವ ಸಿ.ಟಿ.ರವಿ ಅವರು ವಿಶ್ವ ಹಿಂದೂ ಪರಿಷತ್, ಬಜರಂಗದಳ ನೇತೃತ್ವದಲ್ಲಿ ನ್ಯಾಯಾಂಗ ಹೋರಾಟ ಮಾಡುತ್ತಿದ್ದಾರೆ. ಕಳೆದ 20 ವರ್ಷದಿಂದ ರಾಜ್ಯದ ಉಚ್ಚ ಮತ್ತು ದೇಶದ ಸರ್ವೋಚ್ಛ ನ್ಯಾಯಾಲಯದಲ್ಲಿ ಹೋರಾಟ ಮಾಡುತ್ತಿರುವವರೂ ರವಿಯೇ ಹೊರತು ಪ್ರಮೋದ್ ಮುತಾಲಿಕ್ ಅಲ್ಲ ಎಂದು ಹೇಳಿಕೆಯಲ್ಲಿ ತಿರುಗೇಟು ನೀಡಿರುವ ಅವರು, ದತ್ತಾತ್ರೇಯರವರನ್ನು ಮರೆತು ವರ್ಷಕ್ಕೊಮ್ಮೆ ದತ್ತಮಾಲೆ ಧರಿಸಿ ದತ್ತಪೀಠಕ್ಕೆ ಬಂದು ಹೋದರೆ ಸಮಸ್ಯೆ ಬಗೆಹರಿಯುವುದಿಲ್ಲ. ಮುತಾಲಿಕ್ ಎಷ್ಟು ಬಾರಿ ದತ್ತಪೀಠಕ್ಕಾಗಿ ನ್ಯಾಯಾಲಯದಲ್ಲಿ ಹೋರಾಟ ಮಾಡಿದ್ದಾರೆಂದು ಅವರು ಪ್ರಶ್ನಿಸಿದ್ದಾರೆ.

ಮುತಾಲಿಕ್‍ರವರು ಈ ಹಿಂದೆ ಬಜರಂಗದಳ, ವಿಶ್ವ ಹಿಂದೂ ಪರಿಷತ್‍ನಲ್ಲಿ ನಾನಾ ಜವಾಬ್ದಾರಿಯನ್ನು ಹೊತ್ತು ಸಂಘಟನೆಯಲ್ಲಿ ಪಾಲ್ಗೊಂಡಿದ್ದಾರೆ. ಅವರು ಶ್ರೀ ರಾಮಸೇನೆ ಸ್ಥಾಪನೆ ಮಾಡಿದಾಗ ವಿಶ್ವ ಹಿಂದೂ ಪರಿಷತ್, ಭಜರಂಗದಳ, ಶ್ರೀ ರಾಮಸೇನೆಯ ವಿಚಾರಧಾರೆ ಒಂದೇ ಎಂದು ನಾವು ಭಾವಿಸಿದ್ದೆವು. ಆದರೆ, ಮುತಾಲಿಕ್‍ರವರು ಇತ್ತೀಚೆಗೆ ವಿಚಾರಧಾರೆಯಿಂದ ದೂರ ಸರಿಯುತ್ತಿರುವುದು ಆಶ್ಚರ್ಯವಾಗುತ್ತಿದೆ. ಬಿಜೆಪಿ ಸರಕಾರ ಹಾಗೂ ಸಚಿವರು, ಶಾಸಕರು ದತ್ತಪೀಠದ ವಿಚಾರದಲ್ಲಿ ಎಂದಿಗೂ ಹಿಂದಕ್ಕೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News