ಮಂಡ್ಯ ಜಿಲ್ಲೆಯ ರೈಲು ನಿಲ್ದಾಣಗಳ ಅಭಿವೃದ್ಧಿಗೆ ಸಂಸದೆ ಸುಮಲತಾ ಒತ್ತಾಯ

Update: 2019-10-14 16:48 GMT

ಮಂಡ್ಯ, ಅ.14: ಮಂಡ್ಯ, ಮದ್ದೂರು, ಶ್ರೀರಂಗಪಟ್ಟಣ ಮತ್ತು ಪಾಂಡವಪುರ ರೈಲು ನಿಲ್ದಾಣಗಳನ್ನು ಮೇಲ್ದರ್ಜೇಗೇರಿಸುವಂತೆ ಬೆಂಗಳೂರಿನಲ್ಲಿ ಸೋಮವಾರ ನಡೆದ ರೈಲ್ವೆ ಸಲಹಾ ಸಮಿತಿ ಸಭೆಯಲ್ಲಿ ಸಂಸದೆ ಸುಮಲತಾ ಅಂಬರೀಷ್ ಒತ್ತಾಯಿಸಿದ್ದಾರೆ.

ಜಿಲ್ಲಾ ಕೇಂದ್ರ ಮಂಡ್ಯ ನಿಲ್ದಾಣ ಅಭಿವೃದ್ಧಿಪಡಿಸಿ ಎಕ್ಸಲೇಟರ್ ಕುಡಿಯುವ ನೀರಿನ ಸೌಲಭ್ಯ, ವೈಟಿಂಗ್ ರೂಂ, ಶೌಚಾಲಯ, ಇತರ ಸೌಕರ್ಯಗಳನ್ನು ಕಲ್ಪಿಸಬೇಕು. ಪ್ರವಾಸಿ ಕೇಂದ್ರ ಶ್ರೀರಂಗಪಟ್ಟಣ ನಿಲ್ದಾಣದಲ್ಲಿ ಹೆಚ್ಚು ರೈಲು ನಿಲುಗಡೆ ಮಾಡಬೇಕು ಎಂದರು.

ಮದ್ದೂರಿನ ತೋಟಗಾರಿಕೆ ಫಾರಂ ಬಳಿ ಉದ್ದೇಶಿತ ರೈಲ್ವೆ ನಿಲ್ದಾಣ ಕಾಮಗಾರಿ ಆರಂಭಿಸಬೇಕು. ಮೈಸೂರು-ಬೆಂಗಳೂರು ಮಾರ್ಗದಲ್ಲಿ ಮಹಿಳೆಯರಿಗೆ ವಿಶೇಷ ರೈಲು ಸೇವೆ ಅಥವಾ ಹೆಚ್ಚು ರೈಲು ಬೋಗಿ ಅಳವಡಿಸಬೇಕು. ಮೇಲ್ಸೇತುವೆ, ಕೆಳ ಸೇತುವೆಗಳ ಕಾಮಗಾರಿ ಕೈಗೆತ್ತಿಕೊಳ್ಳಬೇಕು ಎಂದು ಅವರು ತಾಕೀತು ಮಾಡಿದರು.

ಮಳವಳ್ಳಿ, ಕೊಳ್ಳೇಗಾಲ ಮಾರ್ಗವಾಗಿ ಹೆಜ್ಜಾಲದಿಂದ ಚಾಮರಾಜನಗರದವರೆಗಿನ 142 ಕಿ.ಮೀ. ಬ್ರಾಡ್‍ಗೇಜ್ ಹಳಿ ನಿರ್ಮಾಣ ಸಂಬಂಧ ರೈಲ್ವೆ ಅಧಿಕಾರಿಗಳು ಮುಖ್ಯಮಂತ್ರಿ ಮತ್ತು ಸಂಬಂಧಿಸಿದ ಅಧಿಕಾರಿಗಳಿಗೆ ಡಿಪಿಎಆರ್ ಮತ್ತು ಇತರೆ ದಾಖಲಾತಿ ನೀಡಿ ತುರ್ತು ಕಾಮಗಾರಿಗೆ ಚಾಲನೆ ನೀಡಬೇಕು ಎಂದು ಅವರು ಒತ್ತಾಯಿಸಿದರು.

ಪಾಲಹಳ್ಳಿ ಗ್ರಾಮ ಪಂಚಾಯತ್ ನ ಸಾರ್ವಜನಿಕರ ಮನವಿ ಪತ್ರದ ಬಗ್ಗೆ ಸಭೆಯಲ್ಲಿ ಚರ್ಚಿಸಿ ಹಾಲಹಳ್ಳಿ ರೈಲ್ವೆ ನಿಲ್ದಾಣದಲ್ಲಿ ಬೆಂಗಳೂರು ಚಾಮರಾಜನಗರ ಪ್ಯಾಸೆಂಜರ್ ರೈಲು ನಿಲುಗಡೆಗೆ ಕ್ರಮವಹಿಸಲಾಯಿತು ಎಂದು ಸಂಸದರ ಆಪ್ತ ಕಾರ್ಯದರ್ಶಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News