ಬೀಚ್‍ನಲ್ಲಿ ಪ್ರಧಾನಿ ಮೋದಿ ಸ್ವಚ್ಛತೆ: ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದು ಹೀಗೆ...

Update: 2019-10-14 16:57 GMT

ಪಾಂಡವಪುರ, ಅ.14: ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರ ಮೇಲೆ ಐಟಿ ದಾಳಿ ಮಾಡುವ ಮೂಲಕ ಕೇಂದ್ರದ ಬಿಜೆಪಿ ಸರ್ಕಾರ ಆಯ್ದ ವ್ಯಕ್ತಿಗಳ ಮೇಲೆ ದಾಳಿ ಮಾಡುತ್ತಿರುವುದು ಅನುಮಾನ ಮೂಡಿಸಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ತಾಲೂಕಿನ ಮಹದೇಶ್ವರಪುರ ಗ್ರಾಮದಲ್ಲಿ ಮಾತನಾಡಿದ ಅವರು, ಈ ದೇಶದ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರದ ಅಧೀನದಲ್ಲಿ ಐಟಿ, ಈಡಿ, ಸಿಬಿಐ ಇಲಾಖೆಗಳಿವೆ. ಅವರಿಗೆ ಬಂದ ಮಾಹಿತಿ ಹಾಗೂ ದಾಖಲೆಯ ಮೇಲೆ ಪರಿಶೀಲನೆ ಮಾಡುವುದು ಸಹಜ. ಆದರೆ ಕೆಲವು ಆಯ್ದ ವ್ಯಕ್ತಿಗಳ ಮಾಡಿ ಐಟಿ ದಾಳಿ ಮಾಡುತ್ತಿರುವುದು ನಿಜಕ್ಕೂ ಅನುಮಾನ ಮೂಡಿಸಿದೆ ಎಂದರು.

ಬಿಜೆಪಿಯವರು ವಿರೋಧಿಗಳನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಈ ರೀತಿ ಕೆಲಸ ಮಾಡುತ್ತಿದ್ದಾರೆ. ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರ ಆಪ್ತ ಸಹಾಯಕ ರಮೇಶ್ ಆತ್ಮಹತ್ಯೆ ಮಾಡಿಕೊಳ್ಳುವ ಅವಶ್ಯಕತೆ ಇರಲಿಲ್ಲ ಎಂದು ಹೇಳಿದರು.

ಕಾನೂನಿನಲ್ಲಿ ಕೆಲವು ತನಿಖೆ ನಡೆಯುವುದು ಸಾಮಾನ್ಯ. ಅದಕ್ಕೆ ರಮೇಶ್ ಯಾಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೋ ಗೊತ್ತಿಲ್ಲ. ಇದರಿಂದ ಕೆಲ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಆದರೆ ಅಂತಿಮವಾಗಿ ತನಿಖೆಯ ಸಂಪೂರ್ಣ ಮಾಹಿತಿ ನಂತರ ಸತ್ಯಾಂಶ ಹೊರಬರುತ್ತದೆ ಎಂದರು.

ಉಪಚುನಾವಣೆಗೆ ಜೆಡಿಎಸ್ ತಯಾರಿ: ಉಪ ಚುನಾವಣೆಗೆ ಎಷ್ಟು ಕ್ಷೇತ್ರದಲ್ಲಿ ಸ್ಪರ್ಧೆ ಮಾಡಬೇಕು ಎನ್ನುವ ಬಗ್ಗೆ ಇನ್ನೂ ತೀರ್ಮಾನಿಸಿಲ್ಲ. ಆದರೆ ಎಷ್ಟು ಕ್ಷೇತ್ರದಲ್ಲಿ ನಾವು ಬಲಿಷ್ಠ ಇದ್ದೇವೆ ಎಂಬುದನ್ನು ನೋಡುತ್ತಿದ್ದೇವೆ. ಎಷ್ಟರಲ್ಲಿ ನಾವು ಗೆಲ್ಲಬಹುದು ಅನ್ನೋದನ್ನು ಯೋಚಿಸಿದ್ದೇವೆ. ಅಭ್ಯರ್ಥಿಗಳನ್ನು ಹಾಕುವ ವಿಚಾರದಲ್ಲಿ ತಯಾರಿ ನಡೆಯುತ್ತಿದೆ ಎಂದು ತಿಳಿಸಿದರು.

ಬೀಚ್‍ನಲ್ಲಿ ಪ್ರಧಾನಿ ನರೇಂದ್ರ ಮೋದಿ ಕಸ ಎತ್ತಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಇದರಿಂದ ಜನರಲ್ಲಿ ಸ್ವಚ್ಛತೆಯ ಜಾಗೃತಿ ಆಗಬೇಕು. ಪ್ಲಾಸ್ಟಿಕ್‍ ಅನ್ನು ತಿರಸ್ಕರಿಸುವ ಮನೋಭಾವ ಬೆಳೆದರೆ ಸಮಾಜಕ್ಕೆ ಒಳ್ಳೆಯದು ಎಂದರು.

ಅಧಿಕಾರ ಮುಖ್ಯವಲ್ಲ: ನನಗೆ ಅಧಿಕಾರ ಮುಖ್ಯ ಅಲ್ಲ. ನಾನು ಎಷ್ಟು ದಿನ ಸಿಎಂ ಆಗಿದ್ದೆ ಎಂಬುದು ಮುಖ್ಯ ಅಲ್ಲ. ಜನರಿಗೆ ಸಹಾಯ ಮಾಡುವುದು ಅತಿ ಮುಖ್ಯ ಎಂದು ಹೇಳಿದರು.

ನಾನು ಸಿಎಂ ಆಗಿದ್ದ ಅವಧಿಯಲ್ಲಿ ಬೆಳಗಾವಿ ರೈತರ ಮೂರು ಲಕ್ಷ ಸಾಲ ಮನ್ನಾ ಮಾಡಿದೆ. ಆದರೆ ಅಲ್ಲಿನ ಜನ ಜೆಡಿಎಸ್‍ಗೆ ಮತ ಹಾಕಲ್ಲ ಅಂತ ನಾನು ಯೋಚನೆ ಮಾಡಲಿಲ್ಲ ಎಂದರು.

ಸುತ್ತೂರು ಶ್ರೀಗಳ ಫೋನ್ ಟ್ಯಾಪಿಂಗ್ ಮಾಡಿ ನಾನು ರಾಜಕೀಯ ಮಾಡೋಕ್ಕಾಗುತ್ತಾ ಎಂದು ಸುತ್ತೂರು ಶ್ರೀಗಳ ಎದುರೇ ಪ್ರಶ್ನಿಸಿದ ಕುಮಾರಸ್ವಾಮಿ, ಸುತ್ತೂರು ಶ್ರೀ ಹಾಗೂ ಆದಿಚುಂಚನಗಿರಿ ಶ್ರೀಗಳಾದ ನಿರ್ಮಲಾನಂದನಾಥ ಸ್ವಾಮೀಜಿಗಳ ಫೋನ್ ಟ್ಯಾಪಿಂಗ್ ಆಗಿಲ್ಲ. ಇದೆಲ್ಲವೂ ಬಿಜೆಪಿಯವರ ಕುತಂತ್ರವಷ್ಟೇ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News