ನನಗೆ ರಾಜಕಾರಣದ ಅವಶ್ಯಕತೆ ಇಲ್ಲ: ಕುಮಾರಸ್ವಾಮಿ

Update: 2019-10-14 17:01 GMT

ಪಾಂಡವಪುರ, ಅ.14: ಉತ್ತರ ಕರ್ನಾಟಕದ ನೆರೆ ಪೀಡಿತ ಪ್ರದೇಶಗಳ ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಿರ್ಲಕ್ಷ್ಯ ತಾಳಿದೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.

ತಾಲೂಕಿನ ಮಹದೇಶ್ವರಪುರ ಗ್ರಾಮದಲ್ಲಿ 2.5 ಕೋಟಿ ರೂ. ವೆಚ್ಚದಲ್ಲಿ ಜೀರ್ಣೋದ್ಧಾರಗೊಳಿಸಿರುವ ಸಪರಿವಾರ ಶ್ರೀ ಮಹದೇಶ್ವರ, ಗಣಪತಿ, ಸುಬ್ರಹ್ಮಣ್ಯ, ನಂದಿ ಮೂರ್ತಿಗಳನ್ನು ಸಾರ್ವಜನಿಕರಿಗೆ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಕೇಂದ್ರದ ಪರಿಹಾರದ ಬಗ್ಗೆ ನಾನು ಮಾತನಾಡುವುದಿಲ್ಲ. ನಾಡಿನ ಜನತೆ ಕಟ್ಟಿರುವ ತೆರಿಗೆ ಹಣದಲ್ಲಿ ಪರಿಹಾರ ನೀಡಬಹುದು. ಆದರೆ ರಾಜ್ಯ ಸರ್ಕಾರ ಮೀನಾಮೇಷ ಎಣಿಸುತ್ತಿದೆ ಎಂದರು.

ಯಾರೂ ಊಹೆ ಮಾಡದ ರೀತಿಯಲ್ಲಿ ಅನಾಹುತ ಸಂಭವಿಸಿದೆ. ಸಾವಿರಾರು ಕುಟುಂಬಗಳು ಬೀದಿಗೆ ಬಿದ್ದಿವೆ. ಲಕ್ಷಾಂತರ ಮಂದಿ ಬೀದಿ ಪಾಲಾಗಿದ್ದಾರೆ. ರೈತರ ಬೆಳೆ, ಕೃಷಿ ಭೂಮಿ ಸಂಪೂರ್ಣ ಹಾಳಾಗಿದೆ. ಇವರು ಚೇತರಿಸಿಕೊಳ್ಳಲು ಹಲವಾರು ವರ್ಷಗಳೇ ಬೇಕು. ಇವರ ಬಾಳು ಹಸನಾಗಲು ದೇವರ ಅನುಗ್ರಹ ಬೇಕಾಗಿದೆ ಎಂದರು.

ಚುಂಚನಗಿರಿ ಹಾಗೂ ಸುತ್ತೂರು ಕ್ಷೇತ್ರಗಳು ವಿದ್ಯಾದಾನ ಹಾಗೂ ಆರೋಗ್ಯಕ್ಕೆ ಹೆಚ್ಚಿನ ಒತ್ತು ಕೊಟ್ಟಿವೆ. ನಾನು ಮುಖ್ಯಮಂತ್ರಿಯಾಗಲು ಜಿಲ್ಲೆಯ ಜನತೆ ಆಶೀರ್ವಾದ ಮಾಡಿದ್ದರು. ಜತೆಗೆ 14 ತಿಂಗಳು ಮುಖ್ಯಮಂತ್ರಿಯಾಗಿದ್ದಾಗ ಶಕ್ತಿಮೀರಿ ಕೆಲಸ ಮಾಡಿದ್ದೇನೆ. ಕೇವಲ 14 ತಿಂಗಳಲ್ಲಿ ಲಕ್ಷಾಂತರ ರೈತ ಕುಟುಂಬಗಳ ಸಾಲ ಮನ್ನಾ ಮಾಡಿದ್ದೇನೆ. ಉತ್ತರ ಕರ್ನಾಟಕದ ನೆರೆ ಪೀಡಿತ ಪ್ರದೇಶಗಳಲ್ಲೂ ಸಾಲ ಮನ್ನಾ ಆಗಿದೆ. ಇದು ಜನತೆಗೆ ತಲುಪುವ ಕೆಲಸ ಆಗಲಿಲ್ಲ. ಜತೆಗೆ ಹೆಚ್ಚಿನ ಪ್ರಚಾರವೂ ಆಗಲಿಲ್ಲ ಎಂದು ಹೇಳಿದರು.

ನಾನು ಅಧಿಕಾರಕ್ಕೆ ಅಂಟಿಕೊಂಡಿರುವವನಲ್ಲ. ಅಧಿಕಾರದ ಆಸೆಯೂ ನನಗಿಲ್ಲ. ಜತೆಗೆ ನನಗೆ ರಾಜಕಾರಣದ ಅವಶ್ಯಕತೆಯೂ ಇಲ್ಲ. ಜನತೆಯ ಆಸೆಯಂತೆ ನಾನು ರಾಜಕಾರಣದಲ್ಲಿ ಮುಂದುವರೆಯುತ್ತಿದ್ದೇನೆ ಅಷ್ಟೆ ಎಂದ ಕುಮಾರಸ್ವಾಮಿ, ಮಂಡ್ಯ ಜಿಲ್ಲೆಯ ಇನ್ನೂರಕ್ಕೂ ಹೆಚ್ಚು ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಅಂತಹ ಕುಟುಂಬಗಳಿಗೆ ಸಾಂತ್ವಾನ ಹೇಳಿದ್ದೆ ಎಂದರು.

ಕೆ.ಆರ್.ಪೇಟೆ ಅನರ್ಹ ಶಾಸಕ ಕೆ.ಸಿ.ನಾರಾಯಣಗೌಡರು ಕ್ಷೇತ್ರಕ್ಕೆ ಅನುದಾನವೇ ಕೊಟ್ಟಿಲ್ಲ ಎಂದು ಆರೋಪಿಸಿದ್ದಾರೆ. ಅಲ್ಲಿಗೆ ನಾನು ಸಾವಿರ ಕೋಟಿ ರೂ. ಅನುದಾನ ಕೊಟ್ಟಿದ್ದೇನೆ. ಸರ್ಕಾರದ ಖಜಾನೆಯಲ್ಲಿ ಸಾಕಷ್ಟು ಹಣ ಇದೆ. ಅದನ್ನು ಖರ್ಚು ಮಾಡಲು ಹೇಳಿದ್ದೇನೆ ಎಂದು ಹೇಳಿದರು.

ಪಿಎಸ್‍ಎಸ್‍ಕೆ ದುಸ್ಥಿತಿಗೆ ರೈತಸಂಘ ಕಾರಣ: ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ (ಪಿಎಸ್‍ಎಸ್‍ಕೆ) ಇಂದಿನ ದುಸ್ಥಿತಿಗೆ ರೈತಸಂಘವೇ ಕಾರಣ ಎಂದು ಆರೋಪಿಸಿದ ಮಾಜಿ ಸಿಎಂ ಕುಮಾರಸ್ವಾಮಿ, ಕಾರ್ಖಾನೆಯಲ್ಲಿ ಆಡಳಿತ ನಡೆಸುತ್ತಿದ್ದ ರೈತಸಂಘದ ದೊಂಬರಾಟದಿಂದಲೇ ಕಾರ್ಖಾನೆ ದುಸ್ಥಿತಿಗೆ ಹೋಯಿತು ಎಂದರು.

ಜಿಲ್ಲೆಯ ಮೈಷುಗರ್ ಹಾಗೂ ಪಿಎಸ್‍ಎಸ್‍ಕೆ ಕಾರ್ಖಾನೆಗಳಿಗೆ ಚಾಲನೆ ನೀಡಲು ನಿರ್ಧರಿಸಿದ್ದೆ. ಆದರೆ ರಾಜಕೀಯ ಬದಲಾವಣೆಯಿಂದಾಗಿ ಅದು ಸಾಧ್ಯವಾಗಲಿಲ್ಲ. ಬಿಜೆಪಿ ಸರ್ಕಾರ ಕಾರ್ಖಾನೆಗಳನ್ನು ಚಾಲನೆ ಮಾಡಲು ಸೂಕ್ತ ಕ್ರಮ ವಹಿಸಬೇಕು. ಆ ಮೂಲಕ ಕಬ್ಬು ಬೆಳೆದಿರುವ ರೈತರ ನೆರವಿಗೆ ಸರ್ಕಾರ ಧಾವಿಸಬೇಕು ಎಂದು ಸಲಹೆ ನೀಡಿದರು.

ಸಾನಿಧ್ಯ ವಹಿಸಿದ್ದ ಸುತ್ತೂರು ಕ್ಷೇತ್ರದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಹಾಗೂ ಆದಿಚುಂಚನಗಿರಿಯ ಕೊಮ್ಮೇರಹಳ್ಳಿ ಶಾಖೆಯ ಶ್ರೀ ಪುರುಷೋತ್ತಮನಂದನಾಥ ಸ್ವಾಮೀಜಿ ಆಶೀರ್ವಚನ ನೀಡಿದರು. ಶಾಸಕ ಸಿ.ಎಸ್.ಪುಟ್ಟರಾಜು ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಶಾಸಕ ನಾಗೇಂದ್ರ, ಮಾಜಿ ಶಾಸಕ ಕೆ.ಕೆಂಪೇಗೌಡ, ಮಾಜಿ ಪ್ರಧಾನರಾದ ಇ.ಎಸ್.ಸೀತರಾಮಯ್ಯ, ಸಮಾಜ ಸೇವಕ ಬಿ.ರೇವಣ್ಣ, ತಾ.ಪಂ ಅಧ್ಯಕ್ಷೆ ಗಾಯತ್ರಿ ಕಾಂತರಾಜು, ಮಾಜಿ ಅಧ್ಯಕ್ಷರಾದ ರಾಧಮ್ಮ, ಪೂರ್ಣಿಮಾ, ಸದಸ್ಯೆ ನವೀನ ವೆಂಕಟೇಶ್, ಜಿ.ಪಂ ಸದಸ್ಯರಾದ ಸಿ.ಅಶೋಕ್, ಶಾಂತಲಾ, ಅನುಸೂಯ, ಮಾಜಿ ಸದಸ್ಯ ಎಚ್.ಮಂಜುನಾಥ್, ಮನ್‍ಮುಲ್ ನಿರ್ದೇಶಕ ಕೆ.ರಾಮಚಂದ್ರು, ಮಾಜಿ ಅಧ್ಯಕ್ಷ ಎಲ್.ಸಿ.ಮಂಜುನಾಥ್, ಬಿಜೆಪಿ ರೈತಮೋರ್ಚಾ ಜಿಲ್ಲಾಧ್ಯಕ್ಷ ಎಚ್.ಎನ್.ಮಂಜುನಾಥ್, ಶ್ರೀ ಮಹದೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಟ್ರಸ್ಟ್ ಅಧ್ಯಕ್ಷ ಜಗದೀಶ್, ಎಂ.ಆರ್.ದೇವರಾಜು, ಚಂದ್ರಶೇಖರ್, ಅನಂತು, ಕೃಷ್ಣ ಸೇರಿ ಅನೇಕರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News