ಪ್ರಾಕೃತಿಕ ವಿಕೋಪದ ಸಂದರ್ಭ ನೆರವು: ವಿದ್ಯಾರ್ಥಿಗಳ ಸೇವೆಯನ್ನು ಶ್ಲಾಘಿಸಿದ ಕೊಡಗು ಜಿಲ್ಲಾಡಳಿತ

Update: 2019-10-14 17:57 GMT

ಮಡಿಕೇರಿ, ಅ.14 : ಕೊಡಗಿನಲ್ಲಿ ಇತ್ತೀಚೆಗೆ ಸಂಭವಿಸಿದ ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ಅಗತ್ಯ ಸಹಕಾರ ನೀಡಿದ ಎನ್‍ಸಿಸಿ, ಎನ್‍ಎಸ್‍ಎಸ್, ಸ್ಕೌಟ್ಸ್, ಗೈಡ್ಸ್, ರೋವರ್ಸ್ ಮತ್ತು ರೇಂಜರ್ಸ್ ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಅಭಿನಂದಿಸಿತು.   

ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಮಾತನಾಡಿ ವಿದ್ಯಾರ್ಥಿಗಳ ಕಾರ್ಯವನ್ನು ಶ್ಲಾಘಿಸಿದರು. ಎನ್‍ಸಿಸಿ, ಎನ್‍ಎಸ್‍ಎಸ್, ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು, ಶಿಕ್ಷಕರು, ಎನ್‍ಜಿಒಗಳು, ಜನಪ್ರತಿನಿಧಿಗಳು, ಎನ್‍ಡಿಆರ್‍ಎಫ್, ಅಗ್ನಿಶಾಮಕ ದಳ, ಪೊಲೀಸ್ ಇಲಾಖೆ, ಗೃಹ ರಕ್ಷಕದಳ ಹೀಗೆ ಎಲ್ಲರೂ ಜಿಲ್ಲಾಡಳಿತದ ಜೊತೆ ಕೈಜೋಡಿಸಿ, ಸಂತ್ರಸ್ತರನ್ನು ರಕ್ಷಿಸುವಲ್ಲಿ ಸಹಕರಿಸಿರುವುದು ಹೆಮ್ಮೆಯ ವಿಚಾರವೆಂದರು. 

ಪರಿಹಾರ ಕೇಂದ್ರದಲ್ಲಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿ, ಎಲ್ಲರೂ ತಂಡೋಪಾದಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಸಂತ್ರಸ್ತರನ್ನು ಸ್ಥಳಾಂತರಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಲಾಗಿದೆ ಎಂದರು.

ಈ ಬಾರಿ ಮಳೆಯಾಗುವುದಿಲ್ಲ ಎಂದು ಹಲವರು ಹೇಳುತ್ತಿದ್ದರು. ಆದರೆ ಜಿಲ್ಲಾಡಳಿತ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡು ಮುನ್ನೆಚ್ಚರಿಕೆ ವಹಿಸಿತ್ತು ಎಂದು ಜಿಲ್ಲಾಧಿಕಾರಿ ಅವರು ನುಡಿದರು. 

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪನ್ನೇಕರ್ ಅವರು ಮಾತನಾಡಿ, ಪ್ರಕೃತಿ ವಿಕೋಪ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಜೊತೆ ಸೇರಿ ಸಂತ್ರಸ್ತರನ್ನು ರಕ್ಷಿಸುವಲ್ಲಿ ಹಾಗೂ ಪರಿಹಾರ ಕೇಂದ್ರದಲ್ಲಿ ತುಂಬಾ ಚೆನ್ನಾಗಿ ಶಾಂತಚಿತ್ತದಿಂದ ಕಾರ್ಯನಿರ್ವಹಿಸಿದ್ದೀರ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.  

ಜಿ.ಪಂ.ಸಿಇಒ ಕೆ.ಲಕ್ಷ್ಮೀಪ್ರಿಯಾ ಅವರು ಮಾತನಾಡಿ, ಎನ್‍ಸಿಸಿ, ಎನ್‍ಎಸ್‍ಎಸ್, ಸ್ಕೌಟ್ಸ್ ಮತ್ತು ಗೈಡ್ಸ್, ರೋವರ್ಸ್ ಮತ್ತು ರೇಂಜರ್ಸ್ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಜಿಲ್ಲಾಡಳಿತದ ಜೊತೆ ತುಂಬಾ ಸಹಕಾರ ನೀಡಿದ್ದೀರಿ ತಮಗೆ ಅಭಿನಂದನೆ ಎಂದರು. 

ಜಿಲ್ಲಾಡಳಿತಕ್ಕೆ ಒತ್ತಡ ಕಡಿಮೆ ಮಾಡುವ ನಿಟ್ಟಿನಲ್ಲಿ ತಮ್ಮ ಕಾರ್ಯ ಶ್ಲಾಘನೀಯ. ಪರಿಹಾರ ಕೇಂದ್ರಗಳಲ್ಲಿ ಸಂತ್ರಸ್ತರ ಹುಟ್ಟು ಹಬ್ಬ ಆಚರಣೆ, ಹಾಡುಗಾರಿಕೆ, ಹೀಗೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿ ಸಂತ್ರಸ್ತರಲ್ಲಿ ಮನೋಸ್ಥೈರ್ಯ ತುಂಬುವಲ್ಲಿ ಹೆಚ್ಚಿನ ಕೆಲಸ ಮಾಡಿದ್ದೀರಿ ಎಂದು ಜಿ.ಪಂ.ಸಿಇಒ ಅವರು ಹೇಳಿದರು. 

ಎನ್‍ಸಿಸಿ ಅಧಿಕಾರಿ ಮೇಜರ್ ರಾಘವ ಅವರು ಮಾತನಾಡಿ, ಎನ್‍ಸಿಸಿ ಮತ್ತು ಎನ್‍ಎಸ್‍ಎಸ್, ಸ್ಕೌಟ್ಸ್ ಮತ್ತು ಗೈಡ್ಸ್‍ನ ವಿದ್ಯಾರ್ಥಿಗಳು ಪ್ರಕೃತಿ ವಿಕೋಪ ಸಂದರ್ಭದಲ್ಲಿ ಜಿಲ್ಲಾಡಳಿತ ಜೊತೆ ಸೇರಿ ನಿಸ್ವಾರ್ಥದಿಂದ ಕಾರ್ಯ ನಿರ್ವಹಿಸಿದ್ದಾರೆ. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವುದು ಅತ್ಯಗತ್ಯ. ಆ ನಿಟ್ಟಿನಲ್ಲಿ ಈ ಸಂಸ್ಥೆಗಳು ಕಾರ್ಯನಿರ್ವಹಿಸಿವೆ ಎಂದರು.  

ಸ್ಕೌಟ್ಸ್ ಮತ್ತು ಗೈಡ್ಸ್‍ನ ಆಯುಕ್ತ ಕಿಟ್ಟು ಕಾಳಪ್ಪ ಮಾತನಾಡಿ ಪ್ರಕೃತಿ ವಿಕೋಪ ಸಂದರ್ಭದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಪರಿಹಾರ ಕೇಂದ್ರಗಳಲ್ಲಿ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸಿದ್ದಾರೆ. ಪ್ರಕೃತಿ ವಿಕೋಪ ಕಳೆದ ಎರಡು ವರ್ಷದಿಂದ ಸಂಭವಿಸುತ್ತಿದೆ. ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು. 

ಪ್ರಕೃತಿ ವಿಕೋಪ ತಡೆಯುವ ನಿಟ್ಟಿನಲ್ಲಿ ಹೆಚ್ಚು ಹೆಚ್ಚು ಮರಗಳನ್ನು ನೆಡಬೇಕಿದೆ. ಅಂತರ್ಜಲವನ್ನು ಉಳಿಸಬೇಕಿದೆ. ಗದ್ದೆಗಳಲ್ಲಿ ಶುಂಠಿ ಬೆಳೆಯುವುದನ್ನು ತಡೆಯಬೇಕಿದೆ ಎಂದು ಕಿಟ್ಟು ಕಾಳಪ್ಪ ಅವರು ಮನವಿ ಮಾಡಿದರು. 

ಎನ್‍ಎಸ್‍ಎಸ್ ಅಧಿಕಾರಿ ವನಿತ್ ಕುಮಾರ್ ಮಾತನಾಡಿ ಎನ್‍ಸಿಸಿ, ಎನ್‍ಎಸ್‍ಎಸ್, ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಕಾರ್ಯನಿರ್ವಹಿಸಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ವಿದ್ಯಾರ್ಥಿಗಳು ಸಂತ್ರಸ್ತರಿಗೆ ಧೈರ್ಯ ತುಂಬುವಲ್ಲಿ ತುಂಬಾ ಶ್ರಮಿಸಿದ್ದಾರೆ. ಪರಿಹಾರ ಕೇಂದ್ರದಲ್ಲಿ ಸ್ವಚ್ಛತೆ ಕಾಪಾಡುವುದು ಸೇರಿದಂತೆ ಶ್ಲಾಘನೀಯ ಕಾರ್ಯ ಮಾಡಿದ್ದಾರೆ. ವಿದ್ಯಾರ್ಥಿಗಳ ಜೊತೆ ಶಿಕ್ಷಕರು ಕೈಜೋಡಿಸಿದ್ದಾರೆ ಎಂದರು.

ಮುಂದಿನ ದಿನಗಳಲ್ಲಿ ಪ್ರಕೃತಿ ವಿಕೋಪ ಎದುರಿಸುವ ನಿಟ್ಟಿನಲ್ಲಿ ನೋಡಲ್ ಅಧಿಕಾರಿಗಳನ್ನು ಮೊದಲೇ ನಿಯೋಜಿಸಬೇಕಿದೆ. ಹಾಗೆಯೇ ಪರಿಹಾರ ಕೇಂದ್ರದಲ್ಲಿ ಸೋಪು, ಟೂತ್ ಪೇಸ್ಟ್, ಟವಲ್ ಮತ್ತಿತರ ಅಗತ್ಯ ಸಾಮಗ್ರಿ ಒಳಗೊಂಡ ‘ಸಣ್ಣ ಸಾಮಗ್ರಿ ಕಿಟ್’ ಸಿದ್ಧತೆ ಮಾಡಿಕೊಂಡು ಪೂರೈಸುವುದು ಅತ್ಯಗತ್ಯ ಎಂದು ವನಿತ್ ಕುಮಾರ್ ಅವರು ಸಲಹೆ ಮಾಡಿದರು.

ಭಾವುಕರಾದ ವಿದ್ಯಾರ್ಥಿಗಳು
ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಎನ್‍ಸಿಸಿ ವಿದ್ಯಾರ್ಥಿ ಯಶ್ಚಿತ್ ಅವರು ಗುಹ್ಯ, ನೆಲ್ಲಿಹುದಿಕೇರಿ ಮತ್ತಿತರ ಪರಿಹಾರ ಕೇಂದ್ರದಲ್ಲಿ ಸಂತ್ರಸ್ತರಿಗೆ ಅಗತ್ಯ ವಸ್ತುಗಳನ್ನು ಸಮರ್ಪಕವಾಗಿ ವಿತರಿಸುವುದು. ಹಾಡು ಹೇಳುವುದು, ಸಂತ್ರಸ್ತರಲ್ಲಿಯೂ ಹಾಡು ಹೇಳಿಸಿ ಮನರಂಜನಾ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು ಧೈರ್ಯ ತುಂಬುವ ಕೆಲಸ ಮಾಡಲಾಯಿತು ಎಂದರು. 

ರೋವರ್ಸ್ ವಿದ್ಯಾರ್ಥಿ ತಮ್ಮಯ್ಯ ಅವರು ಸಂತ್ರಸ್ತರ ನೋವನ್ನು ನಿವಾರಿಸುವ ನಿಟ್ಟಿನಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್, ರೋವರ್ಸ್, ಎನ್‍ಸಿಸಿ, ಎನ್‍ಎಸ್‍ಎಸ್ ವಿದ್ಯಾರ್ಥಿಗಳು ಪ್ರಯತ್ನ ಪಟ್ಟಿದ್ದಾರೆ. ಕಸ ಗುಡಿಸುವುದು ಸೇರಿದಂತೆ ಎಲ್ಲಾ ರೀತಿಯ ಕೆಲಸಗಳನ್ನು ಸೇವಾ ಮನೋಭಾವದಿಂದ ತಂಡೋಪಾದಿಯಾಗಿ ಕಾರ್ಯನಿರ್ವಹಿಸಿದ್ದೇವೆ ಎಂದರು. 

‘ಪರಿಹಾರ ಕೇಂದ್ರದಲ್ಲಿ ಏನನ್ನು ಕೇಳದೆ ಮೂಲೆಯಲ್ಲಿ ಕುಳಿತುಕೊಂಡಿರುವವರನ್ನು ಸಂತೈಸುವತ್ತ ವಿಶೇಷ ಗಮನಹರಿಸುವ ಕೆಲಸ ಮಾಡಲಾಯಿತು ಎಂದು ವಿದ್ಯಾರ್ಥಿ ತಮ್ಮಯ್ಯ ಭಾವುಕರಾದರು.’  

ಎನ್‍ಎಸ್‍ಎಸ್ ವಿದ್ಯಾರ್ಥಿ ಭುವನ್ ಕುಮಾರ್ ಮಾತನಾಡಿ, ಪರಿಹಾರ ಕಾರ್ಯದಲ್ಲಿ ಅಗತ್ಯ ಸೇವೆ ಕಲ್ಪಿಸಲು ಪ್ರಯತ್ನಿಸಲಾಗಿದೆ. ಮುಂದಿನ ದಿನಗಳಲ್ಲಿ ಪ್ರಕೃತಿ ವಿಕೋಪ ಸಂಭವಿಸಬಾರದು ಎಂದು ಅವರು ತಿಳಿಸಿದರು.  

ಯುನೆಸೆಫ್‍ನ ಸಮನ್ವಯಾಧಿಕಾರಿ ಮನೋಹರ್ ಸ್ವಾಗತಿಸಿದರು. ಸ್ಕೌಟ್ಸ್ ಮತ್ತು ಗೈಡ್ಸ್‍ನ ಉಷಾರಾಣಿ ನಿರೂಪಿಸಿದರು, ಎನ್‍ಎಸ್‍ಎಸ್ ಅಧಿಕಾರಿ ವನಿತ್ ಕುಮಾರ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News