ದರೋಡೆ ಯತ್ನ: ಮೂವರು ಆರೋಪಿಗಳ ಬಂಧನ

Update: 2019-10-14 18:08 GMT

ದಾವಣಗೆರೆ, ಅ.14: ರಸ್ತೆಯಲ್ಲಿ ವಾಹನ ಅಡ್ಡಗಟ್ಟಿ ದರೋಡೆ ಮಾಡಲು ಯತ್ನಿಸಿದ್ದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ತಿಳಿಸಿದರು. 

ಶಿವಮೊಗ್ಗದ ಪಿಳ್ಳಂಗಿರಿ ಚಿಕ್ಕಪ್ಪ, ಚನ್ನಗಿರಿಯ ನಿಂಗಪ್ಪ, ಎರೆಹಳ್ಳಿ ಗ್ರಾಮದ ಮಂಜಪ್ಪ ಬಂಧಿತ ಆರೋಪಿಗಳು. 

ಚನ್ನಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಾವೀನಕಟ್ಟೆ -ಸುಣಿಗೆರೆ ಎನ್‍ಹೆಚ್ -13 ರಸ್ತೆಯಲ್ಲಿ ವಾಹನಗಳನ್ನು ಅಡ್ಡಗಟ್ಟಿ ದರೋಡೆ ಮಾಡಲು ಪ್ರಯತ್ನಿಸುತ್ತಿದ್ದಾರೆ ಎನ್ನುವ ಮಾಹಿತಿ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ನಡೆಸಿದ್ದು ಮೂವರು ಆರೋಪಿಗಳು ಸಿಕ್ಕಿದ್ದು, ನಾಲ್ವರು ಪರಾರಿಯಾಗಿದ್ದಾರೆ.  ಉಳಿದ ಆರೋಪಿಗಳ ಪತ್ತೆಗೆ ತಂಡ ರಚಿಸಿದ್ದೇವೆ. ಕೃತ್ಯವೆಸಗಲು ಬಳಸಿದ 1 ಲಕ್ಷ ಮೌಲ್ಯದ 2 ಬೈಕ್, ಚಾಕು ಕಾರದ ಪುಡಿ ವಶಪಡಿಸಿಕೊಳ್ಳಲಾಗಿದೆ ಎಂದು ವಿವರಿಸಿದರು. 

ಈ ಹಿಂದೆ ಇವರು ಶ್ರೀಗಂಧ ಮರ ಕಳ್ಳತನ ಮಾಡುವವರಾಗಿದ್ದು, ವಿಚಾರಣೆ ನಡೆಸಿದಾಗ ಮಾವೀನಕಟ್ಟೆ ಮತ್ತು ಮಾಡಾಳ ಗ್ರಾಮದಲ್ಲಿ ಕಳ್ಳತನ ಮಾಡಿದ 5.5 ಲಕ್ಷ ಬೆಲೆ ಬಾಳುವ ಸುಮಾರು 79 ಕೆಜಿ 69 ಮರದ ತುಂಡುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದರು. 

ಇತ್ತೀಚೆಗೆ ನಡೆದ ಕೊಲೆ ಪ್ರಕರಣ ತನಿಖೆ ಮುಂದುವರೆದಿದ್ದು, ಶೀಘ್ರವೇ ಆರೋಪಿಗಳನ್ನು ಬಂಧಿಸಲಾಗುವುದು. ಜಿಲ್ಲೆಯಲ್ಲಿ ಐಎಂಎ ಪ್ರಕರಣದಲ್ಲಿ 600 ಜನರು ನೊಂದವರಿದ್ದಾರೆ. 20 ಕೋಟಿ ಹಣ ಕಳೆದುಕೊಂಡಿದ್ದಾರೆ. ಈ ಪ್ರಕರಣವನ್ನು ಸಿಟ್‍ಗೆ ವರ್ಗಾಯಿಸಲಾಗಿದೆ. ನಗರದಲ್ಲಿ ಹಜ್ ಯಾತ್ರೆಗೆ ಕಳುಹಿಸುವುದಾಗಿ ನೂರಾರು ಜನರಿಂದ ಹಣ ಪಡೆದು ವಂಚಿಸಲಾಗಿದೆ. ಮಧ್ಯವರ್ತಿಗಳು ಇನ್ನೂ ಸಿಕ್ಕಿಲ್ಲ. ಸಿಇಎನ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿಸಿದರು. 

ನಗರದಲ್ಲಿ ಸರಣಿ ಸರಗಳ್ಳತನದ ಬಗ್ಗೆ ಪ್ರಶ್ನಿಗೆ ಉತ್ತರಿಸಿದ ಎಸ್ಪಿ ಅವರು, ಹೆದ್ದಾರಿ ಸಮೀಪವಿರುವ ನಗರಗಳಲ್ಲಿ ಕಳ್ಳತನ ನಡೆಯುತ್ತಿದ್ದು, ಈ ಸಂಬಂಧ ವಿಶೇಷ ತಂಡ ರಚಿಸಲಾಗಿದೆ. ಇದರಲ್ಲಿ ಬೇರೆ ಜಿಲ್ಲೆಗಳ ಮತ್ತು ಇರಾನಿ ಗ್ಯಾಂಗ್‍ನ ಕೈವಾಡ ಇರುವ ಶಂಕೆಯಿದೆ ಎಂದು ಮಾಹಿತಿ ನೀಡಿದರು. 
ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಚನ್ನಗಿರಿ ಪೊಲೀಸರ ಕಾರ್ಯವನ್ನು ಶ್ಲಾಘೀಸಿದರು. 

ಪತ್ರಿಕಾಗೋಷ್ಠಿಯಲ್ಲಿ ಎಎಸ್ಪಿ ರಾಜೀವ್, ಗ್ರಾಮಾಂತರ ಡಿವೈಎಸ್ಪಿ ಎಂ.ಕೆ.ಗಂಗಲ್, ಚನ್ನಗಿರಿ ವೃತ್ತ ನಿರೀಕ್ಷಕ ಆರ್.ಆರ್.ಪಾಟೀಲ್, ಪಿಎಸ್‍ಐ ಶಿವರುದ್ರಪ್ಪ ಮೇಟಿ ಸೇರಿದಂತೆ ಸಿಬ್ಬಂದಿಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News