ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಸಿದ್ದರಾಮಯ್ಯ- ಸಂಸದ ಶ್ರೀನಿವಾಸಪ್ರಸಾದ್

Update: 2019-10-14 18:19 GMT

ಮೈಸೂರು,ಅ.14: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಸಂಸದ ವಿ.ಶ್ರೀನಿವಾಸಪ್ರಸಾದ್ ಒಂದೇ ವೇದಿಕೆಯಲ್ಲಿ ಅಕ್ಕಪಕ್ಕದಲ್ಲಿ ಕೂತು ಅಚ್ಚರಿ ಮೂಡಿಸಿದರು. 

ಜಿಲ್ಲೆಯ ಟಿ.ನರಸೀಪುರದ ತಾಲೂಕು ಕಚೇರಿ ಮುಂಭಾಗ ಬೌದ್ಧ ದಮ್ಮ ಧೀಕ್ಷ ದಿನವಾದ ಸೋಮವಾರ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಈ ಉಭಯ ನಾಯಕರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು.

ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಸಂಸದ ವಿ.ಶ್ರೀನಿವಾಸಪ್ರಸಾದ್ ಒಂದೇ ವೇದಿಕೆಯಲ್ಲಿ ಅಕ್ಕಪಕ್ಕದಲ್ಲಿ ಕುಳಿತುಕೊಂಡಿದ್ದರಾದರೂ ಒಬ್ಬರಿಗೊಬ್ಬರು ಮಾತನಾಡಲಿಲ್ಲ. 

ಬಾಬಾ ಸಾಹೇಬ್ ಅಂಬೇಡ್ಕರ್ ಪ್ರತಿಮೆ ಅನಾವರಣ ಮಾಡಲು ಸಿದ್ದರಾಮಯ್ಯ ಮೊದಲಿಗೆ ಬಂದರು. ತಡವಾಗಿ ಬಂದ ಸಂಸದ ವಿ.ಶ್ರೀನಿವಾಸಪ್ರಸಾದ್ ಆಗಮನಕ್ಕಾಗಿ ಸಿದ್ದರಾಮಯ್ಯ ಕೆಲ ಕಾಲ ಕಾದು ನಿಂತರು. ಶ್ರೀನಿವಾಸಪ್ರಸಾದ್ ಬಂದ ನಂತರ ಅಂಬೇಡ್ಕರ್ ಪ್ರತಿಮೆಯನ್ನು ಅನಾವರಣಗೊಳಿಸಿದರು. ಬಳಿಕ ಸಿದ್ದರಾಮಯ್ಯ ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರ ಜೊತೆ ನಿಂದು ಮಾಧ್ಯಮಗಳತ್ತ  ಫೋಸ್ ನೀಡಿದರು.

ನಂತರ ಮಾತನಾಡಿದ ಸಂಸದ ವಿ.ಶ್ರೀನಿವಾಸಪ್ರಸಾದ್, ಮಾಜಿ ಸಿಎಂ ಸಿದ್ದರಾಮಯ್ಯ ಹೆಸರು ಉಲ್ಲೇಖಿಸದೆ, ಅಂಬೇಡ್ಕರ್ ಯಾವುದೇ ಪಕ್ಷದ ರಾಜಕೀಯ ಮುಖಂಡರಲ್ಲ, ನಾನು ಒಂದು ಪಕ್ಷದಲ್ಲಿ ಇರಬಹುದು, ಮತ್ತೊಬ್ಬರು ಮತ್ತೊಂದು ಪಕ್ಷದಲ್ಲಿ ಇರಬಹುದು ಎಂದು ಹೇಳಿದರು.

ಅಂಬೇಡ್ಕರ್ ಜಾತಿ, ಪಕ್ಷಗಳನ್ನು ಮೀರಿದ ನಾಯಕ. ದಲಿತರ ಪಾಲಿಗೆ ಅಂಬೇಡ್ಕರ್ ಆಧ್ಯಾತ್ಮಿಕ ನಾಯಕ. ನಮ್ಮಲ್ಲೇ ಜಾತಿ ಇಟ್ಟುಕೊಂಡು ಮತ್ತೊಬ್ಬರಿಗೆ ಜಾತಿ ಬಿಡಿ ಎಂದು ಹೇಳುವುದು ತಪ್ಪು. ನೊಂದ ಸಮುದಾಯಗಳೆಲ್ಲ ಒಂದಾಗಬೇಕು ಅಂತ ನಾನು ಹಲವಾರು ಬಾರಿ ಹೇಳಿದ್ದೇನೆ. ನಮ್ಮನ್ನು ಒಡೆದು ಆಳುವವರು ತುಂಬಾ ಜನ ಇದ್ದಾರೆ. ಅವರ ಬಗ್ಗೆ ನಾವು ಎಚ್ಚರಿಕೆಯಿಂದ ಇರಬೇಕು ಎಂದು ಸಂಸದ ವಿ.ಶ್ರೀನಿವಾಸಪ್ರಸಾದ್ ನುಡಿದರು.

ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ವಿ.ಶ್ರೀನಿವಾಸಪ್ರಸಾದ್ ಪರಸ್ಪರ ಸ್ನೇಹಿತರು. ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಕಂದಾಯ ಸಚಿವರಾಗಿದ್ದ ಶ್ರೀನಿವಾಸಪ್ರಸಾದ್ ಅವರನ್ನು ಸಿದ್ದರಾಮಯ್ಯ ಏಕಾಏಕಿ ತೆಗೆದು ಹಾಕಿದ್ದರು. ಇದರಿಂದ ಸಿದ್ದರಾಮಯ್ಯ ವಿರುದ್ಧ ಸಿಟ್ಟಿಗೆದ್ದು, ತಿರುಗಿಬಿದ್ದ ಶ್ರೀನಿವಾಸಪ್ರಸಾದ್, ನಂಜನಗೂಡು ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಉಪಚುನಾವಣೆಗೆ ನಿಂತು ಸೋತಿದ್ದರು. ಮತ್ತೆ ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಸ್ಫರ್ಧಿಸಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಈ ಇಬ್ಬರೂ ನಾಯಕರು ಕಳೆದ ನಾಲ್ಕು ವರ್ಷದಿಂದ ಬದ್ಧ ವೈರಿಗಳಾಗಿದ್ದರು.

ಕಾರ್ಯಕ್ರಮದಲ್ಲಿ ಬೌದ್ಧ ಗುರು ಭಂತೇಜಿ, ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಶಾಸಕರಾದ ಅಶ್ವಿನ್ ಕುಮಾರ್, ಡಾ.ಯತೀಂದ್ರ ಸಿದ್ದರಾಮಯ್ಯ, ಕಾಂಗ್ರೆಸ್ ಯುವ ಮುಖಂಡ ಸುನೀಲ್ ಬೋಸ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News