ಎನ್‍ಟಿಎಂಎಸ್ ಹೆಣ್ಣು ಮಕ್ಕಳ ಶಾಲೆ ಮುಚ್ಚುವ ಆದೇಶಕ್ಕೆ ತಡೆ

Update: 2019-10-14 18:21 GMT

ಮೈಸೂರು,ಅ.14: ಮಹರಾಣಿ ಎನ್‍ಟಿಎಂಎಸ್ ಹೆಣ್ಣು ಮಕ್ಕಳ ಶಾಲೆ ಉಳಿಸಿ ಹೋರಾಟಕ್ಕೆ ಜಯ ಸಿಕ್ಕಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ತಾತ್ಕಾಲಿಕ ತಡೆ ನೀಡಿ ಆದೇಶ ಹೊರಡಿಸಿದ್ದಾರೆ.

ನಗರದ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರು ನೂರು ವರ್ಷಕ್ಕೂ ಹೆಚ್ಚು ಹಳೆಯದಾದ ಮಹರಾಣಿ ಎನ್‍ಟಿಎಂಎಸ್ ಹೆಣ್ಣು ಮಕ್ಕಳ ಶಾಲೆಯನ್ನು ಮುಚ್ಚಿಸಿ ರಾಮಕೃಷ್ಣ ಆಶ್ರಮದವರು ವಶಕ್ಕೆ ಪಡೆದು ವಿವೇಕಾನಂದರ ಪ್ರತಿಮೆ ನಿರ್ಮಾಣಕ್ಕೆ ಮುಂದಾಗಿದ್ದರು. ಅದರ ಪರಿಣಾಮ ಅ.12 ರಂದು ಡಿಡಿಪಿಐ ನೇತೃತ್ವದಲ್ಲಿ ಶಾಲೆಯನ್ನು ಮುಚ್ಚಿಸಿ ಹೊಡೆದು ಹಾಕಲು ಬಂದಿದ್ದರು.

ವಿಷಯ ತಿಳಿದು ಶಾಲೆಯ ಮಕ್ಕಳು, ಪೋಷಕರು, ಸಾಹಿತಿಗಳು, ರೈತರು, ದಸಂಸ ಕಾರ್ಯಕರ್ತರು, ಕನ್ನಡ ಪರ ಹೋರಾಟಗಾರರು ಸೇರಿದಂತೆ ಅನೇಕರು ಸ್ಥಳಕ್ಕೆ ತೆರಳಿ ತಡೆದು ಅಹೋರಾತ್ರಿ ಪ್ರತಿಭಟನೆ ನಡೆಸಿದ್ದರು.

ಇತಿಹಾಸ ತಜ್ಞ ಪ್ರೊ.ಪಿ.ವಿ.ನಂಜರಾಜ ಅರಸು ನೇತೃತ್ವದಲ್ಲಿ ಶಾಲೆಯ ಮಕ್ಕಳು, ಶಿಕ್ಷಕರು ಮತ್ತು ಪೋಷಕರ ನೇತೃತ್ವದಲ್ಲಿ ರವಿವಾರ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಶಾಲೆಯನ್ನು ಮುಚ್ಚದಂತೆ ಮನವಿ ಮಾಡಲಾಯಿತು. ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿ ಯಡಿಯೂರಪ್ಪ, ಯಾವುದೇ ಕಾರಣಕ್ಕೂ ಶಾಲೆ ಮುಚ್ಚಲು ಅವಕಾಶ ನೀಡುವುದಿಲ್ಲ, ಈ ಕೂಡಲೇ ಜಿಲ್ಲಾಧಿಕಾರಿಗಳ ಜೊತೆ ಮಾತನಾಡುತ್ತೇನೆ ಎಂದು ಹೇಳಿ ಲಿಖಿತ ಆದೇಶ ನೀಡಿದರು.

ಹಾಗಾಗಿ ಸೋಮವಾರ ಪ್ರತಿಭಟನಾಕಾರರು ಶಾಲೆಯ ಆವರಣದಲ್ಲಿ ಸಿಹಿ ಹಂಚಿ ಸಂಭ್ರಮಿಸಿದರು. ಮುಖ್ಯಮಂತ್ರಿಗಳ ಆದೇಶ ಪ್ರತಿಯನ್ನು ಜಿ.ಪಂ.ಕಾರ್ಯನಿರ್ವಹಣಾಧಿಕಾರಿ ಕೆ.ಜ್ಯೋತಿಯವರಿಗೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News