ಮೈಸೂರು ಜಿಲ್ಲೆ ವಿಭಜನೆಗೆ ಎಚ್.ವಿಶ್ವನಾಥ್ ಮನವಿ: ಮೈಸೂರಿನಲ್ಲಿ ವ್ಯಾಪಕ ವಿರೋಧ

Update: 2019-10-14 18:27 GMT

ಮೈಸೂರು,ಅ.14: ಮೈಸೂರು ಜಿಲ್ಲೆ ವಿಭಜನೆ ಮಾಡುವಂತೆ ಅನರ್ಹ ಶಾಸಕ ಎಚ್.ವಿಶ್ವನಾಥ್ ಮುಖ್ಯಮಂತ್ರಿಗಳ ಬಳಿ ಮನವಿ ಮಾಡಿದ ಬೆನ್ನಲ್ಲೇ ಮೈಸೂರಿನಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ನಗರದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಸಾ.ರಾ.ಮಹೇಶ್, ಮೈಸೂರಿನಿಂದ ಹುಣಸೂರನ್ನು ಬೇರೆ ಮಾಡುವುದಕ್ಕೆ ನಮ್ಮ ವಿರೋಧವಿದೆ. ಮೈಸೂರು ಜಿಲ್ಲೆಗೆ ವಿಶ್ವದಲ್ಲಿ ಪ್ರಖ್ಯಾತಿ ಇದೆ. ಅಷ್ಟೇ ಅಲ್ಲದೆ ಮೈಸೂರು ಸಾಂಸ್ಕೃತಿಕ ಜಿಲ್ಲೆ. ಇದನ್ನು ವಿಭಜಿಸಲು ನಾವು ಒಪ್ಪುವುದಿಲ್ಲ ಎಂದು ಅವರು ಹೇಳಿದರು.

ಮೈಸೂರು ಜಿಲ್ಲೆಯ ಎಲ್ಲ ತಾಲೂಕುಗಳೂ ಒಟ್ಟಾಗಿ ಇರಬೇಕು. ವಿಭಜನೆ ಒಳ್ಳೆಯದಲ್ಲ. ಎಚ್. ವಿಶ್ವನಾಥ್ ಅವರು ಶಾಸಕರಾಗಿದ್ದಾಗ ಅಭಿವೃದ್ಧಿ ಕೆಲಸ ಮಾಡದೆ ಈಗ ಜಿಲ್ಲೆ ವಿಭಜನೆಗೆ ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ರಾಜಕೀಯ ಕಾರಣಗಳಿಗಾಗಿ ಮೈಸೂರು ಜಿಲ್ಲೆ ವಿಭಜನೆ ಮಾಡುವುದು ಸರಿಯಲ್ಲ, ಸಾಂಸ್ಕೃತಿಕ ನಗರಿಯನ್ನು ಒಡೆಯುವ ಕೆಲಸ ಮಾಡಬಾರದು. ಚಾಮರಾಜನಗರ ಹಿಂದೆ ಮೈಸೂರು ಜಿಲ್ಲೆಯ ವ್ಯಾಪ್ತಿಯಲ್ಲೇ ಇತ್ತು. ಮೈಸೂರು-ಚಾಮರಾಜನಗರ ವಿಭಜನೆಯಾದ ಬಳಿಕ ಚಾಮರಾಜನಗರ ಎಷ್ಟು ಅಭಿವೃದ್ಧಿ ಆಗಿದೆ ಎಂಬುದನ್ನು ನಾವು ಕಂಡಿದ್ದೇವೆ ಎಂದು ಎಚ್.ವಿಶ್ವನಾಥ್ ಗೆ ತಿರುಗೇಟು ನೀಡಿದರು.

ಎಚ್.ವಿಶ್ವನಾಥ್ ಅವರು ಯಾವ ಕಾರಣಕ್ಕೆ ಹಾಗೆ ಹೇಳಿದ್ದಾರೋ ಗೊತ್ತಿಲ್ಲ. ರಾಜಕೀಯ ಲಾಭಕ್ಕೆ ಪ್ರತ್ಯೇಕ ಜಿಲ್ಲೆಯ ಪ್ರಸ್ತಾಪ ಮಾಡುವುದು ಸರಿಯಲ್ಲ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News