ಗುಂಪು ಹಲ್ಲೆ, ಆರ್ಥಿಕ ಮುಗ್ಗಟ್ಟು: ಕೇಂದ್ರ ಸರ್ಕಾರದ ವಿರುದ್ಧ ಎಡಪಕ್ಷಗಳ ಪ್ರತಿಭಟನೆ

Update: 2019-10-15 12:17 GMT

ತುಮಕೂರು, ಅ.15: ಎರಡನೇ ಬಾರಿಗೆ ಅಧಿಕಾರಿಗೆ ಬಂದಿರುವ ಕೇಂದ್ರ ಬಿಜೆಪಿ ಸರ್ಕಾರ ದೇಶವನ್ನು ಅಭಿವೃದ್ಧಿ ದಾರಿಯಲ್ಲಿ ಮುನ್ನಡೆಸದೇ, ಕೇವಲ ಕೋಮುಭಾವನೆ ಕೆರಳಿಸುವ ಮೂಲಕ ಸಮಾಜದಲ್ಲಿ ವಿಷ ಬೀಜವನ್ನು ಬಿತ್ತುವ ಕೆಲಸವನ್ನು ಮಾಡುತ್ತಿದೆ ಎಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ಗಿರೀಶ್ ಆರೋಪಿಸಿದರು.

ನಗರದ ಬಿಎಸ್‍ಎನ್‍ಎಲ್ ಕಚೇರಿ ಎದುರು ಹಮ್ಮಿಕೊಂಡಿದ್ದ ಕೇಂದ್ರ ಸರ್ಕಾರ ವಿರುದ್ಧ ಎಡಪಕ್ಷಗಳ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ದ್ವೇಷ ಭಾವನೆಯನ್ನು ಕೆರಳಿಸುವ ಮೂಲಕ ಸಮುದಾಯಗಳನ್ನು ಎತ್ತಿಕಟ್ಟುವ ಕೆಲಸ ಮಾಡುವ ಮೂಲಕ ದೇಶವನ್ನು ಅಭಿವೃದ್ಧಿಯಿಂದ ಹಿಂದಕ್ಕೆ ತಳ್ಳುತ್ತಿರುವ ಬಿಜೆಪಿ ಸರ್ಕಾರದ ಆರ್ಥಿಕ ನೀತಿಗಳು, ಕಾರ್ಮಿಕರಿಗೆ ಕೆಲಸವಿಲ್ಲದಂತೆ ಮಾಡಿವೆ ಎಂದು ದೂರಿದರು.

ಜೈಶ್ರೀರಾಮ್ ಘೋಷಣೆ ಕೂಗಿಲ್ಲವೆಂದು ಗುಂಪು ಹಲ್ಲೆಗಳು ನಿರಂತರವಾಗಿ ದೇಶದಲ್ಲಿ ನಡೆಯುತ್ತಿದ್ದರು, ಅದನ್ನು ನಿಯಂತ್ರಿಸುವ ಕೆಲಸಕ್ಕೆ ಕೇಂದ್ರ ಸರ್ಕಾರ ಮುಂದಾಗುತ್ತಿಲ್ಲ, ಅನ್ಯಧರ್ಮಿಯರ ಮೇಲೂ ಜೈಶ್ರೀರಾಮ್ ಘೋಷಣೆ ಕೂಗುವಂತೆ ಒತ್ತಾಯವನ್ನು ಮಾಡುವ ಮೂಲಕ ಸಂವಿಧಾನ್ಮತಕ ಹಕ್ಕನ್ನು ಉಲ್ಲಂಘಿಸಲಾಗುತ್ತಿದ್ದು, ಕೇಂದ್ರ ಸರ್ಕಾರ ಗುಂಪು ಹಲ್ಲೆಯನ್ನು ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸಿಪಿಎಂ ಮುಖಂಡ ಸೈಯದ್ ಮುಜೀಬ್ ಮಾತನಾಡಿ, ಭಾರತದಲ್ಲಿ ಕಾಂಗ್ರೆಸ್ ಸರ್ಕಾರ ಆರಂಭಿಸಿದ ಉದಾರೀಕರಣದಿಂದಾಗಿ ದೇಶದಲ್ಲಿ ಇಂದು ಆರ್ಥಿಕ ಪರಿಸ್ಥಿತಿ ಕುಸಿತ ಕಂಡಿದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಆರ್ಥಿಕ ನೀತಿಯನ್ನು ನಿರೂಪಿಸಲು ಎಡವಿದ್ದರಿಂದಲೇ ಇಂದು ಕಾರ್ಮಿಕರು ದುಡಿಯಲು ಆಗುತ್ತಿಲ್ಲ. ಕೇವಲ ಕಾರ್ಪೋರೇಟರ್ ಸಂಸ್ಥೆಗಳ ಕೈಗೊಂಬೆಯಂತೆ ಕೇಂದ್ರ ಸರ್ಕಾರ ವರ್ತಿಸುತ್ತಿದೆ ಎಂದು ಆರೋಪಿಸಿದರು.

ಸರ್ಕಾರದ ಸಂಸ್ಥೆಗಳನ್ನು ಖಾಸಗೀಕರಣ ಮಾಡಲು ಯತ್ನಿಸುತ್ತಿರುವ ಕೇಂದ್ರ ಸರ್ಕಾರ, ಕಾರ್ಪೋರೇಟರ್ ಕಂಪನಿಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸುತ್ತಿದೆಯೇ ಹೊರತು, ಕಾರ್ಮಿಕರಿಗೆ, ರೈತರಿಗೆ ಅನುಕೂಲವಾಗುವಂತಹ ರೈತರ, ಕಾರ್ಮಿಕರಿಗೆ ಉದ್ಯೋಗ ಸೃಷ್ಠಿಸುವಂತಹ ಯಾವುದೇ ಯೋಜನೆಗಳನ್ನು ತರುತ್ತಿಲ್ಲ ಇದರಿಂದಾಗಿ ನಿರುದ್ಯೋಗದ ಪ್ರಮಾಣ ಹೆಚ್ಚಳವಾಗುತ್ತಿದ್ದು, ಮುಂದಿನ ದಿನಗಳಲ್ಲಿ ನಿರುದ್ಯೋಗ ಭತ್ಯೆ ನೀಡಬೇಕಾದ ಅನಿವಾರ್ಯತೆ ತಲೆದೋರಿದರು ಆಶ್ಚರ್ಯಪಡಬೇಕಿಲ್ಲ ಎಂದರು.

ಕೇಂದ್ರ ಸರ್ಕಾರ ಆರ್ಥಿಕ ಮುಗ್ಗಟ್ಟನ್ನು ಸರಿಪಡಿಸುವ ನಿಟ್ಟಿನಲ್ಲಿ, ಕಾರ್ಮಿಕ ವಲಯಕ್ಕೆ ಉತ್ತೇಜನಕಾರಿಯಾಗಿ ನೀತಿಯನ್ನು ನಿರೂಪಿಸದೇ ಹೋದಲ್ಲಿ, ಮುಂದಿನ ದಿನಗಳಲ್ಲಿ ಆರ್ಥಿಕ ಬಿಕ್ಕಟ್ಟು ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದ್ದು, ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ಎಡಪಕ್ಷಗಳು ಇಂದು ದೇಶದಾದ್ಯಂತ ಪ್ರತಿಭಟನೆ ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ ಜನಾಂದೋಲವನ್ನು ರೂಪಿಸಲಾಗುತ್ತದೆ ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಸಿಪಿಐಎಂನ ಸುಬ್ರಮಣ್ಯ, ಉಮೇಶ್, ಸಿಐಟಿಯು ಖಜಾಂಚಿ ಲೋಕೇಶ್, ಕಂಬೇಗೌಡ, ಕಟ್ಟಡ ಕಾರ್ಮಿಕ ಮುಖಂಡರಾದ ಖಲೀಲ್, ನಾಗರಾಜ್, ರಾಮಮೂರ್ತಿ, ರಾಮಕೃಷ್ಣ, ಸತೀಶ್, ಆಟೋಬಾಬು, ಇಂತಿಯಾಝ್, ಶೀಷಾತಾಜ್, ಕಾಂತರಾಜ್, ನರಸಿಂಹಮೂರ್ತಿ, ರಾಜಶೇಖರ್, ರವಿಶಂಕರ್, ನಾಗರತ್ನಮ್ಮ, ನಾಗಣ್ಣ, ಕುಪ್ಪೂರು ಅಮರ್ ಸೇರಿದಂತೆ ಇತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News