ಬಹು ಸಂಸ್ಕೃತಿ, ಬಹು ಭಾಷೆಯ ಭಾರತವನ್ನು ದಿವಾಳಿ ಎಬ್ಬಿಸಿದ್ದಾರೆ: ಕನ್ಹಯ್ಯ ಕುಮಾರ್

Update: 2019-10-15 14:56 GMT

ಕಲಬುರಗಿ, ಅ.15: ಬಹು ಸಂಸ್ಕೃತಿ, ಬಹು ಭಾಷೆಯ ಈ ದೇಶವನ್ನು ದಿವಾಳಿ ಎಬ್ಬಿಸಿದ್ದಾರೆ. ಅಣ್ಣಾ ಹಜಾರೆ ಹಿಂದೆ ಬಿದ್ದಿದ್ದ ಜನರನ್ನು ಪ್ರಚಾರದಿಂದ ಮೋದಿಯ ಹಿಂದೆ ಬೀಳುವಂತೆ ಮಾಡಿದರು ಎಂದು ಜೆಎನ್‌ಯು ವಿದ್ಯಾರ್ಥಿ ಸಂಘಟನೆಯ ಮಾಜಿ ಅಧ್ಯಕ್ಷ ಕನ್ಹಯ್ಯ ಕುಮಾರ್ ಹೇಳಿದ್ದಾರೆ.

ಕಲಬುರಗಿ ಶ್ರೀನಿವಾಸಗುಡಿ ಮೆಮೋರಿಯಲ್ ಟ್ರಸ್ಟ್ ಹಾಗೂ ಸಂವಿಧಾನ ಪರ ಸಂಘಟನೆಗಳ ಒಕ್ಕೂಟ ಇಂದು ಸಂಜೆ ನಗರದ ಡಾ. ಅಂಬೇಡ್ಕರ್ ಕಾಲೇಜು ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನದ ರಕ್ಷಣೆ ಮತ್ತು ಯುವ ಜನತೆಯ ಹೊಣೆ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ಮಂಗಳ, ಚಂದ್ರನ ಅಂಗಳದಲ್ಲಿ ಕಾಲಿಡುವ ಈ ದೇಶದಲ್ಲಿ ಗಟಾರದಲ್ಲಿ ಇಳಿದು ಸ್ವಚ್ಛ ಮಾಡಿ ಬದುಕುವ ಜನರಿದ್ದಾರೆ ಎಂಬುದನ್ನು ಆಡಳಿತ ನಡೆಸುವರು ನೆನಪಿಡಬೇಕು ಎಂದು ತಿಳಿಸಿದರು.

ಹಿಂದೂ ಮುಸ್ಲಿಮರು ಮಾತ್ರ ಇಂದು ಸಂಕಷ್ಟದಲ್ಲಿ ಇಲ್ಲ. ಇಡೀ ಹಿಂದೂಸ್ತಾನ ಸಂಕಷ್ಟದಲ್ಲಿದೆ. ಈ ಹಿಂದೆ ಭಾರತ ಬ್ರಿಟಿಷ್ ಆಡಳಿತಕ್ಕೆ ಒಳಪಟ್ಟಿತ್ತು. ಇದೀಗ ವಿವಿ ಕುಲಪತಿಗಳು ಸಹ ಅದೇ ರೀತಿ ಸರ್ಕಾರದ ಪರವಾಗಿ ಕೆಲಸ ಮಾಡಿ ನಮ್ಮ ಕಾರ್ಯಕ್ರಮವನ್ನು ರದ್ದು ಮಾಡಿದ್ದಾರೆ ಎಂದು ಆರೋಪಿಸಿದರು.

2014ಕ್ಕಿಂತ ಮೊದಲು ರಿಲಯನ್ಸ್ ಪೆಟ್ರೋಲ್ ಬಂದ್ ಆಗಿದ್ದವು. ಆದರೆ ಈಗ ಏನಾಗಿದೆ ನೀವೆ ಯೋಚಿಸಿ. ದೇಶದಾದ್ಯಂತ ನಿರುದ್ಯೋಗ ತಾಂಡವಾಡುತ್ತಿದೆ. ರೈತರ ಆತ್ಮಹತ್ಯೆ ಹೆಚ್ಚುತ್ತಿವೆ. ಇದೆಲ್ಲದಕ್ಕೆ ನಿಮ್ಮಲ್ಲಿ ಉತ್ತರವೇನಿದೆ ಎಂದು ಪ್ರಶ್ನಿಸಿದರು.

ಆಡಳಿತ ನಿಮ್ಮ ಕೈಯಲ್ಲಿ ಇದೆ ಎಂದು ನೀವು ಏನು ಮಾಡಿದರೂ ನಡೆಯುತ್ತದೆ. ಪರಂಪರೆ ಹೆಸರಿನಲ್ಲಿ ನೀವು ಮಾಡ ಹೊರಟಿರುವುದು ಏನು ? ಸತ್ಯ ಮತ್ತು ಸತ್ಯದ ಮಾತುಗಳನ್ನು ಯಾರಿಂದಲೂ ಮುಚ್ಚಿಡಲು, ಬಚ್ಚಿಡಲು ಸಾಧ್ಯವಿಲ್ಲ. ಒಂದಲ್ಲ ಒಂದು ದಿನ ಅದು ಮತ್ತೆ ಚಿಗುರೊಡೆದು ಬೆಳೆದೇ ಬೆಳೆಯುತ್ತದೆ. ನಾವು ಸುಳ್ಳು ಮೊಕದ್ದಮೆಗಳಿಗೆ ಹೆದರುವುದಿಲ್ಲ ಎಂದು ಹೇಳಿದರು.

ಮೋದಿ ಗರೀಬ್ ಎಂದು ಕೋಟ್ಯಂತರ ರೂ. ಮೌಲ್ಯದ ಜಾಹಿರಾತು ನೀಡಲಾಗುತ್ತಿದೆ. ಆದರೆ ಬಡವರಿಗಾಗಿ ನೀವು ಏನು ಮಾಡಿದಿರಿ? ದೇಶದ ಆರ್ಥಿಕ ಪರಿಸ್ಥಿತಿ ಕುಂಟಿತಕ್ಕೆ ಯಾರು ಕಾರಣ? ದಿನ ಬೆಳಗಾದರೆ ಯುದ್ಧದ ಬಗ್ಗೆ ಮಾತನಾಡುವ ನೀವು ಬುದ್ಧನ ಶಾಂತಿ ಸಂದೇಶ ಎಲ್ಲಿ ಪಾಲಿಸುತ್ತೀದ್ದೀರಿ? ಎಂದು ಪ್ರಧಾನಿ ಮೋದಿಯನ್ನು ಟೀಕಿಸಿದರು. 

ಎಪಿಜೆ ಅಬ್ದುಲ್ ಕಲಾಂ ಜನ್ಮ ದಿನದಂದು ನಾನು ಮೋದಿಯವರನ್ನು ಪ್ರಶ್ನಿಸುತ್ತೇನೆ. ಮಾತನಾಡುವವರನ್ನು ಯಾಕೆ ತಡೆಯುತ್ತೀರಿ ? ಬಸವಣ್ಣ, ಬುದ್ಧ ಮತ್ತು ಖ್ವಾಜಾ ಬಂದೇನವಾಜ್, ಅಂಬೇಡ್ಕರ್ ಅವರ ದಾರಿಯಲ್ಲಿ ಸಾಗಬೇಕಿದೆ ಎಂದು ಕನ್ಹಯ್ಯ ಹೇಳಿದರು.

ಎಲ್ಲರಿಗೂ ನಮಸ್ಕಾರ ಎಂದು ಕನ್ನಡದಲ್ಲಿ ತಮ್ಮ ಭಾಷಣ ಶುರುಮಾಡಿದ ಡಾ.ಕನ್ಹಯ್ಯ ಕುಮಾರ್, ಕನ್ನಡ ಬಾರದ್ದಕ್ಕೆ ಕ್ಷಮೆ ಕೇಳಿದರು. ಪ್ರಗತಿಪರ ಚಿಂತಕ ಪ್ರೊ.ಆರ್.ಕೆ. ಹುಡಗಿ ಪ್ರಾಸ್ತಾವಿಕ ಭಾಷಣ ಮಾಡಿದರು. 

ಕಾರ್ಯಕ್ರಮದಲ್ಲಿ ಚಿಂತಕಿ ಕೆ.ನೀಲಾ, ಬಸಣ್ಣ ಸಿಂಗೆ, ಮಾರುತಿ ಗೋಕಲೆ, ಪಿ.ವಿಲಾಸಕುಮಾರ, ಲಕ್ಷ್ಮೀಕಾಂತ ಹುಬ್ಬಳ್ಳಿ, ಮೆಹರಾಜ್ ಪಟೇಲ್, ಮೌಲಾ ಮುಲ್ಲಾ, ದತ್ತಾತ್ರೇಯ ಇಕ್ಕಳಕಿ, ಭೀಮಾಶಂಕರ ಮಾಡ್ಯಾಳ ಸೇರಿ ಅನೇಕರು ಹಾಜರಿದ್ದರು.

ಸ್ವಾಗತ ಸಮಿತಿ ಅಧ್ಯಕ್ಷ ಬಿ.ಬಿ.ರಾಂಪುರೆ ಸ್ವಾಗತಿಸಿದರು. ಮಹೇಶ ರಾಠೋಡ ನಿರೂಪಿಸಿದರು.

ಅನ್ನ, ಆಹಾರ, ನೀರಿಗೆ ಬರ ಬಂದಿದ್ದರೆ ಏನಾದರೂ ಪರಿಹಾರ ನೀಡಬಹುದು. ಆದರೆ ಇದೀಗ ಮನುಷ್ಯತ್ವಕ್ಕೆ ಬರ ಬಂದಿದೆ. ಸಂವಿಧಾನದ ರಕ್ಷಣೆಯಿಂದ ಭಾರತದ ಬದುಕು ಬದಲಾಗಬಹುದು. ಸಂವಿಧಾನದ ಮೂಲಕ ಚುನಾಯಿತರಾದ ಜನರು ಸಂವಿಧಾನದ ಕೊಲೆ ನಡೆಸಿದ್ದಾರೆ. ಕಲಬುರಗಿಯಿಂದ ಶಾಂತಿ, ಸೌಹಾರ್ದತೆಯ ಸಂದೇಶ ನೀಡಬೇಕು.
-ಪ್ರೊ. ಆರ್.ಕೆ. ಹುಡಗಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News