ನೆರೆ ಸಂತ್ರಸ್ತರ ಕುರಿತು ಕಾಂಗ್ರೆಸ್ ವರದಿ ಬಗ್ಗೆ ಎನ್.ರವಿಕುಮಾರ್ ಹೇಳಿಕೆಗೆ ದೇಶಪಾಂಡೆ ಆಕ್ರೋಶ

Update: 2019-10-15 16:19 GMT

ಬೆಂಗಳೂರು, ಅ.15: ರಾಜ್ಯದ ನೆರೆ ಸಂತ್ರಸ್ತರ ಪರಿಸ್ಥಿತಿ ಕುರಿತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ) ನೀಡಿರುವ ವರದಿಯು ಸುಳ್ಳು ಅಂಕಿ ಅಂಶಗಳನ್ನು ಒಳಗೊಂಡಿದೆ ಎಂದು ಟೀಕಿಸಿ ಬಿಜೆಪಿ ಮುಖಂಡ, ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಹೇಳಿಕೆಗೆ ಮಾಜಿ ಸಚಿವ ಆರ್.ವಿ.ದೇಶಪಾಂಡೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದೆರಡು ತಿಂಗಳಲ್ಲಿ ರಾಜ್ಯವು ಹಿಂದೆಂದೂ ಕಂಡರಿಯದಂತಹ ಭೀಕರ ಪ್ರವಾಹ ಪರಿಸ್ಥಿತಿಯನ್ನು ಕಂಡಿದೆ. ಅಪಾರ ಪ್ರಮಾಣ ಆಸ್ತಿ-ಪಾಸ್ತಿಗಳಿಗೆ ನಷ್ಟ ಉಂಟಾಗಿದೆ. ಜೊತೆಗೆ ನೂರಾರು ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ರಸ್ತೆಗಳು, ಸೇತುವೆಗಳು ಕೊಚ್ಚಿಕೊಂಡು ಹೋಗಿದ್ದು, ಲಕ್ಷಾಂತರ ಜನ ನಿರಾಶ್ರಿತರಾಗಿದ್ದಾರೆ. ಸದ್ಯಕ್ಕೆ ಸರಿ ಪಡಿಸಲಾಗದಷ್ಟು ನಷ್ಟ ಉಂಟಾಗಿದೆ ಎಂದು ಅವರು ಹೇಳಿದ್ದಾರೆ. ಕೆಪಿಸಿಸಿಯಿಂದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ನಷ್ಟ ಉಂಟಾಗಿರುವ ಬಗ್ಗೆ ಹಾಗೂ ನೀಡಬೇಕಾದ ಪರಿಹಾರಗಳ ಬಗ್ಗೆ ಅಧ್ಯಯನ ಮಾಡಿ ವಾಸ್ತವ ವರದಿಯನ್ನು ಸ್ಥಳಕ್ಕೆ ಭೇಟಿ ನೀಡಿದ ದಿನಾಂಕ, ಛಾಯಾಚಿತ್ರಗಳು ಹಾಗೂ ಕೆಲವು ಪತ್ರಿಕಾ ವರದಿಗಳ ಸಮೇತ ಸರಕಾರಕ್ಕೆ ಸಲ್ಲಿಸಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ವಿಧಾನಪರಿಷತ್ತಿನ ಸದಸ್ಯ ರವಿಕುಮಾರ್, ವರದಿಯ ವಾಸ್ತವತೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆಂದು ಕೆಲವು ಮಾಧ್ಯಮಗಳಲ್ಲಿ ಪ್ರಕಟಗೊಂಡಿದೆ. ಅವರ ಹೇಳಿಕೆ ಸತ್ಯಕ್ಕೆ ದೂರವಾಗಿದ್ದು, ನಾವು ಯಾವ ಪ್ರದೇಶಗಳಿಗೆ ಭೇಟಿ ನೀಡಿದ್ದೇವೆ, ಎಷ್ಟು ನಷ್ಟ ಉಂಟಾಗಿದೆ, ಅಲ್ಲಿಯ ಪರಿಸ್ಥಿತಿ ಏನಿತ್ತು ಎಂಬುದನ್ನು ಕಣ್ಣಾರೆ ಕಂಡಿದ್ದೇವೆ.

ಅಲ್ಲದೇ, ನಾವು ಭೇಟಿ ನೀಡುವ ಪ್ರತಿಯೊಂದು ಸ್ಥಳಗಳಿಗೆ ವಿದ್ಯುನ್ಮಾನ ಹಾಗೂ ಪತ್ರಿಕೆಯವರು ಹಾಜರಿದ್ದು, ಅವರು ಕೂಡ ಪರಿಸ್ಥಿತಿಯನ್ನು ಕಣ್ಣಾರೆ ಕಂಡಿದ್ದಾರೆ. ಅದರ ಛಾಯಾಚಿತ್ರಗಳನ್ನು ವರದಿಯಲ್ಲಿ ನಮೂದಿಸಿದ್ದೇವೆ. ಹೀಗಾಗಿ ನಾವು ನೀಡಿರುವ ವರದಿಯ ಕುರಿತು ಆಕ್ಷೇಪ ವ್ಯಕ್ತಪಡಿಸಿರುವ ರವಿಕುಮಾರ್ ಹೇಳಿಕೆಯನ್ನು ಖಂಡಿಸುತ್ತಿರುವುದಾಗಿ ದೇಶಪಾಂಡೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News