ಉಪ ಚುನಾವಣೆ: ಅಭ್ಯರ್ಥಿಗಳ ಆಯ್ಕೆ ಸಂಬಂಧ ಕಾಂಗ್ರೆಸ್ ನಾಯಕರ ಸುದೀರ್ಘ ಚರ್ಚೆ

Update: 2019-10-15 16:21 GMT

ಬೆಂಗಳೂರು, ಅ.15: ಅನರ್ಹ ಶಾಸಕರಿಂದ ತೆರವಾಗಿರುವ ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಡಿಸೆಂಬರ್ 5ರಂದು ಉಪ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಂಬಂಧ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ನೇತೃತ್ವದಲ್ಲಿ ಹಿರಿಯ ನಾಯಕರು ಹಾಗೂ ವೀಕ್ಷಕರ ಸಭೆಯನ್ನು ನಡೆಸಲಾಯಿತು.

ಮಂಗಳವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಎಐಸಿಸಿ ಕಾರ್ಯದರ್ಶಿ ವಿಷ್ಣುನಾಥನ್, ಮಾಜಿ ಸಿಎಂ ವೀರಪ್ಪ ಮೊಯ್ಲಿ, ಮಾಜಿ ಸಚಿವ ಕೃಷ್ಣಬೈರೇಗೌಡ ಸೇರಿದಂತೆ ಇನ್ನಿತರರ ಮುಖಂಡರು ಪಾಲ್ಗೊಂಡಿದ್ದರು.

ಬೆಂಗಳೂರಿನ ಶಿವಾಜಿನಗರ, ಕೆ.ಆರ್.ಪುರ, ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರಗಳ ಬಗ್ಗೆ ನಾಯಕರು ಸುದೀರ್ಘ ಚರ್ಚೆ ನಡೆಸಿದ್ದು, ಗೆಲ್ಲುವ ಸಾಮರ್ಥ್ಯವಿರುವ ಅಭ್ಯರ್ಥಿಗಳನ್ನೆ ಕಣಕ್ಕಿಳಿಸಲು ಚಿಂತನೆ ನಡೆಸಿದ್ದಾರೆ. ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಯಾರನ್ನು ಅಭ್ಯರ್ಥಿಯನ್ನಾಗಿ ಮಾಡಬೇಕು ಎಂಬ ಗೊಂದಲ ಮುಖಂಡರಲ್ಲಿ ಮನೆ ಮಾಡಿದೆ ಎಂದು ತಿಳಿದು ಬಂದಿದೆ.

ಸಭೆಯ ಆರಂಭದಲ್ಲೆ ಎಲ್ಲ ಕ್ಷೇತ್ರಗಳ ವೀಕ್ಷಕರಿಂದ ಸ್ಥಳೀಯ ಮಟ್ಟದಲ್ಲಿ ಇರುವಂತಹ ವಾತಾವರಣದ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲಾಯಿತು. ಅಲ್ಲದೇ, ಯಾರನ್ನು ಅಭ್ಯರ್ಥಿ ಮಾಡಿದರೆ ಉತ್ತಮ ಎಂಬುದರ ಕುರಿತು ಅಭಿಪ್ರಾಯ ಕ್ರೋಡೀಕರಿಸಲಾಯಿತು. ಆನಂತರ ಕೆಲವು ಕ್ಷೇತ್ರಗಳಿಗೆ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದ್ದು, ಕಾಂಗ್ರೆಸ್ ಹೈಕಮಾಂಡ್ ಒಪ್ಪಿಗೆ ಬಳಿಕ ಅಧಿಕೃತವಾಗಿ ಪ್ರಕಟಿಸಲಾಗುವುದು.

ಶಿವಾಜಿನಗರ-ವಿಧಾನಪರಿಷತ್ ಸದಸ್ಯ ರಿಝ್ವನ್ ಅರ್ಶದ್ ಅಥವಾ ಮಾಜಿ ವಿಧಾನಪರಿಷತ್ ಸದಸ್ಯ ಸಲೀಮ್ ಅಹ್ಮದ್ ಅಥವಾ ಎ.ಆರ್.ಝಾಕಿರ್ ಅಥವಾ ಎಸ್.ಎ.ಹುಸೇನ್. ಹೊಸಕೋಟೆ-ಪದ್ಮಾವತಿ ಭೈರತಿ ಸುರೇಶ್, ಕೆ.ಆರ್.ಪುರ- ವಿಧಾನಪರಿಷತ್ ಸದಸ್ಯ ಎಂ.ನಾರಾಯಣಸ್ವಾಮಿ ಅಥವಾ ಡಿ.ಕೆ.ಮೋಹನ್.

ಮಹಾಲಕ್ಷ್ಮಿ ಲೇಔಟ್-ಬಿಬಿಎಂಪಿ ಸದಸ್ಯ ಶಿವರಾಜ್ ಅಥವಾ ಎನ್‌ಎಸ್‌ಯುಐ ಅಧ್ಯಕ್ಷ ಮಂಜುನಾಥ ಗೌಡ ಅಥವಾ ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ, ಯಶವಂತಪುರ-ಜವರೇಗೌಡ ಅಥವಾ ಎಂ.ರಾಜಕುಮಾರ್, ಚಿಕ್ಕಬಳ್ಳಾಪುರ- ಜಿ.ಎಚ್.ನಾಗರಾಜ್ ಅಥವಾ ಆಂಜಿನಪ್ಪ ಅಥವಾ ಯಲವಳ್ಳಿ ರಮೇಶ್ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿದ್ದಾರೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News