ಬಿಜೆಪಿ ನಾಯಕರಿಗೆ ನೆರೆ ಸಂತ್ರಸ್ತರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ: ವಿ.ಎಸ್.ಉಗ್ರಪ್ಪ

Update: 2019-10-15 16:27 GMT

ಬೆಂಗಳೂರು, ಅ.15: ಬಿಜೆಪಿ ಸರಕಾರ ನೆರೆ ಸಂತ್ರಸ್ತರಿಗೆ ಪರಿಹಾರ ಒದಗಿಸಲು ಕಾಲಾವಕಾಶ ಬೇಕಾಗಿದೆ ಎಂದೇಳಿ, ಕನಿಷ್ಠ 15ದಿನ ನಡೆಯಬೇಕಿದ್ದ ಚಳಿಗಾಲದ ಅಧಿವೇಶನವನ್ನು ಮೂರು ದಿನಕ್ಕೆ ಮೊಟಕುಗೊಳಿಸಿದರು. ಆದರೆ, ಈಗ ಬಿಜೆಪಿಯ ಬಹುತೇಕ ನಾಯಕರು ಮಹಾರಾಷ್ಟ್ರದಲ್ಲಿ ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದಾರೆಂದು ಕಾಂಗ್ರೆಸ್ ನಾಯಕ ವಿ.ಎಸ್.ಉಗ್ರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಮಂಗಳವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ನೆರೆ ಹಾವಳಿಗೆ ಸಿಲುಕಿ 22 ಜಿಲ್ಲೆಗಳ 103 ತಾಲೂಕುಗಳ ಜನತೆ ಎಲ್ಲವನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಇವರಿಗೆ ಪುನರ್‌ವಸತಿ ಕಲ್ಪಿಸುವ ಮೂಲಕ ಬದುಕುವ ಭರವಸೆ ನೀಡಬೇಕಾದ ರಾಜ್ಯ ಬಿಜೆಪಿ ಸರಕಾರದ ನಾಯಕರು ಮಹಾರಾಷ್ಟ್ರದಲ್ಲಿ ಬೀಡುಬಿಟ್ಟಿದ್ದಾರೆ ಎಂದು ತಿಳಿಸಿದರು.

ನೆರೆ ಹಾವಳಿ ಸಂಭವಿಸಿದಾಗಿನಿಂದಲೂ ಕಾಂಗ್ರೆಸ್ ಜವಾಬ್ದಾರಿಯುತ ವಿರೋಧ ಪಕ್ಷವಾಗಿ ತನ್ನ ಕೆಲಸವನ್ನು ಇಲ್ಲಿಯವರೆಗೂ ನಡೆಸಿಕೊಂಡು ಬಂದಿದೆ. ಕೆಪಿಸಿಸಿ ವತಿಯಿಂದ 8 ತಂಡಗಳನ್ನು ರಚಿಸಿಕೊಂಡು ನೆರೆ ಸಂತ್ರಸ್ತರ ಬಳಿಗೆ ತೆರಳಿ, ಅವರ ಅಹವಾಲುಗಳನ್ನು ಕೇಳುವುದು, ತನ್ನ ಇತಿಮಿತಿಯಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಕೆಲಸದಲ್ಲಿ ತೊಡಗಿದೆ ಎಂದು ಅವರು ಹೇಳಿದರು.

ಒಂದು ಲಕ್ಷ ಕೋಟಿ ರೂ.ಹೆಚ್ಚು ನಷ್ಟ: ಕಂಡುಕೇಳರಿಯದ ಜಲಪ್ರವಾಹದಿಂದಾಗಿ 22 ಜಿಲ್ಲೆಗಳಲ್ಲಿ ಅಪಾರವಾದ ನಷ್ಟ ಉಂಟಾಗಿದೆ. ಈ ನಷ್ಟದ ಪ್ರಮಾಣವನ್ನು ನಿಖರವಾಗಿ ಗೊತ್ತು ಮಾಡಲು ಸಾಧ್ಯವಿಲ್ಲವಾದರೂ, ಕೆಪಿಸಿಸಿ ನಡೆಸಿದ ಅಧ್ಯಯನ ಪ್ರಕಾರ ಒಂದು ಲಕ್ಷ ಕೋಟಿ ರೂ.ಗೂ ಹೆಚ್ಚು ನಷ್ಟವಾಗಿರುವುದು ತಿಳಿದುಬಂದಿದೆ. ಈ ಬಗ್ಗೆ ಪುಸ್ತಕದ ರೂಪದಲ್ಲಿ ಕೈಪಿಡಿಯನ್ನು ಬಿಡುಗಡೆ ಮಾಡಿದ್ದೇವೆಂದು ಅವರು ಹೇಳಿದರು.

ಬಿ.ಎಸ್.ಯಡಿಯೂರಪ್ಪ ಆರಂಭದಲ್ಲಿ ನೆರೆ ಹಾವಳಿಯಿಂದಾಗಿ 50 ಸಾವಿರ ಕೋಟಿ ರೂ.ನಷ್ಟವಾಗಿದೆ ಎಂದರು. ನಂತರ 38,400 ಕೋಟಿ ರೂ. ಎಂದು ಕೇಂದ್ರಕ್ಕೆ ವರದಿ ಸಲ್ಲಿಸಿತು. ಈ ವರದಿಯನ್ನು ಕೇಂದ್ರ ಸರಕಾರ ಹಿಂದಕ್ಕೆ ಕಳುಹಿಸಿದಾಗ 35,163 ಕೋಟಿ ರೂ.ನಷ್ಟವಾಗಿದೆ ಎಂದು ಕಳುಹಿಸಿದೆ. ರಾಜ್ಯ ಬಿಜೆಪಿ ನಾಯಕರಿಗೆ ಕೇಂದ್ರದಿಂದ ಪರಿಹಾರವನ್ನು ಪಡೆದುಕೊಳ್ಳಲು ಧೈರ್ಯವಿಲ್ಲ. ಹೀಗಾಗಿ ನಷ್ಟದ ಪ್ರಮಾಣವನ್ನು ಕಡಿತಗೊಳಿಸಿ ವರದಿ ಕೊಟ್ಟಿದೆ ಎಂದು ಅವರು ಟೀಕಿಸಿದರು. 

ಮುಖ್ಯಮಂತ್ರಿ ಬಿ.ಎಸ್.ಯೂಡಿಯೂರಪ್ಪಗೆ ರಾಜ್ಯದಲ್ಲಿ ನೆರೆ ಹಾವಳಿಯಿಂದ ಸಂಭವಿಸಿರುವ ನಷ್ಟದ ಪ್ರಮಾಣವನ್ನು ವೈಜ್ಞಾನಿಕವಾಗಿ ತಿಳಿಯುವಂತಹ ತಾಕತ್ತು ಇಲ್ಲವೆ ಬದ್ಧತೆ ಇದ್ದರೆ ಸರ್ವಪಕ್ಷಗಳನ್ನೊಳಗೊಂಡ ಸತ್ಯ ಶೋಧನಾ ಸಮತಿಯನ್ನು ರಚಿಸಲಿ.

-ವಿ.ಎಸ್.ಉಗ್ರಪ್ಪ, ಮಾಜಿ ಸಂಸದ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News