ಬಂಡೀಪುರ: ಕಾಡು ಪ್ರಾಣಿಗಳ ಹಾವಳಿ ತಡೆಗೆ ದೈವದ ಮೊರೆ ಹೋದ ಅರಣ್ಯ ಇಲಾಖೆ

Update: 2019-10-15 17:02 GMT

ಚಾಮರಾಜನಗರ, ಅ.15: ಹುಲಿ, ಆನೆ, ಚಿರತೆ ಸುಳಿದಾಡುವ ದಟ್ಟ ಅಭಯಾರಣ್ಯದ ಸಮೀಪದ ಗ್ರಾಮಗಳತ್ತ ಬರುವ ಕಾಡು ಪ್ರಾಣಿಗಳ ಹಾವಳಿ ತಡೆಗೆ ಅರಣ್ಯ ಇಲಾಖೆ ಗ್ರಾಮಸ್ಥರೊಂದಿಗೆ ಸೇರಿ ದೈವದ ಮೊರೆ ಹೋಗಿದೆ.

ಕರ್ನಾಟಕ-ತಮಿಳುನಾಡು-ಕೇರಳ ರಾಜ್ಯಗಳಿಗೆ ವಿಸ್ತಾರಗೊಂಡಿರುವ ಚಾಮರಾಜನಗರ ಜಿಲ್ಲೆಯ ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಹುಲಿ, ಚಿರತೆ ಆನೆ, ಕಾಡೆಮ್ಮೆಗಳು ಅಧಿಕವಾಗಿದೆ. ಕಾಡಿನಲ್ಲಿರುವ ವನ್ಯಜೀವಿಗಳು ಕಾಡಂಚಿನ ಗ್ರಾಮಕ್ಕೆ ಬಂದು ದಾಂಧಲೆ ನಡೆಸುತ್ತಿದ್ದು, ಮನುಷ್ಯ ಮತ್ತು ಪ್ರಾಣಿಗಳ ನಡುವೆ ಸಂಘರ್ಷ ನಡೆಯುತ್ತಿದೆ.

ಆದರೆ ದೈವ ಶಕ್ತಿ ಕಾಡು ಪ್ರಾಣಿಗಳ ಹಾವಳಿ ನಿಯಂತ್ರಣ ಮಾಡುತ್ತದೆ ಎನ್ನುವ ನಂಬಿಕೆ ಇಂದಿಗೂ ಜೀವಂತವಾಗಿರುವುದರಿಂದ ಅರಣ್ಯ ಇಲಾಖೆ ದೈವದ ಮೊರೆ ಹೋಗಿದೆ. ಅಲ್ಲದೇ, ಬಂಡೀಪುರದಲ್ಲಿ ಹುಲಿ ದಾಳಿಗೆ ರೈತರಿಬ್ಬರು ಬಲಿಯಾಗಿದ್ದು ಪೂಜೆ ನಿಲ್ಲಿಸಿದ ಕಾರಣಕ್ಕೆ ಎಂಬ ನಂಬಿಕೆ ಗ್ರಾಮಸ್ಥರಲ್ಲಿದೆ.

ಈ ಎಲ್ಲಾ ಬೆಳವಣಿಗೆಯ ಹಿನ್ನೆಲೆ ಅರಣ್ಯ ಇಲಾಖೆಯ ಅಧಿಕಾರಿಗಳು ಕೆಬ್ಬೇಪುರದಲ್ಲಿರುವ ಮಾಳಗಮ್ಮ ದೇವಿಗೆ ಪೂಜೆ ಮಾಡುವ ಮೂಲಕ ಕಾಡು ಪ್ರಾಣಿಗಳ ಹಾವಳಿ ತಡೆಗೆ ಮುಂದಾಗಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿಗಳು, ಕೆಬ್ಬೇಪುರ, ಹುಂಡೀಪುರ, ಚೌಡಹಳ್ಳಿ, ಮಂಗಲ, ಜಕ್ಕಹಳ್ಳಿ ಸೇರಿದಂತೆ ಏಳು ಗ್ರಾಮಗಳ ಮುಖಂಡರೊಂದಿಗೆ ಮಂಗಳವಾರ ಮಾಳಿಗಮ್ಮ ದೇವಿಗೆ ಪೂಜೆ ಮಾಡಿ, ಗ್ರಾಮಸ್ಥರಿಗೆ ಪ್ರಸಾದ ನೀಡಿದ್ದಾರೆ.

ಸರ್ಕಾರಿ ನೌಕರನಾಗಿ ಅಲ್ಲದೆ ಸಾಮಾನ್ಯ ವ್ಯಕ್ತಿಯಾಗಿ ಮಾಳಗಮ್ಮ ದೇವಿಗೆ ಹರಕೆ ಹೊತ್ತಿದ್ದೆ. ಅದರಂತೆ ದೈವಿ ಶಕ್ತಿಯು ಹುಲಿ ಸೆರೆಯಾಗಲು ಕಾರಣವಾಯಿತು. ದೈವಿ ಶಕ್ತಿಯ ಮುಂದೆ ಏನೂ ನಡೆಯದು ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ. ಹರಕೆಯಂತೆ ಮಂಗಳವಾರ ಇಲ್ಲಿಗೆ ಬಂದು ಗ್ರಾಮಸ್ಥರೊಂದಿಗೆ ಪೂಜೆ ಮಾಡಿದ್ದೇವೆ.

-ಟಿ. ಬಾಲಚಂದ್ರ, ನಿದೇರ್ಶಕರು, ಹುಲಿ ಯೋಜನೆ, ಬಂಡೀಪುರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News