ಸಾ.ರಾ.ಮಹೇಶ್ ಸವಾಲು ಸ್ವೀಕರಿಸಿದ್ದೇನೆ, ಚಾಮುಂಡಿ ಬೆಟ್ಟಕ್ಕೆ ಬಂದು ಆರೋಪ ಸಾಬೀತು ಮಾಡಲಿ

Update: 2019-10-15 17:56 GMT

ಮೈಸೂರು,ಅ.15: 25 ಕೋಟಿ ರೂ.ಗೆ ಮಾರಾಟವಾಗಿದ್ದಾರೆ ಎಂದು ಆರೋಪ ಮಾಡಿರುವ ಮಾಜಿ ಸಚಿವ ಸಾ.ರಾ.ಮಹೇಶ್ ಸವಾಲನ್ನು ಸ್ವೀಕರಿಸಿದ್ದು ಅ.17 ರ ಗುರುವಾರ ಬೆಳಗ್ಗೆ 9 ಗಂಟೆಗೆ ಚಾಮುಂಡಿ ಬೆಟ್ಟದಲ್ಲಿ ನಾನು ಇರುತ್ತೇನೆ. ಸಾ.ರಾ.ಮಹೇಶ್ ಬಂದು ಆರೋಪ ಸಾಬೀತು ಪಡಿಸಲಿ ಎಂದು ಅನರ್ಹ ಶಾಸಕ ಎಚ್.ವಿಶ್ವನಾಥ್ ಪ್ರತಿಸವಾಲು ಹಾಕಿದರು.

ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಪದೇ ಪದೇ ಮಾಜಿ ಸಚಿವ ಸಾ.ರಾ.ಮಹೇಶ್ ನನ್ನ ಕುರಿತು 25 ಕೋಟಿ ರೂ.ಗೆ ಮಾರಾಟವಾಗಿದ್ದಾರೆ ಎಂದು ಆರೋಪ ಮಾಡುತ್ತಿದ್ದಾರೆ. ನಾನು ಮಾರಿಕೊಂಡಿದ್ದರೆ ನನ್ನನ್ನು ಕೊಂಡುಕೊಂಡವನು ಇರಬೇಕಲ್ಲ. ಆತನನ್ನು ಗುರುವಾರ ಬೆಳಗ್ಗೆ ಚಾಮುಂಡಿ ಬೆಟ್ಟಕ್ಕೆ ಕರೆದುಕೊಂಡು ಬರಲಿ. ಇಲ್ಲದಿದ್ದರೆ ತಾನು ಹೇಳುತ್ತಿರುವುದು ಸುಳ್ಳು ಎಂದು ಒಪ್ಪಿಕೊಳ್ಳಲಿ ಎಂದು ಹೇಳಿದರು.

ಪ್ರಾಮಾಣಿಕವಾಗಿ ಬದುಕು ನಡೆಸಬೇಕು ಎನ್ನುವವರ ಪಟ್ಟಿಯಲ್ಲಿ ನಾನು ಇದ್ದೇನೆ. ನಮ್ಮದು ಕೃಷಿ ಕುಟುಂಬ. ನನ್ನ ರಾಜಕೀಯ ಜೀವನದಲ್ಲಿ ಎಲ್ಲೂ ಕೊಳ್ಳೆ ಹೊಡೆದವನಲ್ಲ. ನಾನು ಪ್ರಾಮಾಣಿಕವಾಗಿ ಇದ್ದೇನೆ ಎಂದು ಎದೆತಟ್ಟಿ ಹೇಳುತ್ತೇನೆ ಎಂದು ಹೇಳಿದರು.

ನನ್ನ ಮೇಲಿನ ಆರೋಪ ಪ್ರತ್ಯಾರೋಪಗಳಿಂದ ದೂರ ಇರಲು ಪ್ರಯತ್ನಿಸಿದ್ದೆ. ಆದರೆ ನನ್ನನ್ನು ಮಾರಿಕೊಂಡವನು ಎಂದು ಪದೇ ಪದೇ ಹೇಳುತ್ತಿರುವುದರಿಂದ ನನ್ನ ಆತ್ಮಸಾಕ್ಷಿ ಒಪ್ಪುತ್ತಿಲ್ಲ. ಇದನ್ನು ಹೀಗೆ ಬಿಟ್ಟರೆ ಚುನಾವಣೆ ಸಮಯದಲ್ಲಿ ಇದನ್ನೇ ಪ್ರಮುಖ ಅಸ್ತ್ರವನ್ನಾಗಿ ವಿರೋಧಿಗಳು ಬಳಸುತ್ತಾರೆ. ಜನರಿಗೆ ಸತ್ಯ ಏನೆಂದು ಗೊತ್ತಾಗಬೇಕು. ಹಾಗಾಗಿ ಸಾ.ರಾ.ಮಹೇಶ್ ಸವಾಲನ್ನು ಸ್ವೀಕರಿಸಿದ್ದೇನೆ. ನನ್ನ ಮೇಲಿನ ಆರೋಪವನ್ನು ಅವರು ಸಾಬೀತು ಪಡಿಸಬೇಕು ಎಂದರೆ, ನನಗೆ ಹಣ ಕೊಟ್ಟಿರುವವರು, ನನ್ನ ಕೊಂಡುಕೊಂಡಿರುವವರನ್ನು ಕರೆದುಕೊಂಡು ಬಂದು ಸಾಬೀತು ಪಡಿಸಲಿ ಎಂದು ಹೇಳಿದರು.

ಈಡಿ, ಐಟಿ ದಾಳಿ ರಾಜಕೀಯ ಪ್ರೇರಿತ ಎಂಬ ಕಾಂಗ್ರೆಸ್-ಜೆಡಿಎಸ್ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಈಡಿ ಮತ್ತು ಐಟಿ ಸಂವಿಧಾನ ಬದ್ಧವಾಗಿ ಕಾರ್ಯನಿರ್ವಹಿಸುತ್ತಿವೆ. ಇದರ ಬಗ್ಗೆ ಪರಮೇಶ್ವರ್ ಅವರೇ ಸೂಕ್ತವಾದ ಉತ್ತರ ಕೊಟ್ಟಿದ್ದಾರೆ. ಇದಕ್ಕೆ ರಾಜಕೀಯ ಲೇಪನ ಹಚ್ಚಬೇಡಿ ಎಂದಿದ್ದಾರೆ. ಇನ್ನಾದರೂ ಇದನ್ನು ತಿಳಿದುಕೊಂಡರೆ ಸಾಕು ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮುಖಂಡ ಅಶೋಕಪುರಂ ರೇವಣ್ಣ, ಜಿಲ್ಲಾ ನಾಯಕ ಯುವಕರ ಪಡೆ ಅಧ್ಯಕ್ಷ ದ್ಯಾವಪ್ಪ ನಾಯಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News